*ವಿಶ್ವಕಪ್ ಪಂದ್ಯಕ್ಕೆ ಕ್ಷಣಗಣನೆ; ನಮೋ ಸ್ಟೇಡಿಯಂನಲ್ಲಿ ಇಂಡೋ -ಆಸೀಸ್ ಫೈನಲ್ ಫೈಟ್*

ರಘುನಾಥ ಡಿ.ಪಿ. ಬೆಂಗಳೂರು: ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿಕೊಂಡಿರುವ ಅಹಮದಾಬಾದ್ ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ ಭಾನುವಾರ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ. ವಿಶ್ವದ ಎರಡು ಬಲಿಷ್ಠ ತಂಡಗಳಾದ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಪ್ರತಿಷ್ಠಿತ ಏಕದಿನ ವಿಶ್ವಕಪ್ ಪ್ರಶಸ್ತಿಗಾಗಿ ಹಣಾಹಣಿ ನಡೆಯಲಿದೆ. 12 ವರ್ಷಗಳ ಬಳಿಕ ಪ್ರಶಸ್ತಿ ಸುತ್ತಿಗೇರಿರುವ ಟೀಮ್ ಇಂಡಿಯಾ ಮೂರನೇ ಬಾರಿಗೆ ಚಾಂಪಿಯನ್‌ಪಟ್ಟ ಅಲಂಕರಿಸುವ ಕನಸಿನಲ್ಲಿದೆ. ಅಲ್ಲದೆ, 2003ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಅನುಭವಿಸಿದ ಸೋಲಿಗೂ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. 2 ದಶಕಗಳ ಬಳಿಕ ಇಂಡೋ-ಆಸೀಸ್ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಎದುರಾಗುತ್ತಿವೆ. ಲೀಗ್ ಹಂತದಲ್ಲಿ ಆಸೀಸ್ ತಂಡವನ್ನು ಮಣಿಸಿರುವ ಭಾರತ ಮತ್ತೊಮ್ಮೆ ಸೋಲಿನ ರುಚಿ ತೋರಿಸಿ ಪ್ರಶಸ್ತಿ ಗೆಲುವಿನ ಲೆಕ್ಕಾಚಾರದಲ್ಲಿದೆ.
ವಿಶ್ವ ಕ್ರಿಕೆಟ್ ಪ್ರಿಯರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿರುವ ಫೈನಲ್ ಸಮರ ತೀವ್ರ ಕುತೂಹಲ ಕೆರಳಿಸಿದ್ದು, ಸುಮಾರು 1.32 ಲಕ್ಷ ಪ್ರೇಕ್ಷಕರ ಸಾಮರ್ಥ್ಯ ಹೊಂದಿರುವ ಈ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾವೇ ಜಯಘೋಷ ಮೊಳಗಿಸಲಿ ಅನ್ನೋದೆ ಕೋಟಿ ಕೋಟಿ ಭಾರತೀಯರ ಕನಸಾಗಿದೆ. ನಾಲ್ಕನೇ ಬಾರಿಗೆ ಫೈನಲ್ ಪ್ರವೇಶಿಸಿರುವ ಭಾರತ ತಂಡ ತವರಿನಲ್ಲಿ ಎರಡನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಹಂಬಲದಲ್ಲಿದೆ. 2011 ರಲ್ಲಿ ಎಂಎಸ್ ಧೋನಿ ಸಾರಥ್ಯದ ಭಾರತ ತಂಡ ಕಡೇ ಬಾರಿಗೆ ಚಾಂಪಿಯನ್‌ಪಟ್ಟ ಅಲಂಕರಿಸಿತ್ತು.
- ಸತತ 11ನೇ ಜಯದತ್ತ ರೋಹಿತ್ ಪಡೆ ಚಿತ್ತ
ಟೂರ್ನಿಯಲ್ಲಿ ಇದುವರೆಗೂ ಅಜೇಯ ಸಾಧನೆ ಮಾಡಿರುವ ಭಾರತ ತಂಡ ಸತತ 10 ಪಂದ್ಯಗಳಲ್ಲಿ ಜಯ ದಾಖಲಿಸಿದೆ. ಹೀಗಾಗಿ ಮೇಲ್ನೋಟಕ್ಕೆ ಟೀಮ್ ಇಂಡಿಯಾವೇ ಪ್ರಶಸ್ತಿ ಫೇವರಿಟ್ ತಂಡವಾಗಿದೆ. ವಿರಾಟ್ ಕೊಹ್ಲಿ 10 ಇನಿಂಗ್ಸ್ಗಳಿಂದ 711 ರನ್ ಬಾರಿಸಿದರೆ, ಮೊಹಮದ್ ಶಮಿ ಆಡಿರುವ 6 ಪಂದ್ಯಗಳಿಂದ 23 ವಿಕೆಟ್ ಕಬಳಿಸಿದ್ದಾರೆ. ಈ ಪೈಕಿ ಮೂರು ಬಾರಿಗೆ 5 ವಿಕೆಟ್, ಒಮ್ಮೆ 4 ವಿಕೆಟ್ ಕಬಳಿಸಿದ್ದಾರೆ. ರೋಹಿತ್ ಶರ್ಮ, ಆರಂಭಿಕ ಯುವ ಬ್ಯಾಟರ್ ಶುಭಮಾನ್ ಗಿಲ್ ಅದ್ಭುತ ಆರಂಭ ನೀಡುತ್ತಿದ್ದರೆ, ಮೂರನೇ ಕ್ರಮಾಂಕದಲ್ಲಿ ಕಿಂಗ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕನ್ನಡಿಗ ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್ ಮಧ್ಯಮ ಕ್ರಮಾಂಕದ ಶಕ್ತಿಯಾಗಿದ್ದಾರೆ. ಆಲ್ರೌಂಡರ್ ರವೀಂದ್ರ ಜಡೇಜಾ ತಂಡಕ್ಕೆ ತಮ್ಮದೇ ಕಾಣಿಕೆ ನೀಡುತ್ತಿದ್ದು, ವೇಗಿಗಳಾದ ಜಸ್‌ಪ್ರೀತ್ ಬುಮ್ರಾ, ಮೊಹಮದ್ ಸಿರಾಜ್ ಹಾಗೂ ಸ್ಪಿನ್ನರ್ ಕುಲದೀಪ್ ಯಾದವ್ ಒಳಗೊಂಡ ಬೌಲಿಂಗ್ ಪಡೆ ಉತ್ತಮ ಲಯದಲ್ಲಿದೆ. ಒಂದು ವೇಳೆ ಹೆಚ್ಚುವರಿ ಸ್ಪಿನ್ನರ್‌ಗೆ ಮಣೆ ಹಾಕಿದರೆ, ಸಿರಾಜ್ ಬದಲಿಗೆ ಆರ್.ಅಶ್ವಿನ್ ಸ್ಥಾನ ಪಡೆಯುವ ಸಾಧ್ಯತೆಗಳಿವೆ.
- ತಿರುಗೇಟಿನ ನಿರೀಕ್ಷೆಯಲ್ಲಿ ಆಸೀಸ್
5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಆಸ್ಟ್ರೇಲಿಯಾ, 8ನೇ ಬಾರಿಗೆ ಫೈನಲ್ ಪಂದ್ಯವಾಡುತ್ತಿದ್ದು, ದಾಖಲೆಯ 6ನೇ ಬಾರಿ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ. ವಿಶ್ವದ ಬಲಿಷ್ಠ ತಂಡ ಎನಿಸಿಕೊಂಡಿರುವ ಆಸೀಸ್, 2015ರಲ್ಲಿ ತವರಿನಲ್ಲಿ ನಡೆದ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿತ್ತು. ಲೀಗ್ ಹಂತದ ಪಂದ್ಯದಲ್ಲಿ ಭಾರತದ ಎದುರು ಹೀನಾಯ ಸೋಲು ಕಂಡಿದ್ದ ಆಸೀಸ್, ಆರಂಭಿಕ ಹಂತದಲ್ಲಿ ಅಂಕಪಟ್ಟಿಯಲ್ಲಿ ಕಡೇ ಸ್ಥಾನದಲ್ಲಿತ್ತು. ಬಳಿಕ ಚೇತರಿಕೆ ಕಂಡ ಆಸೀಸ್ ಸತತ 8 ಪಂದ್ಯದಲ್ಲಿ ಜಯ ದಾಖಲಿಸಿ ಫೈನಲ್ ಪ್ರವೇಶಿಸಿದೆ. ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಟ್ರಾವಿಡ್ ಹೆಡ್, ಗ್ಲೆನ್ ಮ್ಯಾಕ್ಸ್ವೆಲ್, ಮಾರ್ಕಸ್ ಲಬುಶೇನ್ ಒಳಗೊಂಡ ಬ್ಯಾಟಿಂಗ್ ಭಾರತಕ್ಕೆ ಅಪಾಯಕಾರಿ ಆಗಬಹುದು. ಉಳಿದಂತೆ, ಆಡಂ ಜಂಪಾ, ಪ್ಯಾಟ್ ಕಮ್ಮಿನ್ಸ್, ಜೋಸ್ ಹ್ಯಾಸಲ್‌ವುಡ್ ಒಳಗೊಂಡ ಬೌಲಿಂಗ್ ಪಡೆ ಕೂಡು ಸ್ಥಿರ ಪ್ರದರ್ಶನ ನೀಡುತ್ತಿದೆ. - 4: ಭಾರತಕ್ಕೆ ಇದು 4ನೇ ಏಕದಿನ ವಿಶ್ವಕಪ್ ಫೈನಲ್ ಪಂದ್ಯವಾಗಿದೆ. ಇದಕ್ಕೂ ಮೊದಲು 1983, 2003, 2011ರಲ್ಲಿ ಫೈನಲ್ ಪ್ರವೇಶಿಸಿತ್ತು.
- 3: ವಿರಾಟ್ ಕೊಹ್ಲಿ (1741ರನ್) ಇನ್ನು ೩ ರನ್‌ಗಳಿಸಿದರೆ, ಏಕದಿನ ವಿಶ್ವಕಪ್‌ನಲ್ಲಿ ಅತಿಹೆಚ್ಚು ರನ್‌ಗಳಿಸಿದ ಆಸೀಸ್‌ನ ರಿಕ್ಕಿ ಪಾಟಿಂಗ್ (1743) ದಾಖಲೆಯನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಲಿದ್ದಾರೆ.
*3: ಜಸ್‌ಪ್ರೀತ್ ಬುಮ್ರಾ, ಇನ್ನು 3 ವಿಕೆಟ್ ಕಬಳಿಸಿದರೆ ಏಕದಿನ ಕ್ರಿಕೆಟ್‌ನಲ್ಲಿ 150ವಿಕೆಟ್ ಪೂರೈಸಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ