Latest

ನೀರಾವರಿ ಪ್ರತಿ ರಾಜ್ಯದ ಧ್ಯೇಯ ಮಂತ್ರವಾಗಬೇಕು: ವೀರಮಲ್ಲ ಪ್ರಕಾಶರಾವ್

ಪ್ರಗತಿವಾಹಿನಿ ಸುದ್ದಿ, ಕೂಡಲ ಸಂಗಮ – ಕೃಷಿ ಮತ್ತು ನೀರಾವರಿ ಯೋಜನೆಗಳಿಗೆ ತೆಲಂಗಾಣ ಸರ್ಕಾರವು ಪ್ರತಿವರ್ಷ ಬಜೇಟ್‌ನಲ್ಲಿ ಶೇ.೫೦ರಷ್ಟು ಅನುದಾನ ಮೀಸಲಿಟ್ಟ ಪರಿಣಾಮವಾಗಿ ಕಾಲೇಶ್ವರಂ ಯೋಜನೆಯನ್ನು ಕಾಲಮಿತಿಯಲ್ಲಿ ದಾಖಲೆ ಬರೆದು ಪೂರ್ಣಗೊಳಿಸಲು ಸಹಕಾರಿಯಾಯಿತು ಎಂದು ತೆಲಂಗಾಣ ಜಲ ಸಂಪನ್ಮೂಲ ಅಭಿವೃದ್ದಿ ಮಂಡಳಿ ಅಧ್ಯಕ್ಷ ವೀರಮಲ್ಲ ಪ್ರಕಾಶ ಹೇಳಿದರು.

ಕೂಡಲ ಸಂಗಮದಲ್ಲಿ ನಡೆದ ಪಂಚಮಸಾಲಿ ಮಹಾಪೀಠ ಹಮ್ಮಿಕೊಂಡಿದ್ದ ಬಸವ ಕೃಷಿ ಸಂಕ್ರಾಂತಿ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ಮಹಾರಾಷ್ಟ್ರದ ವಿದರ್ಭದ ನಂತರ ಅತಿಹೆಚ್ಚು ರೈತ ಆತ್ಮಹತ್ಯೆಗೆ ತೆಲಂಗಾಣ ಪ್ರಾಂತ್ಯವು ತುತ್ತಾಗಿತ್ತು. ಆಂದ್ರ ಪ್ರದೇಶ ಸರ್ಕಾರ ಕೃಷ್ಣಾ ಮತ್ತು ಗೋದಾವರಿ ನದಿ ನೀರು ಹಂಚಿಕೆಯಲ್ಲಿ, ನೀರಾವರಿ ಯೋಜನೆಗಳಲ್ಲಿ ತಾರತಮ್ಯ ಮಾಡಿದ್ದ ಪರಿಣಾಮವಾಗಿ ತೆಲಂಗಾಣ ವಿಭಜನೆಯಾಯಿತು. ಚಂದ್ರಶೇಖರರಾವ್ ನೀರಿನ ಕುರಿತು ವಿಶೇಷ ಜ್ಞಾನ ಮತ್ತು ಕಾಳಜಿ ಹೊಂದಿದ್ದಾರೆ. ಹೀಗಾಗಿ ಕಾಲೇಶ್ವರ, ಮಿಷನ್ ಕಾಕತೀಯ, ಮಿಷನ್ ಭಗೀರಥ ಯೋಜನೆ ಅನುಷ್ಠಾನ ಸಾಧ್ಯವಾಯಿತು ಎಂದರು.

ಕರ್ನಾಟಕದ ಪಶ್ಚಿಮ ಘಟ್ಟಗಳ ತಪ್ಪಲಲ್ಲಿ ಸಂಪದ್ಭರಿತವಾದ ಜಲರಾಶಿ ಇದೆ. ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗಾಗಿ ಕಾಳಿ ಸೇರಿದಂತೆ ಪಶ್ಚಿಮ ಘಟ್ಟಗಳ ನದಿ ನೀರು ಬಳಕೆಯಾಗಬೇಕು. ಲಿಫ್ಟ್ ಇರಿಗೇಶನ್‌ಗಳ ಭಾರಿ ವೆಚ್ಚವನ್ನು ತಗ್ಗಿಸಿ ಟನಲ್ (ಸುರಂಗ ಮಾರ್ಗ)ಗಳ ಮುಖಾಂತರ ಉತ್ತರ ಕರ್ನಾಟಕಕ್ಕೆ ಹೇರಳವಾದ ನೀರನ್ನು ಪಡೆಯಬಹುದು. ಆಲಮಟ್ಟಿ ಎತ್ತರ ಹೆಚ್ಚಿಸಿ, ಬಚಾವತ್ ಆಯೋಗದ ವರದಿಯನ್ವಯ ಕರ್ನಾಟಕದ ಜೊತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಮ್ಮ ನೀರು ಹಂಚಿಕೆ ವ್ಯಾಜ್ಯವೇನಿದ್ದರೂ ಆಂದ್ರ ಸರ್ಕಾರದೊಡನೆ ಮಾತ್ರ ಎಂದು ಅವರು ಹೇಳಿದರು.

ಕೃಷ್ಣೆಗೂ ಬೇಕು ಸಾಂಸ್ಕೃತಿಕ ಪ್ರಾತಿನಿಧ್ಯ: ಸಂಗಮೇಶ ನಿರಾಣಿ

ಉತ್ತರ ಕರ್ನಾಟಕ ಸಮಗ್ರ ನೀರಾವರಿ ಹೋರಾಟ ಸಮೀತಿ ಅಧ್ಯಕ್ಷ ಸಂಗಮೇಶ ನಿರಾಣಿ ಮಾತನಾಡಿ ಕೃಷ್ಣೆ ನಮ್ಮೆಲ್ಲರಿಗೂ ಅನ್ನ, ನೀರು ನೀಡಿ ಕಾಪಾಡುತ್ತಿದ್ದಾಳೆ. ಕವೇರಿಗೆ ನೀಡಿದ ಸಾಂಸ್ಕೃತಿಕ ಪ್ರಾತಿನಿಧ್ಯ ಕೃಷ್ಣೆಗೂ ದೊರೆಯಲಿ. ಕೇವಲ ೫೦-೬೦ ವರ್ಷಗಳ ಹಿಂದಿನ ನೀರಿನ ಯೋಜನೆಯಲ್ಲ, ಪುರಾಣ ಕಾಲದಿಂದಲೂ ಕೃಷ್ಣೆಯ ಕುರಿತು ತಾರತಮ್ಯಗಳಿವೆ. ಕಾವೇರಿಗಾಗಿ ರಾಜ ಕುಮಾರ್ ಹಾಡಿ ಕುಣಿದರು. ಸಾಹಿತಿಗಳು ಸೌಂದರ್ಯದ ಸೊಬಗು ವರ್ಣಿಸಿದರು. ಕೃಷ್ಣೆ ಮಾತ್ರ ಕಣ್ಣಿರು, ಗೋಳು, ವ್ಯಥೆ ಎಂಬಂತೆ ಚಿತ್ರಿತವಾಗಿದ್ದು ವಿಷಾದನೀಯ. ನಮ್ಮ ಕೃಷ್ಣೆ ಕುರಿತು ಪ್ರತಿಯೊಬ್ಬರು ಅಭಿಮಾನ ಬೆಳಸಿಕೊಳ್ಳಬೇಕು. ಸಾಂಸ್ಕೃತಿಕ ಪ್ರಾತಿನಿಧ್ಯ ದೊರೆಯಬೇಕು. ಕೃಷ್ಣೆಯ ದಂಡೆಯ ಮೇಲೂ ಕುಂಭಮೇಳ ನಡೆಯಲಿ. ಇಲ್ಲಿಯ ಎಲ್ಲ ನೀರಾವರಿ ಯೋಜನೆಗಳು ಆದ್ಯತೆ ಮೇರೆಗೆ ಪೂರ್ಣಗೊಳ್ಳಲಿ ಎಂದರು.

ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ ತೆಲಂಗಾಣದಲ್ಲಿ ನೀರಾವರಿ ಹಾಗೂ ಕೃಷಿ ಕ್ರಾಂತಿ ಮಾಡಿದ ಪ್ರಕಾಶ್‌ರವರು ಬಸವಣ್ಣನವರ ತತ್ವಾದರ್ಶಗಳ ಕುರಿತು ವಿಶೇಷ ಕಾಳಜಿ ಹೊಂದಿದ್ದಾರೆ. ಅಂಥವರು ಶ್ರೀಪೀಠದ ಈ ಸಾಲಿನ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿಗೆ ಭಾಜನರಾಗಿರುವುದು ಸಂತೋಷದಾಯಕ. ಉತ್ತರ ಕರ್ನಾಟಕದ ಸಮಗ್ರ ನೀರಾವರಿ ಯೋಜನೆಗಳಿಗೆ, ನದಿ ಸಂರಕ್ಷಣೆ, ಜಲ ಸಂವರ್ಧನೆಗೆ ಶ್ರೀಪೀಠದ ಬೆಂಬಲ ಸದಾ ಇದೆ ಸಮಗ್ರ ಉತ್ತರ ಕರ್ನಾಟಕ ನೀರಾವರಿಗಾಗಿ ಸಂಗಮೇಶ ನಿರಾಣಿ ವರದಿ ಜಾರಿಯಾಗಲಿ ಎಂದು ಅವರು ಹೇಳಿದರು.

ಶಾಸಕ ಹಾಗೂ ಮಾಜಿ ಸಚಿವ ಶಿವಾನಂದ ಪಾಟೀಲ, ವಿ.ಪ. ಸದಸ್ಯ ಹಣಮಂತ ನಿರಾಣಿ, ಮಾಜಿ ಶಾಸಕರಾದ ವಿಜಯಾನಂದ ಕಾಶಪ್ಪನವರ, ಶ್ರೀಶೈಲಪ್ಪ ಬಿದರೂರ, ಎಂ. ಪಿ. ನಾಡಗೌಡ, ತೊ.ವಿ.ವಿ. ಕುಲಪತಿ ಎಂ. ಕೆ. ಇಂದಿರೇಶ, ವಾಲ್ಮಿ ಅಧ್ಯಕ್ಷ ರಾಜೇಂದ್ರ ಪೋತದಾರ ಉಪಸ್ಥಿತರಿದ್ದರು.

ಉ.ಕ. ಸಮಗ್ರ ನೀರಾವರಿಗೆ ವಿಫುಲ ಅವಕಾಶಗಳಿವೆ: ಸಂಗಮೇಶ ನಿರಾಣಿ

ಕೂಡಲ ಸಂಗಮದಲ್ಲಿ ನಡೆದ ಉ.ಕ. ನೀರಾವರಿ ವಿಚಾರ ಸಂಕೀರಣ


ಉತ್ತರ ಕರ್ನಾಟಕಕ್ಕಾಗಿ ಶಿಸ್ತುಬದ್ದವಾಗಿ ನೀರಾವರಿ ಯೋಜನೆಗಳನ್ನು ರೂಪಿಸಿದರೆ ಸುಲಭವಾಗಿ ೪೫೮ ಟಿಎಂಸಿ ನೀರು ಪಡೆಯಬಹುದು. ಇದರಿಂದ ಸುಮಾರು ೪೫ ಲಕ್ಷ ಎಕರೆ ಭೂಮಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಬಹುದು. ೧೧ ಜಿಲ್ಲೆಯ ಹಳ್ಳಿಗಳಿಗೆ ಸಂಪೂರ್ಣ ಕುಡಿಯುವ ನೀರಿನ ಸೌಲಭ್ಯ ಒದಗಿಸಬಹುದು ಎಂದು ಉತ್ತರ ಕರ್ನಾಟಕ ಸಮಗ್ರ ನೀರಾವರಿ ಹೋರಾಟ ಸಮೀತಿ ಅಧ್ಯಕ್ಷ ಸಂಗಮೇಶ ನಿರಾಣ ಹೇಳಿದರು.
ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಮೊದಲಿನಿಂದಲೂ ಅನ್ಯಾಯವಾಗಿದೆ. ಕರ್ನಾಟಕಕ್ಕೆ ಕೃಷ್ಣಾ ಕಣಿವೆ ಪಾಲು ೯೦೪ ಟಿಎಂಸಿ ಅಡಿ. ಕಾವೇರಿ ಪಾಲು ೨೮೦ ಟಿಎಂಸಿ ಅಡಿ. ಕಾವೇರಿಗಿಂತ ಕೃಷ್ಣೆಯಿಂದ ೩ಪಟ್ಟು ಹೆಚ್ಚು ಭೂಮಿಯನ್ನು ನೀರಾವರಿಗೆ ಒಳಪಡಿಸಬಹುದು. ಆದರೆ ಕಾವೇರಿ ಕಣಿವೆಯ ಬಹುತೇಕ ಯೋಜನೆಗಳು ಪೂರ್ಣಗೊಂಡಿವೆ. ಕೃಷ್ಣಾ ಕಣಿವೆ ಯೋಜನೆಗಳಲ್ಲಿ ಅನಾವಶ್ಯಕ ಕಾಲಹರಣವಾಗಿದೆ. ನಮ್ಮ ಉತ್ತರ ಕರ್ನಾಟಕದ ನೆರೆಯ ತೆಲಂಗಾಣ, ಆಂದ್ರಪ್ರದೇಶ, ಮಹಾರಾಷ್ಟ್ರ, ಗೋವಾ, ದಕ್ಷೀಣ ಕರ್ನಾಟಕದ ಎಲ್ಲ ನೀರಾವರಿ ಯೋಜನೆಗಳು ಪೂರ್ಣಗೊಂಡಿವೆ. ಅವರೆಲ್ಲ ಕೃಷಿಯಲ್ಲಿ ಪ್ರಗತಿ ಸಾಧಿಸುತ್ತ ಮುನ್ನಡೆದಿದ್ದಾರೆ. ರೈತ ನಾಯಕರಾದ ಬಿ. ಎಸ್. ಯಡಿಯೂರಪ್ಪನವರು ಆದ್ಯತೆಯ ಮೇರೆಗೆ ಎಲ್ಲ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ನೀರಾವರಿ ಕ್ರಾಂತಿ ಮಾಡುವ ಮೂಲಕ ಕೃಷಿಯಲ್ಲಿ ಉತ್ತರ ಕರ್ನಾಟಕ ಪ್ರಗತಿಬಂಧುವಾಗಲಿ ಎಂದರು.

ನದಿ ನೈಸರ್ಗಿಕ ಹರಿವಿಗೆ ಆದ್ಯತೆ ನೀಡಿ: ಪಂಚಪ್ಪ ಕಲ್ಬುರ್ಗಿ


ಭೀಮಾ ಸಂರಕ್ಷಣೆ ಹೋರಾಟಗಾರ ಪಂಚಪ್ಪ ಕಲ್ಬುರ್ಗಿ ಮಾತನಾಡಿ ನದಿ ನಿಸರ್ಗ ಕೊಟ್ಟ ಬಳಿವಳಿ. ನೈಸರ್ಗಿಕ ಹರಿವಿಗೆ ಸಂರಕ್ಷಣೆಗೆ ಮೊದಲು ಆದ್ಯತೆ ನೀಡಬೇಕು. ನದಿ ನೈಸರ್ಗಿಕ ಹರಿದಾಗ ಮಾತ್ರ ಪರಿಸರ, ಜಲಚರ, ನದಿ ದಂಡೆಯ ಮೇಲೆ ಸಂಸ್ಕೃತಿ ಉಳಿಯಲು ಸಾಧ್ಯ. ಭೀಮಾ ಸಂರಕ್ಷಣೆಗೆ ನಾವು ಸುಪ್ರೀಂ ಕೋರ್ಟ್ ಮೆಟ್ಟಲೆರಿದ್ದು, ಎಲ್ಲ ನದಿಗಳ ನೈಸರ್ಗಿಕ ಹರಿವೆಗೆ ಪ್ರಥಮ ಪ್ರಶಸ್ತ್ಯ ನೀಡಬೇಕು ಎಂಬ ನ್ಯಾಯಾಲಯದ ತೀರ್ಪು ಇಡೀ ದೇಶಕ್ಕೆ ಮಾದರಿಯಾಯಿತು ಎಂದು ಹೇಳಿದರು.

ವಾಸುದೇವ ಹೆರಕಲ್, ಅಮೃತ ಈಜೇರಿ, ಗಿರೀಶ ಪಾಟೀಲ, ಬಸವರಾಜ ಕುಂಬಾರ, ವೆಂಕಟೇಶ ಜಂಬಗಿ, ಮಲ್ಲಿಕಾರ್ಜುನ ಹೆಗ್ಗಳಗಿ ವಿವಿಧ ವಿಷಯಗಳ ಮೇಲೆ ವಿಚಾರ ಮಂಡಿಸಿದರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಶಿರ್ವಚನ ನೀಡಿ ಮಹಾದಾಯಿ, ಕೃಷ್ಣೆ, ಘಟಪ್ರಭಾ, ಮಲಪ್ರಭೆ, ಭೀಮಾ, ತುಂಗಭದ್ರಾ ಎಲ್ಲ ಉತ್ತರ ಕರ್ನಾಟಕ ನದಿ ಸಂರಕ್ಷಣೆ ಹಾಗೂ ನೀರಾವರಿ ಹೋರಾಟಗಳಿಗೆ ಶ್ರೀ ಪೀಠದ ಅಗತ್ಯ ಬೆಂಬಲವಿದೆ. ವೀರಮಲ್ಲ ಪ್ರಕಾಶರವರ ಚಿಂತನೆಯಂತೆ ಕೃಷ್ಣಾ ನೀರು ಭಾಗಿದಾರ ರಾಜ್ಯಗಳ ರೈತರ ನೇತೃತ್ವದಲ್ಲಿ ಕೃಷ್ಣಾ ಕುಟುಂಬ ರಚನೆಗೆ ಸಿದ್ದತೆ ನಡೆಸಲಾಗುವುದು ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button