Kannada NewsKarnataka NewsLatest

*ಬೀಚ್‌ನಲ್ಲಿ ಸಮುದ್ರದ ಅಲೆಗೆ ಸಿಲುಕಿ ಇಬ್ಬರು ಪ್ರವಾಸಿಗರು ಸಾವು*

ಪ್ರಗತಿವಾಹಿನಿ ಸುದ್ದಿ: ಸಮುದ್ರದಲ್ಲಿ ಸ್ನಾನಕ್ಕೆ ಇಳಿದಿದ್ದ ಐವರು ಪ್ರವಾಸಿಗರು ಏಕಾಏಕಿ ಅಪ್ಪಳಿಸಿದ ಬೃಹತ್ ಅಲೆಗಳಿಗೆ ಸಿಲುಕಿ ಕೊಚ್ಚಿಹೋಗಿದ್ದಾರೆ. ಈ ಪೈಕಿ ಇಬ್ಬರು ಮೃತಪಟ್ಟಿದ್ದು, ಇಬ್ಬರನ್ನು ರಕ್ಷಿಸಲಾಗಿದೆ. ಮತ್ತೊಬ್ಬ ಪ್ರವಾಸಿಗ ಸಮುದ್ರದಲ್ಲಿ ನಾಪತ್ತೆಯಾಗಿದ್ದಾನೆ. ನಾಪತ್ತೆಯಾದ ವ್ಯಕ್ತಿಗಾಗಿ ಪೊಲೀಸರು ಹಾಗೂ ಕರಾವಳಿ ಕಾವಲುಪಡೆ ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಬೆಂಗಳೂರಿನ ಬೆಳ್ಳಂದೂರಿನ ಖಾಸಗಿ ಕಂಪನಿಯ 16 ಉದ್ಯೋಗಿಗಳ ತಂಡ ಪ್ರವಾಸಕ್ಕಾಗಿ ಗೋಕರ್ಣಕ್ಕೆ ಆಗಮಿಸಿತ್ತು. ದುಬ್ಬಣಶಶಿ ಬೀಚ್‌ನಲ್ಲಿರುವ ಕೋಜೆ ರೆಸಾರ್ಟ್‌ನಲ್ಲಿ ತಂಡ ವಾಸ್ತವ್ಯ ಹೂಡಿತ್ತು. ಇಂದು ಬೆಳಗ್ಗೆ ತಂಡದ ಸದಸ್ಯರು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಕಡಲತೀರದ ಸಮುದ್ರದಲ್ಲಿ ಸ್ನಾನಕ್ಕೆ ಇಳಿದಿದ್ದರು. ಈ ವೇಳೆ ಏಕಾಏಕಿ ಬಂದ ಭಾರೀ ಅಲೆಗಳು ಐವರನ್ನು ಸಮುದ್ರದೊಳಗೆ ಎಳೆದುಕೊಂಡು ಹೋಗಿವೆ. ಈ ದುರ್ಘಟನೆ ಕುಮಟಾ ತಾಲೂಕಿನ ಗೋಕರ್ಣದ ದುಬ್ಬಣಶಶಿ ಬೀಚ್‌ನಲ್ಲಿ ನಡೆದಿದೆ.

ಘಟನೆಯಲ್ಲಿ ಬೆಂಗಳೂರಿನಲ್ಲಿ ವಾಸವಿದ್ದ, ಮೂಲತಃ ಜಾರ್ಖಂಡ್‌ನ ಶೋಭಾ ದಾಸ್ (22) ಹಾಗೂ ಬೆಂಗಳೂರಿನ ಮುಸ್ಲಿಂ ಕಾಲೋನಿ ನಿವಾಸಿ ಮಹಮದ್ ಅಕ್ರಮ್ ಮೃತಪಟ್ಟಿದ್ದಾರೆ. ಬೆಂಗಳೂರಿನ ನಿಶಾಂತ್ ಡಿ.ವಿ. (26) ಮತ್ತು ಮಹಮದ್ ಖಾಸಿಂ ಅವರನ್ನು ರಕ್ಷಿಸಲಾಗಿದೆ. ಆದರೆ, ಆನಂದ ಕುಲಾಲ್ (24) ಸಮುದ್ರದಲ್ಲಿ ನಾಪತ್ತೆಯಾಗಿದ್ದಾರೆ.

ರಕ್ಷಿಸಲಾದ ಇಬ್ಬರನ್ನು ಗೋಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಾಪತ್ತೆಯಾದ ಆನಂದ ಕುಲಾಲ್‌ಗಾಗಿ ಗೋಕರ್ಣ ಪೊಲೀಸರು ಹಾಗೂ ಕರಾವಳಿ ಕಾವಲುಪಡೆ ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ. ಈ ಸಂಬಂಧ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button