
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು : ಮಧ್ಯಮ ಕ್ರಮಾಂಕದ ಬ್ಯಾಟರ್ ಗಳಾದ ಶ್ರೇಯಸ್ ಅಯ್ಯರ್ (128ರನ್, 94 ಎಸೆತ, 10 ಬೌಂಡರಿ, 5 ಸಿಕ್ಸರ್) ಹಾಗೂ ಸ್ಥಳೀಯ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ (102 ರನ್, 64 ಎಸೆತ, 11ಬೌಂಡರಿ, 4 ಸಿಕ್ಸರ್) ಜೋಡಿಯ ಶತಕದಾಟದ ನೆರವಿನಿಂದ ಭಾರತ ತಂಡ ಏಕದಿನ ವಿಶ್ವಕಪ್ ಟೂರ್ನಿಯ ಕಡೇ ಲೀಗ್ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವನ್ನು 160 ರನ್ ಗಳಿಂದ ಸೋಲಿಸಿತು.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಅಬ್ಬರಿಸಿದ ಭಾರತ ತಂಡ ಟೂರ್ನಿಯ ಲೀಗ್ ಹಂತದಲ್ಲಿ ಸತತ 9ನೇ ಜಯದೊಂದಿಗೆ ಅಜೇಯ ಸಾಧನೆ ಮಾಡಿತು. ಬುಧವಾರ (ನವೆಂಬರ್15) ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.
ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಆರಂಭಿಕರಾದ ನಾಯಕ ರೋಹಿತ್ ಶರ್ಮ (61ರನ್) ಹಾಗೂ ಯುವ ಬ್ಯಾಟರ್ ಶುಭಮಾನ್ ಗಿಲ್ (51) ಜೋಡಿ ಉತ್ತಮ ಆರಂಭ ನೀಡಿತು. ಸಿಲಿಕಾನ್ ಸಿಟಿಯ ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿ (51) ಅರ್ಧ ಶತಕ ಸಿಡಿಸಿದರು. ಬಳಿಕ ಜೊತೆಯಾದ ಶ್ರೇಯಸ್ ಅಯ್ಯರ್ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಜೋಡಿ 4 ವಿಕೆಟ್ಗೆ ಪೇರಿಸಿದ 208 ರನ್ ಜೊತೆಯಾಟದ ಫಲವಾಗಿ ಭಾರತ ತಂಡ 4 ವಿಕೆಟ್ಗೆ 410 ರನ್ ಪೇರಿಸಿತು. ಬಳಿಕ ಭಾರತದ ಬೌಲರ್‌ಗಳ ಸಂಘಟಿತ ಹೋರಾಟದ ಎದುರು ಮಂಕಾದ ನೆದರ್ಲೆಂಡ್ಸ್ 47.5 ಓವರ್‌ಗಳಲ್ಲಿ 250 ರನ್ ಗಳಿಗೆ ಸರ್ವಪತನ ಕಂಡಿತು. ಭಾರತದ ಪರ ಜಸ್ ಪ್ರೀತ್ ಬುಮ್ರಾ, ಮೊಹಮದ್ ಸಿರಾಜ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್ ತಲಾ 2 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್: ಭಾರತ: 4 ವಿಕೆಟ್ ಗೆ 410 (ಶ್ರೇಯಸ್ ಅಯ್ಯರ್ 128*, ಕೆಎಲ್ ರಾಹುಲ್ 102, ರೋಹಿತ್ ಶರ್ಮ 61, ವಿರಾಟ್ ಕೊಹ್ಲಿ 51, ಶುಭಮಾನ್ ಗಿಲ್ 51, ಬಾಸ್ ಡೀ ಲೀಡೆ 82ಕ್ಕೆ 2), ನೆದರ್ಲೆಂಡ್ಸ್ :47.5 ಓವರ್‌ಗಳಲ್ಲಿ 250(ತೇಜಾ ಎನ್ 54, ಬುಮ್ರಾ 33ಕ್ಕೆ 2, ಮೊಹಮದ್ ಸಿರಾಜ್ 29ಕ್ಕೆ 2, ಕುಲದೀಪ್ ಯಾದವ್ 41ಕ್ಕೆ2, ರವೀಂದ್ರ ಜಡೇಜಾ 49ಕ್ಕೆ 2)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ