
ಏಕದಿನ ವಿಶ್ವಕಪ್ ನಲ್ಲಿ ಪಾಕ್ ಎದುರು ಮುಂದುವರಿದ ಟೀಮ್ ಇಂಡಿಯಾ ಅಜೇಯ ಓಟ
ಪ್ರಗತಿವಾಹಿನಿ ಸುದ್ದಿ; ಅಹಮದಾಬಾದ್ : ಬಲಿಷ್ಠ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಪ್ರಾಬಲ್ಯ ಸಾಧಿಸಿದ ಭಾರತ ತಂಡ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿತು. ಈ ಮೂಲಕ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡ ಪಾಕ್ ಎದುರು ಅಜೇಯ ಓಟ ಮುಂದುವರಿಸಿತು. ಏಕದಿನ ವಿಶ್ವಕಪ್ ನಲ್ಲಿ ಭಾರತಕ್ಕೆ 8ನೇ ಗೆಲುವು ಇದಾಗಿದ್ದು, ಪಾಕ್ ತಂಡ 8 ನೇ ಮುಖಾಮುಖಿಯಲ್ಲೂ ಮುಗ್ಗರಿಸಿತು.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಭಾರತ ತಂಡದ ನಾಯಕ ರೋಹಿತ್ ಶರ್ಮ, ಪಾಕ್ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದರು. ಭಾರತದ ಸಂಘಟಿತ ದಾಳಿಗೆ ನಲುಗಿದ ಪಾಕ್ 42.5 ಓವರ್‌ಗಳಲ್ಲಿ 191 ರನ್‌ಗಳಿಗೆ ಸರ್ವಪತನ ಕಂಡಿತು. ಈ ಸುಲಭ ಮೊತ್ತ ಬೆನ್ನಟ್ಟಿದ ಭಾರತ ತಂಡ, 30.3 ಓವರ್‌ಗಳಲ್ಲಿ 3 ವಿಕೆಟ್ಗೆ 192 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಭಾರತ ತಂಡ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು.

ಭಾರತದ ಪರ ನಾಯಕ ರೋಹಿತ್ ಶರ್ಮ 63 ಎಸೆತಗಳಲ್ಲಿ 86 ರನ್ ಗಳಿಸಿದರೆ, ಶ್ರೇಯಸ್ ಅಯ್ಯರ್ ಅಜೇಯ 53 ರನ್ ಸಿಡಿಸಿದರು. 19 ರನ್‌ಗಳಿಗೆ 2 ವಿಕೆಟ್ ಕಬಳಿಸಿದ ಜಸ್ ಪ್ರೀತ್ ಬೂಮ್ರಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಸಂಕ್ಷಿಪ್ತ ಸ್ಕೋರ್: ಪಾಕಿಸ್ತಾನ: 42.5 ಓವರ್‌ಗಳಲ್ಲಿ 191 (ಬಾಬರ್ ಅಜಮ್ 50, ಮೊಹಮದ್ ರಿಜ್ವಾನ್ 49, ಬೂಮ್ರಾ 19ಕ್ಕೆ 2, ಮೊಹಮದ್ ಸಿರಾಜ್ 50ಕ್ಕೆ 2, ಹಾರ್ದಿಕ್ ಪಾಂಡ್ಯ 34ಕ್ಕೆ 2, ಕುಲದೀಪ್ ಯಾದವ್ 35ಕ್ಕೆ2, ರವೀಂದ್ರ ಜಡೇಜಾ 38ಕ್ಕೆ 2), ಭಾರತ: 30.3 ಓವರ್‌ಗಳಲ್ಲಿ 3 ವಿಕೆಟ್ಗೆ 192 (ರೋಹಿತ್ ಶರ್ಮ 86, ಶುಭಮಾನ್ ಗಿಲ್ 16, ವಿರಾಟ್ ಕೊಹ್ಲಿ 16, ಶ್ರೇಯಸ್ ಅಯ್ಯರ್ 53, ಕೆಎಲ್ ರಾಹುಲ್ 19,ಶಾಹಿನ್ ಅಫ್ರಿದಿ 36ಕ್ಕೆ 2).
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ