Kannada NewsKarnataka NewsLatestNational

*ಇಂಡಿಗೋ ವಿಮಾನಕ್ಕೆ ಹೈಜಾಕ್ ಬೆದರಿಕೆ*

ಪ್ರಗತಿವಾಹಿನಿ ಸುದ್ದಿ: ಇಂಡಿಗೋ ವಿಮಾನದಲ್ಲಿ ಹೈಜಾಕ್ ಪತ್ರ ಪತ್ತೆಯಾಗಿದ್ದು, ಆತಂಕದ ಬೆನ್ನಲ್ಲೇ ವಿಮಾನ ವಾಪಸ್ ಆದ ಘಟನೆ ನಡೆದಿದೆ.

ಬೆಂಗಳೂರಿನಿಂದ ಲಕ್ನೋಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಟೇಕ್-ಆಫ್ ಆದ ಕೆಲವೇ ನಿಮಿಷಗಳಲ್ಲಿ ಶೌಚಾಲಯದೊಳಗೆ ವಿಮಾನ ಅಪಹರಣದ (ಹೈಜಾಕ್) ಬೆದರಿಕೆ ಇರುವ ಕೈಬರಹದ ಪತ್ರವೊಂದು ಪತ್ತೆಯಾಗಿದೆ.

ಪ್ರಯಾಣಿಕರು ಶೌಚಾಲಯಕ್ಕೆ ಹೋದಾಗ ಇದನ್ನು ಗಮನಿಸಿದ್ದಾರೆ. ತಕ್ಷಣ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ವಿಮಾನವನ್ನು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ತುರ್ತು ಭೂಸ್ಪರ್ಶ ಮಾಡಲಾಯಿತು.

ಇಂಡಿಗೋ 6E-451ನ ಶೌಚಾಲಯದಲ್ಲಿ ಬೆದರಿಕೆ ಪತ್ರ ಸಿಕ್ಕಿದೆ. ಈ ಘಟನೆಯ ನಂತರ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ‘ಪೂರ್ಣ ತುರ್ತುಸ್ಥಿತಿ’ಯನ್ನು (full emergency) ಘೋಷಿಸಲಾಯಿತು.

ಕಠಿಣ ಸುರಕ್ಷತಾ ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ, ಭದ್ರತಾ ಪ್ರಕ್ರಿಯೆಗಳನ್ನು ಕೈಗೊಳ್ಳಲು ಪೈಲಟ್‌ ಗಳು ತಕ್ಷಣವೇ ವಿಮಾನವನ್ನು ಬೆಂಗಳೂರಿನತ್ತ ಮರಳಿಸಿದರು. “ನವೆಂಬರ್ 7, 2026 ರಂದು ಬೆಂಗಳೂರಿನಿಂದ ಲಕ್ನೋಗೆ ತೆರಳುತ್ತಿದ್ದ ಇಂಡಿಗೋ ವಿಮಾನ 6E 451 ರಲ್ಲಿ ಭದ್ರತಾ ಬೆದರಿಕೆ ಕಂಡುಬಂದಿದೆ. ನಿಗದಿತ ಕಾರ್ಯಾಚರಣಾ ವಿಧಾನದ (SOP) ಪ್ರಕಾರ, ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣವೇ ಮಾಹಿತಿ ನೀಡಲಾಯಿತು. ಭದ್ರತಾ ತಪಾಸಣೆಗಳನ್ನು ನಡೆಸಲು ವಿಮಾನವನ್ನು ಹೊರಟ ಸ್ಥಳಕ್ಕೇ ಮರಳಿಸಲು ಪೈಲಟ್‌ ಗಳು ನಿರ್ಧರಿಸಿದರು,” ಎಂದು ಇಂಡಿಗೋ ವಕ್ತಾರರು ತಿಳಿಸಿದ್ದಾರೆ.

“ನಮ್ಮ ಗ್ರಾಹಕರಿಗೆ ಉಂಟಾದ ಅನಾನುಕೂಲಕ್ಕಾಗಿ ನಾವು ವಿಷಾದಿಸುತ್ತೇವೆ. ಅವರಿಗೆ ಲಘು ಉಪಹಾರಗಳನ್ನು ಒದಗಿಸುವುದು ಮತ್ತು ಆಗಾಗ್ಗೆ ಮಾಹಿತಿ ನೀಡುವ ಮೂಲಕ ಈ ತೊಂದರೆಯನ್ನು ಕಡಿಮೆ ಮಾಡಲು ನಾವು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಅಗತ್ಯ ಅನುಮತಿಗಳು ದೊರೆತ ನಂತರ ವಿಮಾನವು ತನ್ನ ಪ್ರಯಾಣವನ್ನು ಮುಂದುವರಿಸಲಿದೆ,” ಎಂದು ಅವರು ಹೇಳಿದರು.

ಸದ್ಯ ವಿಮಾನದಲ್ಲಿದ್ದ ಎಲ್ಲಾಅ 178 ಪ್ರಯಾಣಿಕರು ಸುರಕ್ಷಿತವಾಗಿದ್ದು, ಪ್ರಯಾಣಕ್ಕೆ ಬದಲಿ ವ್ಯವಸ್ಥೆ ಮಾಡಲಾಗಿದೆ.

Related Articles

Back to top button