*ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆ: ಚಿಕ್ಕಬಳ್ಳಾಪುರದ ಈ ಗ್ರಾಮದಲ್ಲಿ 3 ದಿನ ಶೋಕಾಚರಣೆ ಘೋಷಣೆ*

ಪ್ರಗತಿವಾಹಿನಿ ಸುದ್ದಿ: ಇಸ್ರೇಲ್ ಹಾಗೂ ಅಮೆರಿಕಾ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದು, ಇರಾನ್ ದಲ್ಲಿ 40 ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಈ ನಡುವೆ ಕರ್ನಾಟಕದ ಚಿಕ್ಕಬಳ್ಳಪೌರದಲ್ಲಿಯೂ ಶೋಕಾಚರಣೆ ನಡೆಸಲಾಗುತ್ತಿದೆ.
ಇರಾನ್ ನಾಯಕರಾಗಿದ್ದ ಅಲಿ ಖಮೇನಿ ಮೂಲತಃ ಉತ್ತರ ಪ್ರದೇಶದವರೆಂದು.ಅಲಿ ಖಮೇನಿಗೂ ಕರ್ನಾಟಕದ ಚಿಕ್ಕಬಳ್ಳಾಪುರಕ್ಕೂ ಕೂಡ ನಂಟಿದೆ. ಅಲಿ ಖಮೇನಿ ಹತ್ಯೆ ಬೆನ್ನಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಅಲಿಪುರ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಹತ್ಯೆ ವಿಚಾರ ಹೊರಬಂದ ಬಳಿಕ ಗ್ರಾಮಸ್ಥರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಶೋಕಾಚರಣೆ ನಡೆಸಿದ್ದಾರೆ.
1986ರಲ್ಲಿ ಅಯತೊಲ್ಲಾ ಅಲಿ ಖಮೇನಿ ಅವರು ಅಲಿಪುರ ಗ್ರಾಮಕ್ಕೆ ಆಗಮಿಸಿದ್ದರು. ಈ ಬಗ್ಗೆ ಸ್ಥಳೀಯರಲ್ಲಿ ನೆನಪು ಇನ್ನೂ ಹಸಿರಾಗಿದೆ. ಗ್ರಾಮದಲ್ಲಿರುವ ಮಸೀದಿಯಲ್ಲಿ ಅವರು ಪ್ರಾರ್ಥನೆ ಸಲ್ಲಿಸಿದ್ದರು. ಅಲಿಪುರದ ಸುಮಾರು 20 ಸಾವಿರ ಜನರು ಖಮೇನಿ ಅವರನ್ನು ಧರ್ಮಗುರುವೆಂದು ಗೌರವಿಸುತ್ತಾರೆ. ಖಮೇನಿ ಹೆಸರಲ್ಲಿ ಅಲಿಪುರದಲ್ಲಿ ಇಂದಿಗೂ ಖಾಸಗಿ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ. ಖಮೇನಿ ಅಗಲಿಕೆ ಹಿನ್ನೆಲೆಯಲ್ಲಿ ಅಲಿಪುರ ಗ್ರಾಮದಲ್ಲಿ ಮೂರು ದಿನಗಳ ಕಾಲ ಕರಾಳ ದಿನ ಆಚರಿಸಲಾಗುತ್ತಿದೆ.

