ಪ್ರಗತಿವಾಹಿನಿ ಸುದ್ದಿ, ಶಿರಸಿ – ಸರ್ಕಾರದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಶಿರಸಿ ಗ್ರಾಮೀಣ ಪೊಲೀಸರು ನಗರದ ಹುಬ್ಬಳ್ಳಿ ರಸ್ತೆಯ ಚಿಪಗಿ ಸರ್ಕಲ್ ಬಳಿ ಬಂಧಿಸಿದ್ದಾರೆ.
ಶಿರಸಿ ಹುಬ್ಬಳ್ಳಿ ರಸ್ತೆಯ ಚಿಪಗಿ ವೃತ್ತದ ಬಳಿ ಶುಕ್ರವಾರ ರಾತ್ರಿ 10.30ರ ಸುಮಾರಿಗೆ ಖಚಿತ ಮಾಹಿತಿ ಮೇರೆಗೆ ಅನ್ನಭಾಗ್ಯ ಯೋಜನೆ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಶಿರಸಿ ಕಸ್ತೂರಬಾ ನಗರದ ಜಾಕೀರ್ ಅಯಬ್ ಖಾನ್ ಹಾಗೂ ನೆಹರು ನಗರದ ಸಲ್ಮಾನ್ ಬಶೀರ್ ಅಹಮದ್ ಬಂಕಾಪುರ ಇವರನ್ನು ಬಂಧಿಸಿ ಇವರಿಂದ ಸುಮಾರು 53,100ರೂ ಮೌಲ್ಯದ ಅಕ್ಕಿಯನ್ನು ಹಾಗೂ ಸಾಗಾಟಕ್ಕೆ ಬಳಸಿದ ಅಶೋಕ್ ಲೈಲ್ಯಾಂಡ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಶಿರಸಿ ತಾಲೂಕಿನ ಆಹಾರ ನಿರೀಕ್ಷಕರ ದೂರಿನ ಮೇರೆಗೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅಗತ್ಯ ವಸ್ತುಗಳ ಕಾಯ್ದೆ 1955ರ ಅಡಿ ಪ್ರಕರಣ ದಾಖಲಿಸಿಕೊಂಡು ಆರೋಪಿತರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಈ ಮಿಂಚಿನ ಕಾರ್ಯಾಚರಣೆ ಯು ಶಿರಸಿ ಡಿ ವೈ ಎಸ್ ಪಿ ರವಿ ನಾಯ್ಕ ಮಾರ್ಗದರ್ಶನ ದಲ್ಲಿ ಸಿ ಪಿ ಐ ಪ್ರದೀಪ ಬಿ ಯು , ಪಿ ಎಸ್ ಐ ಗಳಾದ ನಂಜಾನಾಯ್ಕ, ಶ್ಯಾಮ ಪಾವಸ್ಕರ್ ಎ.ಎಸ್.ಐ ವಿ ಜಿ ರಾಜೇಶ್, ಸಿಬ್ಬಂದಿಗಳಾದ ರಮೇಶ್, ಪ್ರದೀಪ, ಬಸವರಾಜ, ಸಂಗಪ್ಪ, ಕೊಟೇಶ್, ಸತೀಶ್, ಸುನೀಲ್, ಪವಾಡಪ್ಪ ಭಾಗವಹಿಸಿದ್ದರು.
ಸರ್ಕಾರದಿಂದ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯಡಿ ನೀಡಲಾಗುವ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ