
ಪ್ರಗತಿವಾಹಿನಿ ಸುದ್ದಿ, ಮೈಸೂರು: ಪೌರಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುವುದು ಮತ್ತಷ್ಟು ಉನ್ನತೀಕರಿಸುವ ಸಂಬಂಧಿಸಿದಂತೆ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಏರ್ಪಡಿಸಿದ್ದ ಸಂವಾದಕ್ಕೆ ಭಾಗವಹಿಸದೆ ದೂರ ಉಳಿದ ಡಿಡಿಪಿಐ, ಬಿಇಒಗೆ ನೋಟಿಸ್ ಜಾರಿಗೊಳಿಸಲು ಆಯೋಗದ ಅಧ್ಯಕ್ಷ ಕೋಟೆ ಎಂ.ಶಿವಣ್ಣ ಅವರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಗಂಗೋತ್ರಿ ಬಡಾವಣೆಯ ಕುದುರೆ ಮಾಳದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಗದಿಂದ ಏರ್ಪಡಿಸಿದ್ದ ಸಂವಾದದಲ್ಲಿ ಸಮಾಜ ಕಲ್ಯಾಣ ಇಲಾಖೆ, ನಗರಪಾಲಿಕೆ, ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು ಪಾಲ್ಗೊಂಡಿದ್ದರೂ ಪ್ರಾಥಮಿಕ ಶಿಕ್ಷಣ ಇಲಾಖೆ ಅಧಿಕಾರಿಗಳೇ ಗೈರಾಗಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಕೋಟೆ ಎಂ.ಶಿವಣ್ಣ “ನಾನೇನೂ ಕಾಟಾಚಾರಕ್ಕೆ ಶಾಲೆ ನೋಡಿಕೊಂಡು ಹೋಗಲು ಬಂದಿಲ್ಲ. ಸಂವಾದ ಎಂದರೆ ಏನು ಅಂದುಕೊಂಡಿದ್ದಾರೆ. ವಿಷಯ ತಿಳಿದಿದ್ದರೂ ಏಕೆ ಬಂದಿಲ್ಲ?,” ಎಂದು ಪ್ರಶ್ನಿಸಿದರು.
ಈ ವೇಳೆ ನಗರಪಾಲಿಕೆ ಹೆಚ್ಚುವರಿ ಆಯುಕ್ತೆ ಎಂ.ಜಿ.ರೂಪಾ ಅವರು ದೂರವಾಣಿ ಮೂಲಕ ಡಿಡಿಪಿಐ ಬಿ.ಎಸ್.ರಾಮಚಂದ್ರರಾಜೇ ಅರಸ್ ಅವರನ್ನು ಸಂಪರ್ಕಿಸಿದಾಗ ಬಿಇಒ ಅವರನ್ನು ಕಳುಹಿಸುವುದಾಗಿ ಹೇಳಿದರು.
ಇದರಿಂದ ಸಿಟ್ಟಾದ ಕೋಟೆ ಎಂ.ಶಿವಣ್ಣರವರು “ಪೌರಕಾರ್ಮಿಕರ ಮಕ್ಕಳು ಓದುವ ಶಾಲೆ ಅಂದರೆ ಇಷ್ಟೊಂದು ತಾತ್ಸಾರವೇ? ಸಭೆಗೆ ಬರುವುದೇ ಬೇಡ. ಡಿಡಿಪಿಐ, ಬಿಇಒ ಅವರಿಗೆ ನೋಟಿಸ್ ಜಾರಿಗೊಳಿಸಿ ಅವರ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಿ” ಎಂದು ಕಾರ್ಯದರ್ಶಿಗೆ ಸೂಚಿಸಿದರು.
ಅಮೃತ್ ದೇಸಾಯಿ ಹೇಳಿಕೆಗೆ ಮಾಜಿ ಸಚಿವ ವಿನಯ ಕುಲಕರ್ಣಿ ಟಾಂಗ್