ಕೆಎಲ್ಇ ಯಿಂದ ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಕೇಂದ್ರ ಸ್ಥಾಪನೆ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ; ಕೆಎಲ್‍ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರವು ನರ ಮತ್ತು ರಕ್ತನಾಳ ರೋಗ ಸಂಬಂಧಿ ಖಾಯಿಲೆಗಳಿಗೆ ತೆರೆದ ಶಸ್ತ್ರಚಿಕಿತ್ಸೆ ಬದಲಾಗಿ ಅತ್ಯಾಧುನಿಕ ರೀತಿಯಲ್ಲಿ ಚಿಕಿತ್ಸೆ ನೀಡಲು ಬೈ ಪ್ಲೇನ್‍ಕ್ಯಾಥಲ್ಯಾಬ್ ಅನ್ನು ಸ್ಥಾಪಿಸಿದೆ.
ಈ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸಾ ಕೇಂದ್ರವನ್ನು ದಿ. 10 ಏಪ್ರೀಲ್ 2021ರಂದು ಬೆಳಗ್ಗೆ 10 ಗಂಟೆಗೆ ಕೇಂದ್ರದ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಿಲು ಸಚಿವರಾದ ಪ್ರಹ್ಲಾದ ಜೋಷಿ ಅವರು ಜನ ಸೇವೆಗೆ ಅರ್ಪಿಸಲಿದ್ದಾರೆ.
ಇಂಟರವೆನ್ಶನಲ್ ರೆಡಿಯಾಲಾಜಿ ಕಾರ್ಯವಿಧಾನಗಳು ಅತ್ಯಂತ ಸರಳವಾಗಿದ್ದು, ತೆರೆದ ಶಸ್ತ್ರಕ್ರಿಯೆ ಬದಲಾಗಿ ಚಿಕ್ಕರಂದ್ರ ಮೂಲಕ ಸ್ಟೆಂಟ್ ಅಳವಡಿಸಿ ರೋಗಿಗಳನ್ನು ಶೀಘ್ರವೇ ಗುಣಮುಖಗೊಳಿಸುವಲ್ಲಿ ಸಹಕಾರಿಯಾಗಿದೆ. ಇದು ಡಿಎಸ್ಎ ಸಿಟಿ ಎಂಆರ್‍ಐ ಒಳಗೊಂಡಿದ್ದು, ಮೆದುಳಿನಲ್ಲಿ ಉಂಟಾಗುವ ಸ್ಟ್ರೋಕ್(ಪಾಶ್ರ್ವವಾಯು) ರಕ್ತನಾಳಗಳ ಮುದುಡುವಿಕೆ ಸೇರಿದಂತೆ ಅನೇಕ ಖಾಯಿಲೆಗಳಿಗೆ ಚಿಕಿತ್ಸೆ ನೀಡುವಲ್ಲಿ ಸಹಕಾರಿಯಾಗಲಿದೆ. ಈ ವ್ಯವಸ್ಥೆ ಯು ಭಾರತದ ಕೆಲವೇ ಕೆಲವು ಆಸ್ಪತ್ರೆಗಳಲ್ಲಿ ಲಭ್ಯವಿದ್ದು, ಅದರಲ್ಲಿ ಕೆಎಲ್‍ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯೂ ಕೂಡ ಒಂದು.
ಸುಮಾರು 5 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲಾದ ಅಲ್ಟ್ರಾ ಮಾಡರ್ನ ಬೈಪ್ಲೇನ್‍ಕ್ಯಾಥಲ್ಯಾಬ್ ನಲ್ಲಿ, ಮೆದುಳಿಗೆ ಸ್ಟ್ರೋಕ್ (ಪಾರ್ಶ್ವವಾಯು) ಉಂಟಾದಾಗ ಇದರ ಸಹಾಯದಿಂದ ಮೆದುಳಿನಲ್ಲಿ ಹೆಪ್ಪುಗಟ್ಟಿದ ರಕ್ತವನ್ನು ಕರಗಿಸಿ, ಮೊದಲಿನಂತೆ ಸರಳವಾಗಿ ರಕ್ತ ಸಂಚಾರವಾಗಲು ಅನುಕೂಲ ಮಾಡಿಕೊಟ್ಟು, ಪಾರ್ಶ್ವವಾಯುವಿನಿಂದ ರೋಗಿಯನ್ನು ರಕ್ಷಿಸಲಾಗುತ್ತದೆ.
ಅಲ್ಲದೇ ಕಾಲುಗಳ ರಕ್ತನಾಳಗಳಲ್ಲಿ ರಕ್ತ ಸಂಚಾರಕ್ಕೆ ಉಂಟಾಗುವ ತೊಂದರೆ ಸರಿಪಡಿಸಿ ದೇಹದ ಕಾರ್ಯಗಳನ್ನು ನಿರ್ವಹಿಸಲು ಸಹಕಾರಿಯಾಗಲಿದೆ. ಅತ್ಯಂತ ಕಡಿಮೆ ವಿಕಿರಣದ ಮೂಲಕ ಲೇಸರ್ ಚಿಕಿತ್ಸೆ ನೀಡಲಾಗುತ್ತದೆ. ಇದು ಆಸ್ಪತ್ರೆಯಲ್ಲಿ ದೀರ್ಘಕಾಲ ವಾಸ್ತವ್ಯವನ್ನು ತಪ್ಪಿಸಿ, ಶಿಘ್ರ ಗುಣಮುಖವಾಗುವಲ್ಲಿ ಸಹಾಯ ಮಾಡುತ್ತದೆ. ಈ ವಿಭಾಗದಲ್ಲಿ ನುರಿತತಜ್ಞವೈದ್ಯರಾದ ಡಾ. ನವೀನ ಮೂಲಿಮನಿ ಹಾಗೂ ಡಾ. ಅಭಿನಂದನ್ ರೂಗೆ ಅವರು ಸೇವೆ ನೀಡುತ್ತಿದ್ದಾರೆ.
ಕರ್ನಾಟಕ, ದಕ್ಷಿಣ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದಜನರಿಗೆ ಈ ಅತ್ಯಾಧುನಿಕ ಇಂಟರವೆನ್ಶನಲ್ ಸೇವೆಯು ಲಭ್ಯವಾಗಲಿದೆ. ಈ ಭಾಗದಜನರು ಪಾರ್ಶ್ವವಾಯುವಿನಿಂದ ಬಳಲುವ ಪ್ರಮಾಣವು ಕಡಿಮೆಯಾಗಲಿದೆ. ಕೆಎಲ್‍ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಅಳವಡಿಸಲಾದ ಅತ್ಯಾಧುನಿಕವಾದ 3ಡಿ ಸ್ಪಷ್ಟಚಿತ್ರಣ ನೀಡಲಿರುವ ಎಫ್ ಡಿ 20/20 ಬಯಪ್ಲೇನ್‍ಕ್ಯಾಥಲ್ಯಾಬ ಪಾಶ್ರ್ವವಾಯು ರೋಗಿಗಳ ಚಿಕಿತ್ಸೆಯಲ್ಲಿ ವೈದ್ಯರ ಕಾರ್ಯವನ್ನು ಸರಳಗೊಳಿಸಲಿದೆ. ಸ್ಟ್ರೋಕ್ ನಿಂದ ಬಳಲುತ್ತಿರುವ ರೋಗಿಗಳಿಗೆ ಉಂಟಾದ ತೊಂದರೆ ಎಷ್ಟು ಪ್ರಮಾಣದಲ್ಲಿದೆ ಎಂಬುದನ್ನು ನಿಖರವಾಗಿ ಕಂಡು ಹಿಡಿದು, ಮೆದುಳಿನಲ್ಲಿ ಉಂಟಾದ ಹೆಪ್ಪುಗಟ್ಟಿದ ರಕ್ತವನ್ನು ಅತ್ಯಂತ ಚಿಕ್ಕರಂದ್ರದ ವಿಧಾನದ ಮೂಲಕ ತೆಗೆದು ಹಾಕಲಾಗುತ್ತದೆ. ಇದರಿಂದ ಪಾರ್ಶ್ವವಾಯು ರೋಗಿಗಳ ಜೀವನವು ಮೊದಲಿನಂತೆ ಸುಖಕರವಾಗಿರಲಿದೆ.
ಈ ಸಂದರ್ಭದಲ್ಲಿ ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಉಪಸ್ಥಿತರಿರಲಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ ಅವರು ತಿಳಿಸಿದ್ದಾರೆ.
ಕೆಎಲ್ಇ ಆಸ್ಪತ್ರೆಯಲ್ಲಿ ಉಚಿತ ಹೆರಿಗೆ ಯೋಜನೆ – ಡಾ.ಪ್ರಭಾಕರ ಕೋರೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ