ಸಿವ್ಹಿಲ್ ಇಂಜನೀಯರಿಂಗ್ ಅಸೋಶಿಯೆಷನ್ ಚಟುವಟಿಕೆಗಳ ಪ್ರಾರಂಭೋತ್ಸವ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಮುಂದಿನ ಸಿವ್ಹಿಲ್ ಇಂಜಿನೀಯರಿಂಗ್ ಕಟ್ಟಡಗಳನ್ನು ಕಟ್ಟುವಲ್ಲಿ ಕಾಂಕ್ರಿಟ್, ನೂತನ ಸಿಮೆಂಟ್ ಹಾಗೂ ಜೆಲ್ಲಿ ಬದಲಿಗೆ ಜಿಯೋ ಕಾಂಕ್ರಿಟ್ ಉಪಯೋಗ ಮಾಡಬೇಕು. ವಿದ್ಯಾರ್ಥಿಗಳು ನೈಸರ್ಗಿಕ ಸಂಪನ್ಮೂಲಗಳನ್ನು ಬಳಸದೆ ಪರ್ಯಾಯ ಮೂಲಗಳಾದ ಹಾರೂಬೂದಿ, ಫೌಂಡ್ರಿ ಮರಳು, ಎಂ-ಸ್ಯಾಂಡ್ ಹಾಗೂ ಕೆಡವಲಾದ ಕಟ್ಟಡಗಳಿಂದ ದೊರೆಯುವ ಜೆಲ್ಲಿ ಹಾಗೂ ಇತರೆ ಸಾಮಗ್ರಿಗಳನ್ನು ಉಪಯೋಗಿಸಿಕೊಂಡು ಭವಿಷ್ಯದಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡಬೇಕೆಂದು ವಾರಂಗಲ್ ಎನ್.ಐ.ಟಿ. ಕಾಲೇಜಿನ ಪ್ರಾಧ್ಯಾಪಕ ಡಾ. ರಾಜೇಶಕುಮಾರ ಜಿ. ಕರೆ ನೀಡಿದರು.
ನಗರದ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ಸಿವ್ಹಿಲ್ ಇಂಜನೀಯರಿಂಗ್ ವಿಭಾಗದ ವಿದ್ಯಾರ್ಥಿಗಳ ಅಸೋಸಿಯೇಷನ್‌ನ ೨೦೧೯-೨೦ ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂಜಿನೀಯರಿಂಗ್ ವ್ಯಾಸಂಗದಲ್ಲಿ ಮೂಲವಾಗಿ ಬೇಕಾದ ದೃಢತೆ, ಛಲಗಾರಿಕೆ, ಶಿಸ್ತು, ಕಠಿಣ ಪರಿಶ್ರಮ, ಆವಿಷ್ಕಾರ, ಕೌಶಲ್ಯಗಳನ್ನು ಸಂಪಾದಿಸಿ, ಇಂಜಿನೀಯರಿಂಗ್ ಕ್ಷೇತ್ರದಲ್ಲಿನ ವಿಫುಲ ಅವಕಾಶಗಳನ್ನು ಬಳಸಿಕೊಂಡು ವೃತ್ತಿಜೀವನದಲ್ಲಿ ಸಫಲತೆ ಹೊಂದಬೇಕೆಂದು ಕರೆ ನೀಡಿದರು.
ಭೂಕಂಪ ನಿರೋಧಕ ಕಟ್ಟಡ
ಗೌರವಾನ್ವಿತ ಅತಿಥಿಗಳಾದ ಬೆಂಗಳೂರಿನ ಸರ್ಕಾರಿ ಎಸ್.ಎಸ್.ಕೆ. ಕಾಲೇಜಿನ ಸಿವ್ಹಿಲ್ ವಿಭಾಗದ ಮುಖ್ಯಸ್ಥ ಡಾ. ಎಂ.ಬಿ. ಪಾಟೀಲ ಮಾತನಾಡಿ, ಭೂಕಂಪವಾದಾಗ ಕಟ್ಟಡಗಳು ಬೀಳದ ಹಾಗೆ ಸಿವ್ಹಿಲ್ ವಿದ್ಯಾರ್ಥಿಗಳು ಜ್ಞಾನವನ್ನು ಗಳಿಸಿಕೊಂಡು ಭೂಕಂಪ ನಿರೋಧಕ ಕಟ್ಟಡಗಳನ್ನು ನಿರ್ಮಿಸಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಪೂಜಾರಿ ಮಾತನಾಡಿ, ವಿದ್ಯಾರ್ಥಿಗಳು ಆರಂಭದಿಂದಲೇ ಸಿವ್ಹಿಲ್ ಸಾಫ್ಟವೇರ್ ಜ್ಞಾನ ಗಳಿಸಬೇಕು. ವಿಶೇಷತೆಯುಳ್ಳ ಕಟ್ಟಡಗಳ ಜ್ಞಾನ, ಪರ್ಯಟನೆ, ಜ್ಞಾನದ ವಿನಿಮಯ ಇತ್ಯಾದಿಗಳ ಮಾಹಿತಿ ಪಡೆದು ಸಮಾಜಕ್ಕೆ ಸೇವೆ ಸಲ್ಲಿಸಬೇಕೆಂದು ತಿಳಿಸಿದರು.
ವಿಭಾಗದ ಮುಖ್ಯಸ್ಥ ಪ್ರೊ. ಅಮರ ಬ್ಯಾಕೋಡಿ ಸ್ವಾಗತಿಸಿ ಅಸೋಶಿಯೇಷನ್ ಚಟುವಟಿಕೆಗಳ ಮಾಹಿತಿ ನೀಡಿದರು. ಕಾಲೇಜಿನ ಆಡಳಿತಾಧಿಕಾರಿ ರಾಜು ಜೋಶಿ, ಡಾ. ಬಿ.ಟಿ. ಸುರೇಶ ಬಾಬು, ಪ್ರೊ. ಎಂ.ವಿ. ಕಂಠಿ, ಅಸೋಸಿಯೇಷನ್ ಮುಖ್ಯಸ್ಥ ಪ್ರೊ. ಗೋಪಾಲ ಸುರಪಲ್ಲಿ, ಪ್ರೊ. ವಿಜಯಕುಮಾರ ಕುಂಬಾರ, ಪ್ರೊ. ನೂರಅಹ್ಮದ ಹೊಸಮನಿ ಸೇರಿದಂತೆ ಎಲ್ಲ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿಜಯಲಕ್ಷ್ಮಿ ಕುದರಿ ಪರಿಚಯಿಸಿದರು. ಅಥಿಖಾ ಬೇಗ ನಿರೂಪಿಸಿದರು. ಪ್ರಿಯಾಂಕಾ ಹೆಗಡೆ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ