Latest

“ಕೃಷಿ ಪಂಪ್‌ಸೆಟ್‌ಗೆ ಮೀಟರ್ ಅಳವಡಿಸಿದರೆ ನಾನೇ ಮೊದಲು ಕಿತ್ತೊಗೆಯುವೆ”

ಪ್ರಗತಿವಾಹಿನಿ ಸುದ್ದಿ, ಮೈಸೂರು: ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಕೃಷಿಕರ ಅನುಕೂಲಕ್ಕೆ 10ಎಚ್‌ಪಿ ಪಂಪಸೆಟ್‌ಗಳಿಗೆ ಉಚಿತ ವಿದ್ಯುತ್ ಅನುಷ್ಠಾನಗೊಳಿಸಿದ್ದರು. ಅದನ್ನು ತೆಗೆದು ಕೃಷಿ ಪಂಪ್‌ಸೆಟ್‌ಗೆ ಮೀಟರ್ ಅಳವಡಿಸಿದರೆ ಅದನ್ನು ನಾನೇ ಮೊದಲು ರಾಜ್ಯದಲ್ಲಿ ಕಿತ್ತೊಗೆಯುತ್ತೇನೆಂದು ರಾಜ್ಯ ಕಾಂಗ್ರೆಸ್ ಒಬಿಸಿ ಮೋರ್ಚಾದ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.

ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ ಒಬಿಸಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದೆಲ್ಲೆಡೆ ಇಂದಿಗೂ ಬಂಗಾರಪ್ಪ ಅವರನ್ನು ಪಕ್ಷಾತೀತ ಹಾಗೂ ಜಾತ್ಯತೀತವಾಗಿ ನೆನೆಯುತ್ತಾರೆ. ಅವರು ಕೃಷಿ ಪಂಪ್‌ಸೆಟ್‌ಗಳಿಗೆ ಕೊಟ್ಟ ಉಚಿತ ವಿದ್ಯುತ್ ಕೇವಲ ಒಂದು ಸಮುದಾಯ ಮಾತ್ರವಲ್ಲ ಎಲ್ಲ ರೈತರು ಬಳಸಿಕೊಂಡಿದ್ದಾರೆ. ಅಂತಹದೊಂದು ಮಹತ್ವದ ಯೋಜನೆ ಸ್ಥಗಿತಗೊಳಿಸಲು ಬಿಜೆಪಿ ಸರಕಾರ ಮುಂದಾಗಿದೆ. ಹಾಗೊಂದು ವೇಳೆ ವಿರೋಧದ ನಡುವೆ ಮೀಟರ್ ಅಳವಡಿಸಿದರೆ ಎಲ್ಲೇ ಅಳವಡಿಸಿದರೂ ನಾನೇ ಅದನ್ನು ಕೀಳುತ್ತೇನೆ. ರಾಜ್ಯ ಕಾಂಗ್ರೆಸ್‌ನಡಿಯಲ್ಲೇ ಈ ಕೆಲಸ ಆಗಲಿದೆ ಎಂದು ಕಿಡಿಕಾರಿದರು.

ಹಳೆ ಮೈಸೂರು ಭಾಗದಲ್ಲಿ ಶೇ.52ರಷ್ಟು ಮಂದಿ ಒಬಿಸಿ ಮತದಾರರು ಇಂದಿಗೂ ಕಾಂಗ್ರೆಸ್ ಪರವಾಗಿದ್ದಾರೆ. ಜೋಡೋ ಯಾತ್ರೆಗೆ ಇಲ್ಲಿ ಸಿಕ್ಕ ಅಭೂತ ಪೂರ್ವ ಯಶಸ್ಸು ಮುಂದಿನ ದಿನಗಳಲ್ಲಿ ನಡೆಯುವ ಒಬಿಸಿ ರಾಜ್ಯ ಮಟ್ಟದ ಸಮಾವೇಶಕ್ಕೂ ಸಿಗಬೇಕು. ರಾಹುಲ್‌ ಗಾಂಧಿಯವರನ್ನು ಶಿವಮೊಗ್ಗಕ್ಕೆ ಆಹ್ವಾನಿಸಿ ಅಲ್ಲಿಯೇ ಒಬಿಸಿ ಸಮಾವೇಶ ನಡೆಸಲಾಗುವುದು ಎಂದರು.

ಪಕ್ಷಕ್ಕಾಗಿ ಶ್ರಮವಹಿಸಿ ದುಡಿಯುವವರ ಮುಂದುವರೆಸಿ, ಸೇವೆ ಸಮರ್ಪಣೆ ಮಾಡದವರನ್ನು ಮುಲಾಜಿಲ್ಲದೆ ತೆಗೆದು ಹಾಕಿ, ಒಬಿಸಿ ವಿಭಾಗಕ್ಕೆ ನೂರಾರು ಸಮುದಾಯ ಬರಲಿದ್ದು, ಎಲ್ಲಾ ಸಮುದಾಯಗಳಿಗೂ ಪಕ್ಷ ಸಂಘಟನೆಯಲ್ಲಿ ಅವಕಾಶದ ಹುದ್ದೆ ನೀಡುವ ಜವಾಬ್ದಾರಿಯನ್ನು ನಗರ ಹಾಗೂ ಜಿಲ್ಲಾ ಮಟ್ಟದ ಅಧ್ಯಕ್ಷರು ಹದಿನೈದು ದಿನದ ಒಳಗೆ ಪಟ್ಟಿ ಕಳುಹಿಸಿ ಎಂದರು.

ಬಿಜೆಪಿ ದಿಕ್ಕು ದೆಸೆ ಇಲ್ಲದ ಪಕ್ಷ, ಮಾನವೀಯತೆ ಇಲ್ಲದ ಧರ್ಮ, ಜಾತಿ ಮೇಲೆ ಇರುವ ಪಕ್ಷವಾಗಿದೆ. ಬಂಗಾರಪ್ಪರಿಂದ ಬಿಜೆಪಿಗೆ ಶಕ್ತಿ ಬಂದಿದೆ. ಬಿಜೆಪಿ ಏರೋಪ್ಲೇನ್, ರಾಕೆಟ್ ತೋರಿಸುವ ಕೆಲಸ ಮಾಡುತ್ತಿದೆಯೇ ವಿನಃ ಜನರ ಸಮಸ್ಯೆ ಸರಿಪಡಿಸುತ್ತಿಲ್ಲ. ಹಿಂದೂಗಳಿಗೆ ಮೋಸ ಮಾಡಿದವರೇ ಬಿಜೆಪಿಗರಾಗಿದ್ದು, ಸಮಾಜದಲ್ಲಿ ಆಜಾನ್ ಕೇಳಿ ಏನೂ ಆಗಿರಲಿಲ್ಲ. ಆದರೆ, ಹಿಂದೂಗಳು ರಾತ್ರಿ 10 ಗಂಟೆ ಮೇಲೆ ಪಡುತ್ತಿದ್ದ ಸಂಭ್ರಮಕ್ಕೆ ಆಜಾನ್ ರದ್ದತಿ ಹೆಸರಿನಲ್ಲಿ ಕಡಿವಾಣ ಹಾಕಲಾಗಿದೆ.

ಹೀಗೆ ಭಾವನಾತ್ಮಕ ವಿಚಾರ ತರುವ ಬಿಜೆಪಿಯಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂಬ ಅರಿವು ಜನತೆಗಿದೆ. ಹೀಗಾಗಿ ಒಬಿಸಿಯ ಎಲ್ಲಾ ಸಮುದಾಯದವನ್ನು ಪಕ್ಷದೊಳಗೆ ಸೇರಿಸಿಕೊಂಡು ಸಂಘಟನೆ ಮಾಡಿ ಎಂದು ತಿಳಿಸಿದರು.

ಮೈಸೂರು ಮೃಗಾಲಯಕ್ಕೆ ಬ್ಯಾಟರಿ ಚಾಲಿತ ವಾಹನ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button