ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗ್ರೀಕರು, ಖಿಲ್ಜಿ, ಮೊಘಲರು, ಬ್ರಿಟಿಷರು ಸೇರಿದಂತೆ ಅನೇಕ ಪರಕೀಯರ ದಾಳಿಯಿಂದ ಆಘಾತಕ್ಕೊಳಗಾದ ಭಾರತವನ್ನು ಮತ್ತೊಮ್ಮೆ ಜಗತ್ತಿನ ಸರ್ವಶಕ್ತ ದೇಶವಾಗಿ ಹೊರಹೊಮ್ಮಲು ಮತ್ತು ವಿಶ್ವಗುರುವಾಗಿ ಜಗತ್ತಿನ ನೇತೃತ್ವ ವಹಿಸಲು ಸಂತರ ಮಾರ್ಗದರ್ಶನ ಅವಶ್ಯವಾಗಿದೆ ಎಂದು ಕನೇರಿಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಶನಿವಾರ ನಗರದ ಕೆಎಲ್‍ಇ ಜಿರಗೆ ಭವನದಲ್ಲಿ ವಿಶ್ವ ಹಿಂದು ಪರಿಷತ್ ನೇತೃತ್ವದಲ್ಲಿ ಆಯೋಜಿಸಲಾದ ಶ್ರೀರಾಮ ಜನ್ಮಭೂಮಿ ಮಂದಿರ ನಿಧಿ ಸಮರ್ಪಣಾ ಅಭಿಯಾನದ ನಿಮಿತ್ತ ಏರ್ಪಡಿಸಿದ ಸಂತ ಸಮಾವೇಶದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ಸ್ವಾತಂತ್ರ್ಯಾ ನಂತರ ಆಡಳಿತಕ್ಕೆ ಸರ್ಕಾರಗಳು ದೇಶದ ಭವ್ಯತೆಯನ್ನು ಸಾರುವ ಸಂಗತಿಗಳನ್ನು ಮತ್ತೆ ಬಿತ್ತಿ ಭಾರತವನ್ನು ಉನ್ನತಿ ಸ್ಥಿತಿಗೆ ಒಯ್ಯುವ ಬದಲು, ಜಾತ್ಯತೀತ ಎಂಬ ಹುಸಿ ಸಿದ್ದಾಂತಕ್ಕೆ ಜೋತು ಬಿದ್ದು ದೇಶವನ್ನು ಲೂಟಿ ಹೊಡೆದ ಖಿಲ್ಜಿ, ಮೋಘಲರು, ಮತ್ತು ಸಾಕಷ್ಟು ಮಾಹಿತಿಗಳನ್ನು ಪಠ್ಯದ ಮೂಲಕ ಶಿಕ್ಷಣ ನೀಡಿರುವುದು ಭಾರತೀಯರಲ್ಲಿ ಗುಲಾಮ ಮನಸ್ಥಿತಿ ಬೇರೂರುವಂತೆ ಮಾಡಿದೆ ಎಂದರು.
300 ವರ್ಷ ಆಳಿದ ವಿಜಯನಗರದ ಸಾಮ್ರಾಜ್ಯದ ಬಗ್ಗೆ ನಮಗೆ ಕೇವಲ ಬೆರಳಣಿಕೆಯ ಸಾಲುಗಳಲ್ಲಿ ಮಾತ್ರ ಮಾಹಿತಿ ಪಠ್ಯದಲ್ಲಿ ದೊರೆಯುತ್ತದೆ. ಮೌರ್ಯರು, ಚಾಲುಕ್ಯರು ಭಾರತವನ್ನು ಆರ್ಥಿಕ, ಶೈಕ್ಷಣಿಕ, ಕಲೆ ಸೇರಿದಂತೆ ಎಲ್ಲ ಕ್ಷೇತ್ರಗಳಿಂದಲೂ ಶ್ರೀಮಂತ ರಾಷ್ಟ್ರ ಎಂದು ಜಗತ್ತಿಗೆ ಸಾರಿದರು. ಆದರೂ ಇವರ ಬಗ್ಗೆ ನಮ್ಮ ಶಿಕ್ಷಣ ವ್ಯವಸ್ಥೆ ಮೂಲಕ ಮಕ್ಕಳು ಕಲಿಯಲು ಅವಕಾಶ ನೀಡದಂತೆ ಎಡಪಂಥಿಯರು ತಂತ್ರ ರೂಪಿಸಿ ಭಾರತೀಯರಲ್ಲಿ ಭಾರತದ ಬಗ್ಗೆಯೆ ಅಸಹ್ಯ ಹುಟ್ಟುವಂತೆ ತಂತ್ರ ರೂಪಿಸಿದ್ದಾರೆ. ಅದರ ಫಲವಾಗಿಯೆ ಪ್ರಸಕ್ತ ದಿನಗಳಲ್ಲಿ ದೇಶದ ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ರಾಷ್ಟ್ರದ್ರೋಹಿ ಚಟುವಟಿಕೆಗಳು ಜರುಗಿರುವುದನ್ನು ಕಾಣುತ್ತೇವೆ ಎಂದರು.
ಶ್ರೀರಾಮ ಮಂದಿರ ನಿರ್ಮಾಣ ಕೇವಲ ರಾಮನ ಆರಾಧನೆಗೆ ಮೀಸಲಾಗಿಲ್ಲ. ಶ್ರೀರಾಮ ಮಂದಿರವು ಮತಾಂತರ, ಅಸ್ಪøಶ್ಯತೆ, ಜಾತೀಯತೆ ಸೇರಿದಂತೆ ಸಮಾಜಕ್ಕೆ ಅಂಟಿದ ಅನೇಕ ಸಾಮಾಜಿಕ ಪಿಡುಗುಗಳಿಗೆ ತೊಡೆದು ಹಾಕುವ ರಾಷ್ಟ್ರ ಮಂದಿರವಾಗಲಿದೆ. ಆದ್ದರಿಂದ ಶ್ರೀರಾಮ ಮಂದಿರ ನಿರ್ಮಾಣದ ನಿಧಿ ಸಮರ್ಪಣಾ ಅಭಿಯಾನಕ್ಕೆ ಎಲ್ಲ ಸಾಧು ಸಂತರು ಮತ್ತು ಸ್ವಾಮೀಜಿಗಳು ಜೊತೆಗೂಡಬೇಕು ಎಂದು ತಿಳಿಸಿದರು.
ನಿಡಸೋಸಿಯ ಜಗದ್ಗುರು ಪಂಚಮಲಿಂಗೇಶ್ವರ ಸ್ವಾಮೀಜಿ, ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಗದಗಿನ ಶಿವಾನಂದ ಜಗದ್ಗುರು ಸದಾಶಿವಾನಂದ ಸ್ವಾಮೀಜಿ. ರಾಯಭಾಗದ ಅಮರೇಶ್ವರ ಮಹಾರಾಜರು, ನಿಲಜಿಯ ಅಲೌಕಿಕ ಜ್ಞಾನ ಮಂದಿರ ಶಿವಾನಂದ ಗುರೂಜಿ, ವಿಎಚ್‍ಪಿಯ ದಕ್ಷಿಣ ಮಧ್ಯ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ, ಆರ್‍ಎಸ್‍ಎಸ್ ಕರ್ನಾಟಕ ಉತ್ತರ ಪ್ರಾಂತ ಕಾರ್ಯವಾಹ ರಾಘವೇಂದ್ರ ಕಾಗವಾಡ, ಶ್ರೀರಾಮ ಜನ್ಮಭೂಮಿ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಕರ್ನಾಟಕ ಉತ್ತರ ಪ್ರಾಂತ ಸಹ ಪ್ರಮುಖ ಮನೋಹರ ಮಠದ, ಕೃಷ್ಣ ಭಟ್ ಇದ್ದರು.
ಧರ್ಮ ಜಾಗಾರಣ ಉತ್ತರ ಪ್ರಾಂತ ಸಂಯೋಜಕ ದಿಲೀಪ್ ವೇರ್ಣೇಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಚ್ಯುತ್ ಕುಲಕರ್ಣಿ ಮತ್ತು ರೋಹಿಣಿ ದೇಶಪಾಂಡೆ ಪ್ರಾರ್ಥಿಸಿದರು. ಚಿಕ್ಕೋಡಿ ಜಿಲ್ಲಾಧ್ಯಕ್ಷ ಆರ್.ಕೆ.ಬಾಗಿ ಸ್ವಾಗತಿಸಿದರು. ಬೆಳಗಾವಿ ಜಿಲ್ಲಾಧ್ಯಕ್ಷ ಶ್ರೀಕಾಂತ ಕದಂ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ