ರಮೇಶ ಜಾರಕಿಹೊಳಿ ಬಿಜೆಪಿ ಬಿಡುವುದಿಲ್ಲ; ನ.29 ರಂದು ಬಳ್ಳಾರಿಯಲ್ಲಿ ಎಸ್‌ಟಿ ಸಮಾವೇಶ: ಬಿ. ಶ್ರೀರಾಮುಲು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ನಮ್ಮ ಸರಕಾರ ಮೀಸಲಾತಿ ವಿಚಾರದಲ್ಲಿ ಬಹಳ ದೊಡ್ಡ ಕೆಲಸ ಮಾಡಿದೆ. ನ.29 ರಂದು ಬಳ್ಳಾರಿಯಲ್ಲಿ ಎಸ್‌ಟಿ ಸಮಾವೇಶ ಮಾಡುತ್ತಿದ್ದೇವೆ” ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮುಖ್ಯಮಂತ್ರಿ, ಪ್ರಧಾನಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮ ಬಳ್ಳಾರಿಯಲ್ಲಿ ಮಾಡುತ್ತೇವೆ. ಕಾರ್ಯಕ್ರಮದ ಆಹ್ವಾನ ನೀಡಲು ಇಂದು ಬೆಳಗಾವಿಗೆ ಬಂದಿದ್ದೇನೆ. ನಮ್ಮ ಸರಕಾರದಲ್ಲಿ ಆದ ಒಳ್ಳೆ ಕೆಲಸವನ್ನು ಜನರಿಗೆ ತಿಳಿಸುವುದನ್ನ ಮಾಡುತ್ತೇವೆ,” ಎಂದರು.
ಎಸ್‌ಟಿ ಮೀಸಲಾತಿ ಚುನಾವಣೆ ಸ್ಟಂಟ್ ಎಂಬ ಕಾಂಗ್ರೆಸ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮೀಸಲಾತಿ ಯಾರು ಕೊಡಲಾರದಂತ ಕೆಲಸ, ಅವರಿಂದ ಮೀಸಲಾತಿ ಕೊಡಲು ಆಗಲಿಲ್ಲ. ಐತಿಹಾಸಿಕ ನಿರ್ಧಾರವನ್ನ ಬಿಜೆಪಿ ತೆಗೆದುಕೊಂಡಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ ಬ್ಯಾಂಕ್ ಮಾಡಿಕೊಂಡು ರಾಜಕಾರಣ ಮಾಡುತ್ತಿದ್ದರು. ಈಗ ಅವರು ಕೈ ಬಿಡುತ್ತಾರೆ ಎನ್ನುವ ನೋವು ಶುರುವಾಗಿದೆ. ಹಿಂದುಳಿದ ನಾಯಕರು ಅಂತಾ ಬಹಳಷ್ಟು ಜನ ಹೇಳಿಕೊಂಡು ಓಡಾಡುತ್ತಿದ್ದಾರೆ. ಅವರಿಗೆ ಈವರೆಗೂ ಮೀಸಲಾತಿ ಕೊಡಲು ಆಗಲಿಲ್ಲ ಅಂತಾ ಮಾಜಿ ಸಿಎಂ ಸಿದ್ದರಾಮಯ್ಯಗೆ ಪರೋಕ್ಷವಾಗಿ ರಾಮುಲು ತಿರುಗೇಟು ನೀಡಿದರು.
“ಬಿಜೆಪಿ ಮೀಸಲಾತಿ ನೀಡಿ ಕೆಳವರ್ಗದವರ ಜತೆಗೆ ಇದ್ದೇವೆ ಎಂಬುದನ್ನು ಸಿದ್ಧ ಮಾಡಿದೆ. ಕಾಂಗ್ರೆಸ್ ಮುಂಚೆಯಿಂದ ಎಸ್‌ಸಿ, ಎಸ್‌ಟಿ ಜನಾಂಗದವರನ್ನ ಕೂಲಿ ಕೆಲಸದವರ ಹಾಗೇ ನೋಡಿದೆ. ಕೂಲಿ ಕೆಲಸಕ್ಕೆ ತಕ್ಕ ಹಾಗೇ ಸಂಬಳ ಕೊಡುವ ಕೆಲಸ ಮಾಡಲಿಲ್ಲ.ಕೆಳ ಸಮುದಾಯ ಹಾಗೇ ಇರಬೇಕೆಂದು ನೋಡಿದರೂ ಮೀಸಲಾತಿ ಕೊಟ್ಟರೆ ಅವರು ಮುಂದುವರೆದು ತಮಗೆ ತೊಂದರೆ ಆಗುತ್ತದೆ ಎಂದು ಕೊಟ್ಟಿಲ್ಲ. ಕೆಳ ಸಮುದಾಯದವರಿಗೆ ಮೋಸ ಅನ್ಯಾಯ ಮಾಡಿಕೊಂಡು ಬಂದರು. ನಮ್ಮ ಜಾತಿಗಳು ಜಾಗೃತ ಆಗಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುವ ಕೆಲಸ ಮಾಡುತ್ತೇವೆ,” ಎಂದರು.
ಮಾಜಿ ಸಚಿವ ಜನಾರ್ದನ ರೆಡ್ಡಿ ಪಕ್ಷ ಬದಲಿಸಲಿದ್ದಾರೆ ಎಂಬ ರಾಜಕೀಯ ವಲಯದಲ್ಲಿ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, “ಆ ರೀತಿ ಏನೂ ಇಲ್ಲ. ಅವರಿಗೆ ಬೇಸರವಾಗಿತ್ತು. ಆ ಸಂದರ್ಭದಲ್ಲಿ ನಮ್ಮ ನಾಯಕರು ಎಲ್ಲರೂ ಮಾತನಾಡಿದ್ದಾರೆ. ಆ ಭಾಗದ ಹಿರಿಯ ನಾಯಕರು ಇದ್ದಾರೆ, ಹೀಗಾಗಿ ಅವರ ಮನವೊಲಿಸುವ ಕೆಲಸ ಮಾಡುತ್ತೇವೆ. ಯಾವ ವಿಚಾರದಲ್ಲಿ ಬೇಸರ ಆಗಿದೆ ಎಂಬುವುದು ನನಗೂ ಗೊತ್ತಿಲ್ಲ,” ಎಂದರು.
“ವಲಸೆ ಶಾಸಕರು ಯಾರೂ ಬಿಜೆಪಿ ಬಿಟ್ಟು ಹೋಗುವುದಿಲ್ಲ. ಕಾಂಗ್ರೆಸ್ ನಲ್ಲಿದ್ದ ಸಂದರ್ಭದಲ್ಲಿ ಅವರನ್ನು ಸರಿಯಾಗಿ ನಡೆಸಿಕೊಂಡಿಲ್ಲ. ಎಲ್ಲಾ ಮುಗಿದ ಮೇಲೆ ಬನ್ನಿ ಎಂದರೆ ಇವರ ಮಾತು ಯಾರು ಕೇಳುತ್ತಾರೆ . ಬಿಜೆಪಿ ಸ್ಥಾನ ಮಾನ ಕೊಟ್ಟು ಸರಿಯಾಗಿ ನೋಡಿಕೊಳ್ಳುತ್ತಿದೆ ಎಂದರು.
“ರಮೇಶ್ ಜಾರಕಿಹೊಳಿ ಅವರು ಬಹಳ ದೊಡ್ಡ ನಾಯಕರು. ಮುಂದಿನ ದಿನಗಳಲ್ಲಿ ನಮ್ಮ ಪಾರ್ಟಿ ತೀರ್ಮಾನ ತೆಗೆದುಕೊಳ್ಳುವ ಕೆಲಸ ಮಾಡುತ್ತದೆ. ರಮೇಶ್ ನಮ್ಮ ಪಕ್ಷದ, ನಮ್ಮ ಸಮಾಜದ ದೊಡ್ಡ ಶಕ್ತಿ. ರಮೇಶ್ ಜಾರಕಿಹೊಳಿ ಬಿಜೆಪಿ ಬಿಟ್ಟು ಹೋಗುವ ಮನುಷ್ಯರಲ್ಲ, ಏನೇ ಆದರೂ ತೀರ್ಮಾನ ಕೈಗೊಳ್ಳಲು ಜನರಿದ್ದಾರೆ,” ಎಂದರು.
ಕಾಂಗ್ರೆಸ್ 150 ಸ್ಥಾನ ಗೆಲ್ಲುತ್ತೆ ಎಂಬ ಕೈ ನಾಯಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ರಾಮುಲು, ರಾಜ್ಯದಲ್ಲಿ ಕಾಂಗ್ರೆಸ್ ಪರ ಯಾವುದೇ ಅಲೆ ಇಲ್ಲ, ರಾಹುಲ್ ಗಾಂಧಿ ಪಾದಯಾತ್ರೆ ಫ್ಲಾಪ್ ಶೋ ಆಗಿದೆ. ಅವರು ಬಂದರು, ನೋಡಿದರು, ಓಡಿಹೋದರು ಅದನ್ನು ಬಿಟ್ಟರೆ ಬೇರೆ ಏನೂ ಮಾಡಿಲ್ಲ. ಭಾರತ್ ಜೋಡೋ ಪರಿಣಾಮ ದೇಶದಲ್ಲಿ ಎಲ್ಲೂ ಆಗಿಲ್ಲ ಎಂದರು.
ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ನೋಟಿಸ್ ಜಾರಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ