*ಪತ್ನಿಯ ಶೀಲ ಶಂಕಿಸಿ ಕೊಡಲಿಯಿಂದ ಕೊಚ್ಚಿ ಕೊಲೆ*: *ಮೂವರು ಮಕ್ಕಳನ್ನು ಅನಾಥರನ್ನಾಗಿಸಿದ ಪತಿ*

ಪ್ರಗತಿವಾಹಿನಿ ಸುದ್ದಿ: ಪತ್ನಿಯ ನಡವಳಿಕೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪತಿಯೊಬ್ಬ ಕೊಡಲಿಯಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. 32 ವರ್ಷದ ನೀಲಾಬಾಯಿ ರಾಠೋಡ್ ಕೊಲೆಯಾದ ಮಹಿಳೆ. ಪತಿ ನಾಮದೇವ ರಾಠೋಡ್ ಕೃತ್ಯ ಎಸಗಿ ಸ್ಥಳದಿಂದ ಪರಾರಿಯಾಗಿದ್ದಾನೆ. ದಂಪತಿಗೆ ಮೂವರು ಮಕ್ಕಳಿದ್ದು, ತಾಯಿಯನ್ನು ಕಳೆದುಕೊಂಡು ಮಕ್ಕಳು ಅನಾಥರಾಗಿದ್ದಾರೆ. ಪರಾರಿಯಾಗಿರುವ ಆರೋಪಿಯ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
ಕಾಳಗಿ ತಾಲೂಕಿನ ಕೋಡ್ಲಿ ತಾಂಡಾದ ನೀಲಾಬಾಯಿ ಅವರನ್ನು ಸುಮಾರು ಒಂಬತ್ತು ವರ್ಷಗಳ ಹಿಂದೆ ಕಲಬುರಗಿ ತಾಲೂಕಿನ ಬಸವನ ತಾಂಡಾದ ನಿವಾಸಿ ನಾಮದೇವ ರಾಠೋಡ್ಗೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗೆ ಮೂವರು ಮಕ್ಕಳಿದ್ದಾರೆ. ನೀಲಾಬಾಯಿ ಕಲಬುರಗಿ ನಗರದ ರಾಮಮಂದಿರ ವೃತ್ತದಲ್ಲಿ ತರಕಾರಿ ವ್ಯಾಪಾರ ಮಾಡುತ್ತಾ ಕುಟುಂಬವನ್ನು ಸಾಕುತ್ತಿದ್ದರು. ಈ ನಡುವೆ ಪತಿ ಪತ್ನಿಯ ಮೇಲೆ ಅನುಮಾನ ವ್ಯಕ್ತಪಡಿಸಿ ನಿರಂತರ ಕಿರುಕುಳ ನೀಡುತ್ತಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ನೀಲಾಬಾಯಿ ಮೊಬೈಲ್ಗೆ ಕರೆ ಅಥವಾ ಸಂದೇಶ ಬಂದರೂ ನಾಮದೇವ ಅನುಮಾನದಿಂದ ನೋಡುತ್ತಿದ್ದ. ಇದೇ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ನಾಮದೇವ ಕೃಷಿ, ಕೂಲಿ ಕೆಲಸ ಮಾಡುತ್ತಿದ್ದ. ಪ್ರತಿದಿನ ಮದ್ಯಪಾನ ಮಾಡಿ ಬಂದು ಪತ್ನಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದ ಎಂದು ಕುಟುಂಬಸ್ಥರು ದೂರಿದ್ದಾರೆ.
ಪತಿಯ ಕಿರುಕುಳ ತಾಳಲಾರದೆ ಕೆಲ ದಿನಗಳ ಹಿಂದೆ ನೀಲಾಬಾಯಿ ಮೂವರು ಮಕ್ಕಳೊಂದಿಗೆ ತವರು ಮನೆಗೆ ತೆರಳಿದ್ದರು. ಬಳಿಕ ತಾಂಡಾದ ಹಿರಿಯರು ಮತ್ತು ಕುಟುಂಬಸ್ಥರು ಮಧ್ಯಸ್ಥಿಕೆ ವಹಿಸಿ ದಂಪತಿ ನಡುವೆ ಸಂಧಾನ ನಡೆಸಿದ್ದರು. ಇದರ ನಂತರ ನೀಲಾಬಾಯಿ ಮತ್ತೆ ಗಂಡನ ಮನೆಗೆ ಮರಳಿದ್ದರು. ಆದರೂ ಪತಿಯ ಅನುಮಾನ ಮತ್ತು ಕಿರುಕುಳ ನಿಂತಿರಲಿಲ್ಲ ಎನ್ನಲಾಗಿದೆ.
ಇತ್ತೀಚೆಗೆ ಇದೇ ವಿಚಾರವಾಗಿ ಮನೆಯಲ್ಲಿ ದಂಪತಿ ನಡುವೆ ದೊಡ್ಡ ಜಗಳ ನಡೆದಿತ್ತು. ಬಳಿಕ ಮನೆಯಲ್ಲಿ ಮಲಗಿದ್ದ ನೀಲಾಬಾಯಿ ಮೇಲೆ ನಾಮದೇವ ಕೊಡಲಿಯಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ. ಕೃತ್ಯದ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಾರಿಯಾಗಿರುವ ನಾಮದೇವ ರಾಠೋಡ್ಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಇತ್ತ ಮೃತಳ ಕುಟುಂಬಸ್ಥರು ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ.




