*ವಿಮಾನ ಮುರಿದುಬಿತ್ತು ಎಂದೇ ಭಾವಿಸಿದ್ದೆ*: *ಸಹ-ಪೈಲಟ್ನಿಂದ ಮಾರಣಾಂತಿಕ ಹಲ್ಲೆಯ ರೋಚಕ ಮಾಹಿತಿ ಬಿಚ್ಚಿಟ್ಟ ಕ್ಯಾಪ್ಟನ್ ಸ್ಮಿತ್*

ಪ್ರಗತಿವಾಹಿನಿ ಸುದ್ದಿ: ಆಕಾಶದಲ್ಲಿ ಸುಗಮವಾಗಿ ಸಾಗುತ್ತಿದ್ದ ವಿಮಾನ ಏಕಾಏಕಿ ಸಾವಿನ ಸುಳಿಗೆ ಸಿಲುಕಿತ್ತು. ಸಹ-ಪೈಲಟ್ನ ಕೊಡಲಿಯಂತಹ ಆಯುಧದ ದಾಳಿಗೆ ತೀವ್ರವಾಗಿ ಗಾಯಗೊಂಡಿದ್ದರೂ, ಪ್ರಾಣ ಉಳಿಸಿಕೊಳ್ಳಲು ಹೋರಾಡಿದ ಭಾರತೀಯ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚರ್, 170ಕ್ಕೂ ಹೆಚ್ಚು ಮಂದಿಯ ಜೀವಕ್ಕೆ ಎದುರಾಗಿದ್ದ ಅಪಾಯದ ಭೀಕರ ಕ್ಷಣಗಳನ್ನು ಇದೀಗ ಬಿಚ್ಚಿಟ್ಟಿದ್ದಾರೆ. ಅಬುಧಾಬಿಯ ಜಾಯೆದ್ ಮಿಲಿಟರಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಕ್ಯಾಪ್ಟನ್, ಮತ್ತೆ ಪೈಲಟ್ ಸಮವಸ್ತ್ರ ಧರಿಸಿ ಆಕಾಶಕ್ಕೆ ಹಾರುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.
ಸೆಪ್ಟೆಂಬರ್ 30ರಂದು ದುಬೈನಿಂದ ಇಸ್ರೇಲ್ನ ಟೆಲ್ ಅವೀವ್ಗೆ ತೆರಳುತ್ತಿದ್ದ ಫ್ಲೈದುಬೈ ಸಂಸ್ಥೆಯ FZ1073 ವಿಮಾನದಲ್ಲಿ ಈ ಘಟನೆ ನಡೆದಿತ್ತು. ಕಾಕ್ಪಿಟ್ನಲ್ಲಿದ್ದ ಸ್ಮಿತ್ ಮಚ್ಚರ್ ಮೇಲೆ ಸಹ-ಪೈಲಟ್ ದಿಢೀರನೆ ದಾಳಿ ನಡೆಸಿದ್ದ. ಈ ಬಗ್ಗೆ ಸಂದರ್ಶನದಲ್ಲಿ ವಿವರಿಸಿರುವ ಕ್ಯಾಪ್ಟನ್, ಮೊದಲ ಹೊಡೆತ ಬಿದ್ದಾಗ ವಿಮಾನದ ಮೇಲ್ಭಾಗದಲ್ಲಿ ಏನೋ ಕುಸಿದಿರಬಹುದು ಎಂದು ಭಾವಿಸಿದ್ದೆ. ಆದರೆ, ನಿರಂತರವಾಗಿ ಹೊಡೆತಗಳು ಬೀಳುತ್ತಿದ್ದಂತೆ ತನ್ನ ಸಹೋದ್ಯೋಗಿಯೇ ದಾಳಿ ಮಾಡುತ್ತಿರುವುದು ಅರಿವಾಯಿತು ಎಂದು ತಿಳಿಸಿದ್ದಾರೆ.
ಪ್ರಾರ್ಥನೆ ಮಾಡುವುದಾಗಿ ಹೇಳಿ ದಾಳಿ
ಕಾಕ್ಪಿಟ್ನಲ್ಲಿದ್ದ ಮತ್ತೊಬ್ಬ ಕ್ಯಾಪ್ಟನ್ ಹೊರಗೆ ಹೋದ ಬಳಿಕ, ಸಹ-ಪೈಲಟ್ ಪ್ರಾರ್ಥನೆ ಮಾಡುವುದಾಗಿ ಹೇಳಿ ಸ್ಮಿತ್ ಮಚ್ಚರ್ನ ಹಿಂದೆ ಕುಳಿತಿದ್ದ. ಲ್ಯಾಂಡಿಂಗ್ಗೆ ಸಂಬಂಧಿಸಿದ ವಿವರಗಳನ್ನು ಕಂಪ್ಯೂಟರ್ನಲ್ಲಿ ಪರಿಶೀಲಿಸುತ್ತಿದ್ದಾಗ, ತಲೆಯ ಹಿಂಭಾಗಕ್ಕೆ ಕೊಡಲಿಯಂತಹ ಆಯುಧದಿಂದ ಹೊಡೆತ ಬಿದ್ದಿತ್ತು. ತೀವ್ರ ರಕ್ತಸ್ರಾವದಿಂದ ದೃಷ್ಟಿ ಮಂಕಾಗಿದ್ದರೂ, ಸೀಟ್ಬೆಲ್ಟ್ ಬಿಡಿಸಿಕೊಂಡು ದಾಳಿಯನ್ನು ತಡೆಯಲು ಯತ್ನಿಸಿದರು. ನಂತರ ಕಾಕ್ಪಿಟ್ ಬಾಗಿಲು ತೆರೆಯುವ ಸ್ವಿಚ್ ಒತ್ತಿ ಹೊರಗಿದ್ದ ಸಿಬ್ಬಂದಿಯನ್ನು ಸಹಾಯಕ್ಕಾಗಿ ಕೂಗಿ ಕರೆದರು.
ಒಂದು ನಿಮಿಷದಲ್ಲಿ 17 ಸಾವಿರ ಅಡಿ ಕುಸಿತ
ದಾಳಿಯ ನಡುವೆ ಸಹ-ಪೈಲಟ್ ವಿಮಾನದ ನಿಯಂತ್ರಣವನ್ನು ತನ್ನ ವಶಕ್ಕೆ ಪಡೆದು ವಿಮಾನವನ್ನು ಕೆಳಮುಖವಾಗಿ ತಿರುಗಿಸಿದ. ಪರಿಣಾಮ, ವಿಮಾನವು ಒಂದು ನಿಮಿಷದೊಳಗೆ ಸುಮಾರು 17,000 ಅಡಿ ಕೆಳಕ್ಕೆ ಕುಸಿಯಿತು. ಆ ಕ್ಷಣದಲ್ಲಿ ಬದುಕುಳಿಯುವ ಭರವಸೆಯೇ ಕಳೆದುಹೋಗಿತ್ತು ಎಂದು ಸ್ಮಿತ್ ನೆನಪಿಸಿಕೊಂಡಿದ್ದಾರೆ. ಆದರೆ, ತನ್ನ ಮಗ ಮತ್ತು ಮಗಳನ್ನು ನೆನಪಿಸಿಕೊಂಡು ಕೊನೆಯ ಉಸಿರಿರುವವರೆಗೂ ಹೋರಾಡಬೇಕೆಂದು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.
ಪ್ರಯಾಣಿಕರು, ಸಿಬ್ಬಂದಿಯಿಂದ ದಾಳಿಕೋರನ ನಿಯಂತ್ರಣ
ಕಾಕ್ಪಿಟ್ ಬಾಗಿಲು ತೆರೆದ ಬಳಿಕ ಪ್ರಯಾಣಿಕರು ಮತ್ತು ಕ್ಯಾಬಿನ್ ಸಿಬ್ಬಂದಿ ಒಳಗೆ ಧಾವಿಸಿ ದಾಳಿಕೋರನನ್ನು ನಿಯಂತ್ರಿಸಿದರು. ವಿಮಾನದಲ್ಲಿದ್ದ ಮತ್ತೊಬ್ಬ ಆಫ್ಡ್ಯೂಟಿ ಕ್ಯಾಪ್ಟನ್ ತಕ್ಷಣ ನಿಯಂತ್ರಣ ವಹಿಸಿಕೊಂಡು, ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದರು. ಈ ಮೂಲಕ ವಿಮಾನದಲ್ಲಿದ್ದ 170ಕ್ಕೂ ಹೆಚ್ಚು ಮಂದಿಯನ್ನು ಒಳಗೊಂಡಿದ್ದ ದೊಡ್ಡ ದುರಂತವೊಂದು ತಪ್ಪಿತು.
ಮತ್ತೆ ಆಕಾಶಕ್ಕೆ ಹಾರುವ ವಿಶ್ವಾಸ
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸ್ಮಿತ್ ಮಚ್ಚರ್, ತನ್ನ ಪ್ರಾಣ ಉಳಿಸಲು ನೆರವಾದ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅತ್ಯುತ್ತಮ ಚಿಕಿತ್ಸೆ ನೀಡುತ್ತಿರುವ ಯುಎಇ ಸರ್ಕಾರಕ್ಕೂ ಧನ್ಯವಾದ ತಿಳಿಸಿದ್ದಾರೆ. ಇಷ್ಟೊಂದು ಭೀಕರ ಅನುಭವದ ಬಳಿಕವೂ ವಿಮಾನಯಾನದ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ಸಂಪೂರ್ಣ ಗುಣಮುಖನಾಗಿ ಮತ್ತೆ ಪೈಲಟ್ ಸಮವಸ್ತ್ರ ಧರಿಸಿ ಹಾರಾಟ ಆರಂಭಿಸಲು ಕಾಯುತ್ತಿದ್ದೇನೆ ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ, ತನಿಖಾ ಸಂಸ್ಥೆಗಳ ಪ್ರಕಾರ, ಒಮಾನ್ ಮೂಲದ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ ವಿಮಾನವನ್ನು ಅಪಹರಿಸಿ ಇಸ್ರೇಲ್ನ ಬೆನ್ ಗುರಿಯನ್ ವಿಮಾನ ನಿಲ್ದಾಣಕ್ಕೆ ಅಪ್ಪಳಿಸುವ ಸಂಚು ರೂಪಿಸಿದ್ದನೆಂಬ ಶಂಕೆ ಇದೆ. 9/11 ಮಾದರಿಯ ದಾಳಿಗೆ ಯತ್ನಿಸಿದ ಆರೋಪದ ಬಗ್ಗೆಯೂ ತನಿಖೆ ನಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇತರ ಇಬ್ಬರು ಪೈಲಟ್ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂಬ ವರದಿಗಳಿದ್ದು, ತನಿಖೆ ಮುಂದುವರಿದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ


