
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕುಟುಂಬದ ಜಬಾಬ್ದಾರಿಯನ್ನು ನಿಭಾಯಿಸುವ ಶಕ್ತಿ ಹೆಣ್ಣಿಗಿದೆ. ಇವಳು ದೇವಿಯ ಸ್ವರೂಪ. ಹುಟ್ಟಿನಿಂದ ಸಾಯುವವರೆಗೆ ಈ ಸಮಾಜಕ್ಕಾಗಿ ಶ್ರಮಿಸುವ ಶ್ರಮ ಜೀವಿ ಹೆಣ್ಣು ಎಂದು ಪಿಎಸ್‌ಐ ಕೃಷ್ಣವೇಣಿ ಗುರಲಹೊಸುರ ಹೇಳಿದರು.
ನಗರದ ಸಂಗೊಳ್ಳಿ ರಾಯಣ್ಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶನಿವಾರ ೧೨ ರಂದು ಆಯೋಜಿಸಲಾಗಿದ್ದ, ಮಹಿಳಾ ಸಬಲೀಕರಣ ಘಟಕ ಹಾಗೂ ಅಂತರಾಷ್ಟ್ರೀಯ ಹೆಣ್ಣು ಶಿಶು ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಈ ಸಂಸ್ಕೃತಿ ನಾಡಿನಲ್ಲಿ ಹೆಣ್ಣಿಗೆ ಆಗುವ ಅವಮಾನ, ಶೋಷಣೆಯನ್ನು ತಪ್ಪಿಸಬೇಕು, ಸ್ವಾತಂತ್ರ್ಯ ಸಿಕ್ಕು ೭೩ ವರ್ಷಗಳಾದರೂ ಮಹಿಳೆಯರಿಗೆ ಮಾತ್ರ ನಿಜವಾದ ಸ್ವಾತಂತ್ರ್ಯ ಸಿಗುತ್ತಿಲ್ಲ, ಅದಕ್ಕಾಗಿ ಪ್ರತಿಯೊಂದು ಹೆಣ್ಣು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕಿದೆ ಅಂದಾಗ ಪುರುಷರ ಸರಿಸಮಾನವಾಗಿ ಬೆಳೆಯಲು ಸಾಧ್ಯವೆಂದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಪ್ರೋ.ಬಸವರಾಜ ಪದ್ಮಶಾಲಿ ಮಾತನಾಡಿ, ಹೆಣ್ಣು ಅಬಲೆ ಅಲ್ಲಾ ಸಬಲೆ ಎಂದು ದಶಕಗಳಿಂದ ಹೆಳುತ್ತಾ ಬಂದಿದ್ದೇವೆ. ಆದರೆ, ಯಾವುದು ಕೂಡಾ ಕಾರ್ಯರೂಪಕ್ಕೆ ಬಂದಿಲ್ಲಾ ಅದನ್ನು ಕಾರ್ಯರೂಪಕ್ಕೆ ತರುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ೧೧/೧೦/೨೦೧೪ ರ ಸರ್ವೆ ಪ್ರಕಾರ ೧೬ ಮಿಲಿಯನ ಮಹಿಳೆಯರು ಶಿಕ್ಷಣ ವಂಚಿತರಾಗಿದ್ದಾರೆ ಎಂದರು.
ಸಂಗೊಳ್ಳಿ ರಾಯಣ್ಣ ಮಹಾವಿದ್ಯಾಲಯ ಪ್ರಾಚಾರ್ಯ ಪ್ರೋ.ಬಿ.ಎಸ್.ನಾವಿ ಮಾತನಾಡಿ, ದೇಶದ ಆರ್ಥಿಕತೆ ಮತ್ತು ರಾಷ್ಟ್ರೀಯ ಆದಾಯ ಉತ್ತುಂಗದಲ್ಲಿರುತ್ತದೆ ಮತ್ತು ಒಂದೇ ಕಾಲಿನಲ್ಲಿ ಹಿಮಾಲಯವನ್ನು ಏರಿದ ಅರಿನಿಮಾ ಸಿನ್ನಾ ರವರ ಹಾಗೂ ಹಲವಾರು ಸಾಧಕರಿದ್ದಾರೆ. ಈಗಿನ ವಿದ್ಯಾರ್ಥಿನಿಯರು ಇವರ ಬಗ್ಗೆ ಅಧ್ಯಯನ ಮಾಡಿ ತಾವು ಬೆಳೆಯಬೇಕಿದೆ ಎಂದರು.
ಸುಮನ್ ಮುದ್ದಾಪುರ ಪ್ರಾಸ್ತಾವಿಕ ಮಾತನಾಡಿದರು. ನವ್ಯಶ್ರೀ ಶೆಟ್ಟಿ ಪ್ರಾರ್ಥಿಸಿದರು. ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಡಾ.ಜ್ಯೋತಿ ಬಿರಾದರ ಪಾಟೀಲ ನಿರೂಪಿಸಿದರು. ಸುನಿತಾ ಶೆಟ್ಟಣ್ಣವರ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ