
ಪ್ರಗತಿವಾಹಿನಿ ಸುದ್ದಿ: ಯುಪಿಎಸ್‌ಸಿಗೆ ತಯಾರಿ ನಡೆಸುತ್ತಿದ್ದ 26 ವರ್ಷದ ಯುವತಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
26 ವರ್ಷದ ಜೀವಿತಾ ಕುಸಗೂರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಂಗಳವಾರ ಬೆಳಗ್ಗೆ ಜೀವಿತಾ ತಲೆ ಸುತ್ತು ಬರುತ್ತಿರುವುದಾಗಿ ಹೇಳಿ ಸುಸ್ತಾಗಿ ಕುಳಿತಿದ್ದರು. ತಕ್ಷಣ ಕುಟುಂಬಸ್ಥರು ಆಕೆಯನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಜೀವಿತಾ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಆಕೆ ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ.
ಜೀವಿತಾ ಐಎಎಸ್ ಅಧಿಕಾರಿಯಾಗುವ ಕನಸು ಹೊಂದಿದ್ದು, ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಮಗಳ ಸಾವಿನಿಂದ ಕುಟುಂಬಸ್ಥರು ಆಘಾತಕ್ಕೆ ಒಳಗಾಗಿದ್ದಾರೆ.