CrimeKannada NewsKarnataka News

*ಏಳು ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಕಣಿವೆಯಲ್ಲಿ ಪತ್ನಿ, ಅತ್ತೆಯ ಶವ ಪತ್ತೆ*

ಪ್ರಗತಿವಾಹಿನಿ ಸುದ್ದಿ: ಸರಣಿ ಏಳು ಕೊಲೆಗಳ ಆರೋಪ ಎದುರಿಸುತ್ತಿರುವ ಇಂದುಶೇಖರ್ ಪ್ರಕರಣದಲ್ಲಿ ಪೊಲೀಸರಿಗೆ ಮಹತ್ವದ ಸುಳಿವು ಲಭಿಸಿದೆ. ತಮಿಳುನಾಡಿನ ಸೇಲಂ ಜಿಲ್ಲೆಯ ಏರ್ಕಾಡ್ ಕಣಿವೆಯಲ್ಲಿ ಆರೋಪಿ ಪತ್ನಿ ಸುನೀತಾ ಹಾಗೂ ಅತ್ತೆ ರೂಪವತಿ ಅವರ ಮೃತದೇಹಗಳು ಪತ್ತೆಯಾಗಿವೆ.

ಆರೋಪಿಯನ್ನು ಸ್ಥಳಕ್ಕೆ ಕರೆದೊಯ್ದು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಬೆಡ್‌ಶೀಟ್ ಮತ್ತು ಸೀರೆಗಳಲ್ಲಿ ಸುತ್ತಿಡಲಾಗಿದ್ದ ಎರಡು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮಳೆ ಬಂದಾಗ ಶವಗಳು ಕೊಚ್ಚಿಹೋಗಿ ಸಾಕ್ಷ್ಯ ನಾಶವಾಗಬಹುದು ಎಂಬ ಉದ್ದೇಶದಿಂದ ಕಣಿವೆಯಲ್ಲಿ ಎಸೆದಿದ್ದಾಗಿ ಆರೋಪಿ ವಿಚಾರಣೆ ವೇಳೆ ತಿಳಿಸಿದ್ದ ಎನ್ನಲಾಗಿದೆ.

ಸುಮಾರು ಮೂರು ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹಾಗೂ ಕೌಟುಂಬಿಕ ಕಲಹ ಕೊಲೆಗಳಿಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅಪ್ರಾಪ್ತ ಮಗಳನ್ನೂ ಸಂಚಿನಲ್ಲಿ ಬಳಸಿಕೊಂಡಿರುವ ಆರೋಪ ಕೇಳಿಬಂದಿದ್ದು, ಈ ಕುರಿತು ತನಿಖೆ ಮುಂದುವರಿದಿದೆ.

ಅಕ್ಟೋಬರ್ 16ರಂದು ಸುನೀತಾಗೆ ತಂದೆ-ಮಗಳು ಮಾಂಸಾಹಾರ ತಯಾರಿಸಿ ನೀಡಿದ್ದರು. ಬಳಿಕ ಪ್ರಜ್ಞೆ ಕಳೆದುಕೊಂಡಿದ್ದ ಸುನೀತಾಳ ತಲೆಗೆ ರುಬ್ಬುಕಲ್ಲಿನಿಂದ ಹೊಡೆದು ಹತ್ಯೆ ಮಾಡಲಾಗಿದೆ ಎಂಬ ಮಾಹಿತಿ ವಿಚಾರಣೆಯಲ್ಲಿ ಬಹಿರಂಗವಾಗಿದೆ.

ಈಗಾಗಲೇ ನಂದಿಬೆಟ್ಟದಲ್ಲಿ ಬಾಲಕ ಪುನೀತ್‌ನ ಮೃತದೇಹ ಪತ್ತೆಯಾಗಿದ್ದು, ಏರ್ಕಾಡ್‌ನಲ್ಲಿ ಇಬ್ಬರ ಶವ ಸಿಕ್ಕಿವೆ. ಇನ್ನೂ ನಾಲ್ವರ ಮೃತದೇಹಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಶಿವಕುಮಾರ್ ಮತ್ತು ದಿವ್ಯಾ ಅವರ ಶವಗಳನ್ನು ಚಾಮುಂಡಿ ಬೆಟ್ಟದಲ್ಲಿ, ಶಂಕರ್ ಮತ್ತು ನಳಿನಿ ಅವರ ಶವಗಳನ್ನು ಶಿರಾಡಿಘಾಟ್‌ನಲ್ಲಿ ಎಸೆದಿರುವುದಾಗಿ ಆರೋಪಿ ಹೇಳಿದ್ದಾನೆ ಎನ್ನಲಾಗಿದೆ.

ಇದಲ್ಲದೆ, ಮೃತರ ಚಿನ್ನಾಭರಣಗಳನ್ನು ತೆಗೆದುಕೊಂಡು ಮಾರಾಟ ಮಾಡಿರುವ ಬಗ್ಗೆಯೂ ತನಿಖೆ ನಡೆಯುತ್ತಿದೆ. ಉತ್ತರ ವಿಭಾಗದ ಡಿಸಿಪಿ ಬಾಬಾಸಾಬ್ ನೇಮಗೌಡ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಅಪ್ರಾಪ್ತ ಮಗಳ ಪಾತ್ರ ಸೇರಿದಂತೆ ಎಲ್ಲಾ ಆಯಾಮಗಳಿಂದ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

Related Articles

Back to top button