*18ರ ಹರೆಯದಲ್ಲೇ ಐತಿಹಾಸಿಕ ಗೆಲುವು*: *ದೇಶಕ್ಕೇ ಮೊದಲ ರ್ಯಾಂಕ್ ಪಡೆದ ಶಿವಮೊಗ್ಗದ ಹುಡುಗಿ*

ಪ್ರಗತಿವಾಹಿನಿ ಸುದ್ದಿ: ಬಾಲ್ಯದಿಂದಲೂ ಭಾರತೀಯ ಸೇನೆಗೆ ಸೇರಬೇಕೆಂಬ ಕನಸು ಕಂಡಿದ್ದ ಕರ್ನಾಟಕದ ಯುವತಿಯೊಬ್ಬರು ಇದೀಗ ಇಡೀ ದೇಶವೇ ಹೆಮ್ಮೆಪಡುವ ಸಾಧನೆ ಮಾಡಿದ್ದಾರೆ. ಕೇವಲ 18ನೇ ವಯಸ್ಸಿನಲ್ಲೇ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ಪ್ರವೇಶ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ್ಯಾಂಕ್ ಪಡೆದುಕೊಂಡಿದ್ದಾರೆ. ಮೊದಲ ಪ್ರಯತ್ನದಲ್ಲೇ ಈ ಅದ್ಭುತ ಯಶಸ್ಸು ಸಾಧಿಸಿರುವುದು ವಿಶೇಷ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಶ್ರೇಯಾ ಎನ್. ಗೌಡಾ ಇದೀಗ ದೇಶದ ಗಮನ ಸೆಳೆದಿದ್ದಾರೆ. ಎಂಟನೇ ತರಗತಿಯಲ್ಲಿದ್ದಾಗಲೇ ಸೇನೆ ಸೇರುವ ಗುರಿ ಇಟ್ಟುಕೊಂಡಿದ್ದ ಶ್ರೇಯಾ ಸತತ ಪರಿಶ್ರಮದಿಂದ ದೇಶವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ. ಶ್ರೇಯಾ ಸಾಧನೆಗೆ ಕುಟುಂಬಸ್ಥರು, ಶಿಕ್ಷಕರು ಮತ್ತು ಸಾರ್ವಜನಿಕರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಎಂಟನೇ ತರಗತಿಯಲ್ಲಿ ಮಹಿಳೆಯರಿಗೂ ಎನ್ಡಿಎ ಪ್ರವೇಶ ಪಡೆಯುವ ಅವಕಾಶವಿದೆ ಎಂಬುದನ್ನು ತಿಳಿದುಕೊಂಡ ಶ್ರೇಯಾ ಬಳಿಕ ಸೇನೆ ಸೇರುವ ಕನಸನ್ನು ನನಸಾಗಿಸಲು ಸಿದ್ಧತೆ ಆರಂಭಿಸಿದ್ದರು. ಆರಂಭದಲ್ಲಿ ಅಗ್ರ ಹತ್ತರೊಳಗೆ ಸ್ಥಾನ ಪಡೆಯುವ ನಿರೀಕ್ಷೆ ಹೊಂದಿದ್ದ ಶ್ರೇಯಾ, ಇದೀಗ ದೇಶಕ್ಕೇ ಮೊದಲ ಸ್ಥಾನ ಗಳಿಸಿದ್ದಾರೆ. ಈ ಸಾಧನೆ ವರ್ಣಿಸಲಾಗದ ಸಂತೋಷ ನೀಡಿದೆ ಎಂದು ಹೇಳಿದ್ದಾರೆ.
ಶ್ರೇಯಾ ಭದ್ರಾವತಿಯ ಕಾರೇಹಳ್ಳಿಯ ಬಿಜಿಎಸ್ ಸೆಂಟ್ರಲ್ ಶಾಲೆಯಲ್ಲಿ ಹತ್ತನೇ ತರಗತಿವರೆಗೆ ಓದಿದ್ದಾರೆ. ಶಾಲೆಯಲ್ಲಿ ಉತ್ತಮ ಅಂಕಗಳೊಂದಿಗೆ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದರು. ಬಳಿಕ ಬೆಂಗಳೂರಿನ ರಾಜಾಜಿನಗರದ ಬೇಸ್ ಪಿಯು ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಮುಗಿಸಿದ್ದಾರೆ. ಜೆಇಇ ಪರೀಕ್ಷೆಗಾಗಿ ನಡೆಸಿದ ನಿರಂತರ ಅಭ್ಯಾಸವೂ ಎನ್ಡಿಎ ಲಿಖಿತ ಪರೀಕ್ಷೆಯಲ್ಲಿ ಯಶಸ್ಸು ಪಡೆಯಲು ನೆರವಾಗಿದೆ. ಪ್ರಸ್ತುತ ಸುರತ್ಕಲ್ನ ಎನ್ಐಟಿಕೆಯಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ.
ಶ್ರೇಯಾ ಓದಿನ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೂ ಹೆಚ್ಚಿನ ಒತ್ತು ನೀಡಿದ್ದರು. ಚರ್ಚಾ ಸ್ಪರ್ಧೆ, ಚಿತ್ರಕಲೆ ಮತ್ತು ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. ರಾಜ್ಯಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನೂ ಪಡೆದಿದ್ದರು. ಎನ್ಡಿಎ ಆಯ್ಕೆ ಪ್ರಕ್ರಿಯೆಯ ಐದು ದಿನಗಳ ಎಸ್ಎಸ್ಬಿ ಸಂದರ್ಶನ ಅತ್ಯಂತ ಸವಾಲಿನದ್ದಾಗಿತ್ತು ಎಂದು ಹೇಳಿದ್ದಾರೆ.
ನಾಯಕತ್ವ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ತಂಡದೊಂದಿಗೆ ಕೆಲಸ ಮಾಡುವ ಗುಣಗಳನ್ನು ಈ ಸಂದರ್ಶನದಲ್ಲಿ ಪರೀಕ್ಷಿಸಲಾಗುತ್ತದೆ. ಇದಕ್ಕಾಗಿ ಪ್ರತಿದಿನ ಓಟದ ಅಭ್ಯಾಸ, ಪತ್ರಿಕೆಗಳ ಓದು ಹಾಗೂ ದೇಶ-ವಿದೇಶದ ವಿದ್ಯಮಾನಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದರು. ನಾಗಪುರದಲ್ಲಿ 14 ದಿನಗಳ ವಿಶೇಷ ತರಬೇತಿಯನ್ನೂ ಪಡೆದಿದ್ದರು.
ಶ್ರೇಯಾ ತಂದೆ ಜೆ. ನಾಗೇಂದ್ರ ಅವರು ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದಾರೆ. ತಾಯಿ ಬಿ.ಎಂ. ಆಶಾ ಉಪನ್ಯಾಸಕರಾಗಿದ್ದಾರೆ. ಮಗಳ ಆಸಕ್ತಿಗೆ ಪೋಷಕರು ಸದಾ ಬೆಂಬಲವಾಗಿ ನಿಂತಿದ್ದರು. ಅಂಕಗಳ ವಿಚಾರದಲ್ಲಿ ಒತ್ತಡ ಹೇರದೆ, ತನಗೆ ಇಷ್ಟವಾದ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲು ತಂದೆ ಸ್ವಾತಂತ್ರ್ಯ ನೀಡಿದ್ದರು ಎಂದು ಶ್ರೇಯಾ ತಿಳಿಸಿದ್ದಾರೆ.
ಶ್ರೇಯಾ ಅವರ ಈ ಸಾಧನೆಗೆ ಕರ್ನಾಟಕ ಸರ್ಕಾರ ಅಭಿನಂದನೆ ಸಲ್ಲಿಸಿದೆ. ಅವರ ಯಶಸ್ಸು ಇಡೀ ರಾಜ್ಯಕ್ಕೆ ಹೆಮ್ಮೆಯ ಕ್ಷಣವಾಗಿದ್ದು, ರಾಜ್ಯದ ಇತರ ಯುವತಿಯರಿಗೂ ಸ್ಫೂರ್ತಿಯಾಗಿದೆ ಎಂದು ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿದೆ.
ಇದೀಗ ಎಂಜಿನಿಯರಿಂಗ್ ವ್ಯಾಸಂಗವನ್ನು ಬಿಟ್ಟು ಪುಣೆಯ ಖಡಕ್ವಾಸ್ಲಾದಲ್ಲಿರುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಸೇರಿ ಮೂರು ವರ್ಷಗಳ ತರಬೇತಿ ಪಡೆಯುವ ಗುರಿ ಹೊಂದಿದ್ದಾರೆ. ಭಾರತೀಯ ಸೇನೆಯ ರಕ್ಷಣಾ ತಂತ್ರಜ್ಞಾನ ಮತ್ತು ಕ್ಷಿಪಣಿ ವಿಭಾಗದಲ್ಲಿ ಸೇವೆ ಸಲ್ಲಿಸುವುದು ಅವರ ಕನಸು.
ಯುವತಿಯರು ತಮ್ಮ ಕನಸುಗಳನ್ನು ಧೈರ್ಯವಾಗಿ ಹೇಳಿಕೊಳ್ಳಬೇಕು, ಗುರಿ ಸಾಧನೆಗಾಗಿ ನಿರಂತರ ಪ್ರಯತ್ನಿಸಬೇಕು ಎಂಬ ಸಂದೇಶವನ್ನು ಶ್ರೇಯಾ ನೀಡಿದ್ದಾರೆ. ಒಂದು ಕನಸು, ಸತತ ಪರಿಶ್ರಮ ಮತ್ತು ಕುಟುಂಬದ ಬೆಂಬಲ ಸೇರಿದರೆ ಎಂತಹ ಸಾಧನೆಯನ್ನೂ ಮಾಡಬಹುದು ಎಂಬುದಕ್ಕೆ ಶ್ರೇಯಾ ಯಶಸ್ಸು ಸಾಕ್ಷಿಯಾಗಿದೆ.



