*ಬೆಳಗಾವಿಯಲ್ಲಿ ಅಕ್ರಮ ಪಿಸ್ತೂಲ್ ಮಾರಾಟ ಜಾಲ*: *ಇಬ್ಬರ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಅಕ್ರಮ ಶಸ್ತ್ರಾಸ್ತ್ರ ಮಾರಾಟ ಜಾಲವನ್ನು ಪೊಲೀಸರು ಭೇದಿಸಿದ್ದು, ಕಂಟ್ರಿ ಪಿಸ್ತೂಲ್ ಹಾಗೂ ಜೀವಂತ ಗುಂಡುಗಳನ್ನು ಹೊಂದಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಒಂದು ಕಂಟ್ರಿ ಪಿಸ್ತೂಲ್ ಮತ್ತು ಎರಡು ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಕ್ಟೋಬರ್ 30ರಂದು ಅಥಣಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಎಲ್.ಬಿ. ಅಗ್ನಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಅಥಣಿಯ ವಿದ್ಯಾನಗರ ನಿವಾಸಿಯಾಗಿದ್ದು, ಸದ್ಯ ಪಾರ್ಥನಹಳ್ಳಿಯಲ್ಲಿ ವಾಸವಿರುವ 25 ವರ್ಷದ ಆಸೀಫ್ ಅಷ್ಟಾಕಹುಸೇನ್ ದೇಸಾಯಿ ಎಂಬಾತ ಗುಂಡೇವಾಡಿ ಗ್ರಾಮದ ವಿಕ್ರಮ್ ಅಲಿಯಾಸ್ ವಿಕ್ಕಿ ಕಾಂಬಳೆ ಎಂಬಾತನಿಂದ 50 ಸಾವಿರ ರೂಪಾಯಿ ನೀಡಿ ಕಂಟ್ರಿ ಪಿಸ್ತೂಲ್ ಹಾಗೂ ಎರಡು ಜೀವಂತ ಗುಂಡುಗಳನ್ನು ಖರೀದಿಸಿದ್ದ ಎನ್ನಲಾಗಿದೆ.
ನಂತರ ಈ ಶಸ್ತ್ರಾಸ್ತ್ರಗಳನ್ನು ಹುದ್ದಾರ ನಗರದ ಅಂಕುಶ ರಾಜು ರೊಡ್ಡನ್ನವರ ಎಂಬಾತನಿಗೆ ಮಾರಾಟ ಮಾಡುವ ಉದ್ದೇಶದಿಂದ ತನ್ನ ಬಳಿ ಇಟ್ಟುಕೊಂಡಿದ್ದ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮ ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಅಥಣಿ ಪೊಲೀಸರು, ಅಕ್ರಮ ಪಿಸ್ತೂಲ್ ಮಾರಾಟ ಜಾಲದ ಹಿಂದೆ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.




