ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಡಗಾವಿಯ ದೇವಾಂಗ ನಗರದ ೧ನೇ ಕ್ರಾಸ್ ಬಳಿಯ ಕಿರಾಣಿ ಅಂಗಡಿಯೊಂದರ ಹಿಂಬಾಗದಲ್ಲಿದ್ದ ಸ್ಟೋರ್ ರೂಂನಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ೧೫.೧೧ ಕ್ವಿಂಟಲ್ ಪಡಿತರ ಅಕ್ಕಿ ಜಪ್ತಿ ಮಾಡಲಾಗಿದೆ.
ಜಿಲ್ಲಾಡಳಿತವು ಪಡಿತರ ಚೀಟಿದಾರರಿಗೆ ಯಾವುದೇ ತೊಂದರೆ ಆಗದಂತೆ ಆಹಾರಧಾನ್ಯ ಸಾಗಾಣಿಕೆ ಮಾಡುತ್ತಿದ್ದು, ಬೆಳಗಾವಿ ನಗರ ವ್ಯಾಪ್ತಿಯಲ್ಲಿ ಪಡಿತರ ಚೀಟಿದಾರರು ಪಡಿತರ ಅಕ್ಕಿಯನ್ನು ಮಾರಿಕೊಳ್ಳುತ್ತಿದ್ದಾರೆಂದು ದೂರು ಬಂದ ಹಿನ್ನೆಲೆಯಲ್ಲಿ ದಾಳಿ ಮಾಡಿದಾಗ ಅಕ್ರಮವಾಗಿ ೧೫.೧೧ ಕ್ವಿಂಟಲ್ ಪಡಿತರ ಅಕ್ಕಿ ದೊರಕಿದೆ.
ಅಂಗಡಿ ಮಾಲಕನ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗಿದೆ. ಪಡಿತರ ಚೀಟಿದಾರರು ತಮ್ಮ ಪಾಲಿನ ಆಹಾರ ಧಾನ್ಯವನ್ನು ಮಾರಾಟ ಮಾಡಿಕೊಳ್ಳುವದು ಅಪರಾಧ, ಅಲ್ಲದೇ ಕಿರಾಣಿ ವ್ಯಾಪಾರಸ್ಥರು ಪಡಿತರ ಆಹಾರ ಧಾನ್ಯವನ್ನು ಖರೀದಿಸುವದಾಗಲಿ ಸಂಗ್ರಹ ಮಾಡಿಕೊಳ್ಳುವದಾಗಲಿ ಅಗತ್ಯ ವಸ್ತುಗಳ ಕಾಯ್ದೆ ೧೯೫೫ರಡಿ ಶಿಕ್ಷಾರ್ಹ ಅಪರಾಧವಾಗಿರುತ್ತದೆ.
ಪಡಿತರ ಚೀಟಿದಾರರು ತಮ್ಮ ಪಾಲಿನ ಪಡಿತರ ಆಹಾರ ಧಾನ್ಯವನ್ನು ಉಪಯೋಗಿಸಿಕೊಳ್ಳತಕ್ಕದ್ದು, ಮಾರಾಟ ಮಾಡಿಕೊಳ್ಳುವುದು ಕಂಡು ಬಂದಲ್ಲಿ ತಮ್ಮ ಪಡಿತರ ಚೀಟಿಯನ್ನು ರದ್ದು ಪಡಿಸಲಾಗುವದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ