*ವೀರಶೈವ ಸಮಾಜ ಇತರ ಸಮಾಜಗಳಿಗೆ ಮಾದರಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್*

2023ನೇ ಶ್ರೀ ವೀರಭದ್ರೇಶ್ವರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿ ಸಚಿವರ ಹೇಳಿಕೆ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವೀರಶೈವ ಲಿಂಗಾಯತರೆಂದರೆ ಎಲ್ಲರೊಂದಿಗೆ ಸೌಹಾರ್ದ ಸಂಬಂಧ ಹೊಂದಿರುವವರು. ಯಾರನ್ನೂ ದ್ವೇಷಿಸುವವರಲ್ಲ. ನಾವೂ ಬೆಳೆಯೋಣ ಇತರ ಸಮಾಜದವರನ್ನು ಬೆಳೆಸೋಣ ಎನ್ನುವುದು ನಮ್ಮ ನೀತಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಪುಟ್ಟಣ್ಣ ಸಭಾಂಗಣದಲ್ಲಿ ಬುಧವಾರ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ನೇತೃತ್ವದಲ್ಲಿ ನಡೆದ ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವ ಹಾಗೂ ಶ್ರೀ ವೀರಭದ್ರೇಶ್ವರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಸಚಿವರು, ವೀರಶೈವ ಸಮಾಜ ಅನ್ನ ದಾಸೋಹಕ್ಕೆ ಹೆಸರಾಗಿದೆ. ಇತರ ಸಮಾಜದವರೂ ನಮ್ಮ ಕಾರ್ಯವನ್ನು ಹಿಂಬಾಸುತ್ತಿದ್ದಾರೆ ಎಂದರು.
ಸಮಾಜದ ಬಹುದಿನಗಳ ಬೇಡಿಕೆಯಾದ ಒಬಿಸಿಗೆ ಸೇರ್ಪಡೆಗೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕಿದೆ. ವೀರಭದ್ರೇಶ್ವರನ ಆಶೀರ್ವಾದ ಇದ್ದರೆ ಸಮಾಜದ ಬೇಡಿಕೆ ಶೀಘ್ರವೇ ಈಡೇರಲಿದೆ. ಎಲ್ಲರ ಸಹಕಾರದಿಂದ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳೋಣ ಎಂದರು.

ಇಸ್ರೋ ಅಧ್ಯಕ್ಷ ಸೋಮನಾಥ ಅವರನ್ನು ಸನ್ಮಾನಿಸುವ ಅವಕಾಶ ಸಿಕ್ಕಿರುವುದು ನನ್ನ ಸುದೈವ. ಚಂದ್ರಯಾನ 3 ಯಶಸ್ಸಿನಲ್ಲಿ ಮಹಿಳೆಯರು ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬುದು ಹೆಮ್ಮೆಯ ಸಂಗತಿ ಎಂದರು.
ವಿಜ್ಞಾನಿಗಳು ಕೌಟುಂಬಿಕ ಜೀವನದಿಂದ ದೂರವಿದ್ದು, ಹಗಲಿರುಳು ಶ್ರಮಿಸಿದ ಫಲವಾಗಿ ಇಂದು ಇಡೀ ವಿಶ್ವವೇ ಭಾರತದ ಸಾಧನೆಯನ್ನು ಕೊಂಡಾಡುತ್ತಿದೆ ಎಂದು ಸಚಿವರು ಹೇಳಿದರು.
ಸಮಾರಂಭದಲ್ಲಿ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದರು.
ನೊಣವಿನಕೆರೆಯ ಶ್ರೀ ಕಾಡಸಿದ್ಧೇಶ್ವರ ಮಠದ ಡಾ.ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಮಹಾಸ್ವಾಮಿಗಳು,
ಕೊಡ್ಲಿಪೇಟೆಯ ಕಿರಿಕೊಡ್ಲಿಮಠದ ಶ್ರೀ ಸದಾಶಿವ ಮಹಾಸ್ವಾಮಿಗಳು, ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ