ಅಂಜನಾ ಕುಬೇರ, ವಾರ್ತಾ ಇಲಾಖೆ, ಗದಗ
‘ನ ಚೋರ ಹಾರ್ಯಂ ನ ರಾಜ ಹಾರ್ಯಂ, ನ ಭ್ರಾತೃ
ಭಾಜ್ಯಂ; ನ ಚ ಭಾರಕಾರಿ ವ್ಯಯಂ ಕೃತೇ ವರ್ಧತೇ
ಏವ ನಿತ್ಯಂ ವಿದ್ಯಾಧನಂ ಸರ್ವ ಪ್ರಧಾನಧನಂ
ಎಂಬ ಅರ್ಥಗರ್ಭಿತ ಸುಭಾಷಿತದಂತೆ ಕಳ್ಳಕಾಕರಿಂದ
ರಾಜರಿಂದ ಕದಿಯಲಾಗದ, ಅಣ್ಣ-ತಮ್ಮಂದಿರ
ಮಧ್ಯೆ ಭಾಗ ಮಾಡಲಾಗದ, ಭಾರವಲ್ಲದ ಖರ್ಚು
ಎಷ್ಟೂ ಮಾಡಿದರೂ ವರ್ಧಿಸುವ ವಿದ್ಯಾ ದಾನವು ಎಲ್ಲ
ಧಾನಕ್ಕಿಂತಲೂ ಶ್ರೇಷ್ಠವಾದದ್ದು. ವಿದ್ಯೆಯನ್ನು ಅಮೂಲ್ಯ
ರತ್ನವೆಂದು ಬಣ್ಣಿಸಲಾಗಿದ್ದು, ಇಂತಹ ಅಮೂಲ್ಯ
ವಿದ್ಯೆಯನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯುವ
ಗುರುವಿನ ಸ್ಥಾನ ಪರಮ ಪವಿತ್ರ.
ಭಾರತೀಯ ಶಿಕ್ಷಣ ಕ್ಷೇತ್ರಕ್ಕೊಂದು ಅರ್ಥವತ್ತಾದ
ಚೌಕಟ್ಟು ಕಟ್ಟಿ ಕೊಡುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುವುದರ ಜೊತೆಗೆ ದೇಶದ
ಅಭಿವೃದ್ಧಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದ
ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಭಾರತೀಯರ ಮನದಲ್ಲಿ
ಅಚ್ಚಳಿಯದೇ ಉಳಿದಿದ್ದಾರೆ. ವಿಶ್ವವಿದ್ಯಾಲಯವು
ಬೃಹತ್ ಕಟ್ಟಡಗಳಿಂದ ಕೂಡಿರುವ ಒಂದು ಸಂಸ್ಥೆಯಲ್ಲ.
ಅದು ಅಧ್ಯಾಪಕ-ವಿದ್ಯಾರ್ಥಿಗಳ ನಡುವಣ ಗುರು-
ಶಿಷ್ಯರ ಪವಿತ್ರ ಸಂಬಂಧ. ಆದ್ದರಿಂದ ರಾಧಾಕೃಷ್ಣನ್
ಅವರು ವಿಶ್ವವಿದ್ಯಾನಿಲಯಗಳಲ್ಲಿ ಕೆಲಸ ಮಾಡುವ
ಉಪಾಧ್ಯಾಯರೂ, ದಕ್ಷರೂ ಮತ್ತು ಅರ್ಹರೂ
ಆಗಿರಬೇಕು. ಸಂಸ್ಕಾರಯುತ ವಿದ್ಯಾರ್ಥಿಗಳನ್ನು
ರೂಪಿಸುವುದು ಶಿಕ್ಷಕರ ಕರ್ತವ್ಯವಾಗಬೇಕೆಂಬುವುದು
ರಾಧಾಕೃಷ್ಣನ್ ಅವರ ಆಶಯವಾಗಿತ್ತು.
ಡಾ.ಸರ್ವಪಲ್ಲಿ ರಾಧಾಕೃಷ್ಣನ್ ೧೮೮೮ ಸೆಪ್ಟೆಂಬರ್
೫ರಂದು ದಕ್ಷಿಣ ಭಾರತದ ತಮಿಳುನಾಡಿನ ತಿರುತ್ತಣಿ
ಎಂಬಲ್ಲಿ ಜನಿಸಿದರು. ತಂದೆ ವೀರಸ್ವಾಮಿ, ತಾಯಿ
ಸೀತಮ್ಮ ಜಮೀನ್ದಾರರ ಬಳಿ ದಿನಗೂಲಿ ನೌಕರರಾಗಿ
ಸೇವೆಗೈಯುತ್ತಾ ಮಗನ ಶ್ರೇಯೋಭಿವೃದ್ಧಿಗೆ
ಶ್ರಮಿಸಿದವರು. ಸ್ಕಾಲರ್ಶಿಪ್ ಹಣದಲ್ಲಿಯೇ
ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮುಗಿಸಿದ
ರಾಧಾಕೃಷ್ಣನ್ ಮದ್ರಾಸ್ನ ಕ್ರಿಶ್ಚಿಯನ್ ಕಾಲೇಜ್ನಲ್ಲಿ
ತತ್ವಜ್ಞಾನ ವಿಷಯದ ಮೇಲೆ ಬಿಎ ಮತ್ತು ಎಂಎ
ಪದವಿಗಳನ್ನು ಪಡೆದುಕೊಂಡರು. ಸ್ನಾತಕೋತ್ತರ
ಪದವಿಯಲ್ಲಿ ರಾಧಾಕೃಷ್ಣನ್ ಮಂಡಿಸಿದ ‘ದಿ
ಎಥಿಕ್ಸ್ ಆಫ್ ವೇದಾಂತ ಅವರ ಬದುಕಿನ ದಿಕ್ಕನ್ನೇ
ಬದಲಾಯಿಸಿತು. ರಾಧಾಕೃಷ್ಣನ್ ೧೯೦೯ರಲ್ಲಿ ಮದ್ರಾಸ್
ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಹಾಯಕ ಉಪನ್ಯಾಸಕರಾಗಿ
ಅಚ್ಚುಮೆಚ್ಚಿನ ಶಿಕ್ಷಕ ವೃತ್ತಿ ಆರಂಭಿಸಿದರು.
ಭಾರತದ ಸನಾತನ ಧರ್ಮ ಹಿಂದೂಧರ್ಮದ
ಸಾರ, ವೇದ, ಉಪನಿಷತ್, ಜೈನ್ ತತ್ವಜ್ಞಾನ, ಶಂಕರ
ರಾಮಾನುಜ, ಮಧ್ವ, ಪ್ಲೇಟೋ, ಪ್ಲಾಟಿನಸ್, ಕಾಂತ್,
ಬ್ರಾಡ್ಲೆ ಮುಂತಾದ ಮಹನೀಯರ ತತ್ವಜ್ಞಾನವನ್ನು
ಆಳವಾಗಿ ಅಧ್ಯಯನ ಮಾಡಿದ್ದರು. ಸತತ ಅಧ್ಯಯನ
ಮತ್ತು ಕಠಿಣ ಪರಿಶ್ರಮದಿಂದ ಹಂತಹಂತವಾಗಿ
ಮೇಲೇರುತ್ತಾ ಮುನ್ನಡೆದರು. ೧೯೧೮ರಲ್ಲಿ ಮೈಸೂರು ವಿಶ್ವ
ವಿದ್ಯಾಲಯದ ತತ್ವಜ್ಞಾನದ ವಿಭಾಗದ ಉಪನ್ಯಾಸಕರಾಗಿ
ಆಯ್ಕೆಯಾದರು. ದೇಶ ವಿದೇಶದ ವಿವಿಧ ತತ್ವಜ್ಞಾನ
ಕುರಿತು ಪತ್ರಿಕೆಗಳಲ್ಲಿ ಆಳವಾದ ವಿಚಾರಗಳನ್ನು
ಹೊಂದಿದ ಲೇಖನ ಬರೆಯುತ್ತಾ ‘ದಿ ಫಿಲಾಸಫಿ ಆಫ್
ರವೀಂದ್ರನಾಥ ಠ್ಯಾಗೋರ್ ಎಂಬ ಮೊದಲ ಪುಸ್ತಕ
ಬರೆದರು. ಸಪ್ತಸಾಗರಗಳಾಚೆ ಭಾರತದ ಕೀರ್ತಿ ಪತಾಕೆ
ಹಾರಿಸಿದ ಭಾರತೀಯ ಸ್ವಾತಂತ್ರ್ಯಕ್ಕಾಗಿ ಹೋರಾಡಿದ
ರಾಧಾಕೃಷ್ಣನ್ ಭಾರತೀಯ ಸನಾತನ ಧರ್ಮ, ತತ್ವಜ್ಞಾನ
ಕುರಿತು ವಿದೇಶಿಯರಿಗೆ ಮನವರಿಕೆ ಮಾಡಿಕೊಟ್ಟರು.
ಕ್ರಿ.ಶ.೧೯೩೧ರಲ್ಲಿ ಆಂದ್ರ ವಿಶ್ವವಿದ್ಯಾಲಯದ
ಉಪಕುಲಪತಿಗಳಾಗಿ ಐದು ವರ್ಷಗಳ ಕಾಲ ಉತ್ತಮ
ಶಿಕ್ಷಣ ಸುಧಾರಕರಾಗಿ ಕರ್ತವ್ಯ ನಿರ್ವಹಿಸಿದರು.
ಸರ್ವಪಲ್ಲಿಯವರ ಅವಧಿಯಲ್ಲಿ ವಿಶ್ವ ವಿದ್ಯಾಲಯ
ಅನೇಕ ಶಿಕ್ಷಣ ಮತ್ತು ಶಿಕ್ಷಣೇತರ ಸುಧಾರಣೆ
ಕಂಡಿತು. ೧೯೩೯ರಲ್ಲಿ ಬನಾರಸ್ ವಿಶ್ವ ವಿದ್ಯಾಲಯದ
ಉಪಕುಲಪತಿಗಳಾಗಿ ಆಯ್ಕೆಯಾದರು. ೧೯೪೮ರಲ್ಲಿ ವಿಶ್ವ
ವಿದ್ಯಾಲಯದ ಶಿಕ್ಷಣ ಆಯೋಗದ ಮುಖ್ಯಸ್ಥರನ್ನಾಗಿ
ಸರಕಾರ ನೇಮಿಸಿತು. ೧೯೪೯ರಲ್ಲಿ ಸೋವಿಯತ್
ರಷ್ಯಾಕ್ಕೆ ಭಾರತದ ರಾಯಭಾರಿಯಾಗಿ ನೇಮಕಗೊಂಡ
ರಾಧಾಕೃಷ್ಣನ್ ಸ್ಟಾಲಿನ್ನಂತಹ ಮೇಧಾವಿಯ
ಸರಿಸಮನಾಗಿ ನಿಲ್ಲುವ ವ್ಯಕ್ತಿತ್ವ ಬೆಳೆಸಿಕೊಂಡರು.
೧೯೫೨ರಲ್ಲಿ ಭಾರತದ ಶಿಕ್ಷಕನೊಬ್ಬ ಮೊಟ್ಟಮೊದಲ
ಉಪರಾಷ್ಟ್ರಪತಿಯಾಗಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್
ನೇಮಕಗೊಂಡರು. ಗುರುಗಳು ಉಪರಾಷ್ಟ್ರಪತಿಯಾಗಿ
ದೆಹಲಿಗೆ ಹೊರಡುವ ಸಂದರ್ಭದಲ್ಲಿ ಮಹಾರಾಜ
ಕಾಲೇಜಿನ ವಿದ್ಯಾರ್ಥಿಗಳು ಅವರನ್ನು ಕಳುಹಿಸಿಕೊಡಲು
ಸಾರೋಟ ತಂದು ಅಲಂಕರಿಸಿ ಕುದುರೆಯ ಬದಲು
ತಾವೇ ಕುದುರೆಗಳಂತೆ ರಾಧಾಕೃಷ್ಣ್ನ್ ಅವರು ಕುಳಿತ
ಸಾರೋಟ ಎಳೆದು ಬಿಳ್ಕೋಟ್ಟರು. ರಾಜ್ಯಸಭೆಯಲ್ಲಿ
ರಾಧಾಕೃಷ್ಣನ್ ಸಂಸ್ಕೃತ ಶ್ಲೋಕಗಳ ಮೂಲಕ
ಸಂಸತ್ ಸದಸ್ಯರ ಗಮನ ಸೆಳೆಯುತ್ತಿದ್ದರು. ಭಾರತ
ಸರಕಾರ ಇವರ ಸೇವೆ ಗುರುತಿಸಿ ಉಪರಾಷ್ಟ್ರಪತಿ
ಹುದ್ದೆಯಲ್ಲಿರುವಾಗಲೇ ೧೯೫೪ರಲ್ಲಿ ಪ್ರತಿಷ್ಠಿತ ಭಾರತರತ್ನ
ಪ್ರಶಸ್ತಿ ನೀಡಿ ಗೌರವಿಸಿತು. ಇದೇ ವೇಳೆ ಅಮೆರಿಕಾದಲ್ಲಿ
ಫಿಲಾಸಫಿ ಆಪ್ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಪುಸ್ತಕ
ಬಿಡುಗಡೆಗೊಂಡಿತು. ಡಾ. ರಾಜೇಂದ್ರ ಪ್ರಸಾದ ನಂತರ
೧೯೬೨ರಲ್ಲಿ ಭಾರತದ ಎರಡನೇ ರಾಷ್ಟ್ರಪತಿ ಆಗಿ
ಆಯ್ಕೆಯಾದ ಸರ್ವಪಲ್ಲಿ ದೇಶದ ಸರ್ವತೋಮುಖ
ಅಭಿವೃದ್ಧಿಗೆ ಶ್ರಮಿಸಿದರು. ಅಂತರಾಷ್ಟ್ರೀಯ ಮಟ್ಟದಲ್ಲಿ
ಭಾರತದ ಸಂಬಂಧಗಳನ್ನು ಉನ್ನತೀಕರಣಗೊಳಿಸಿ
ದೇಶದೊಳಗಿನ ಆಂತರಿಕ ಕಲಹಗಳಿಗೆ ತಿಲಾಂಜಲಿ
ಇಡುತ್ತಾ ದೇಶವನ್ನು ಸುಭಿಕ್ಷವಾಗಿಸಿದರು. ಅನೇಕ
ಬಿರುದುಗಳನ್ನು ಪಡೆದ ಇವರು ತಮ್ಮ ರಾಷ್ಟ್ರಪತಿ
ಹುದ್ದೆಯ ಅಧಿಕಾರಾವಧಿ ಮುಗಿದ ಬಳಿಕ ನಿವೃತ್ತಿ
ಜೀವನವನ್ನು ಮದ್ರಾಸಿನ ಮೈಲಾಪುರದಲ್ಲಿ ಕಳೆದರು.
ಕ್ರಿ.ಶ. ೧೯೭೫ರ ಎಪ್ರಿಲ್ ೧೭ ರಂದು ನಿಧನರಾದರು.
ಶೈಕ್ಷಣಿಕ ರಂಗದಲ್ಲಿ ಅಭಿವೃದ್ಧಿ ಹೊಂದಿದಾಗ
ಮಾತ್ರ ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶೈಕ್ಷಣಿಕ
ರಂಗದಲ್ಲಿ ಕೆಲ ಸುಧಾರಣೆಗಳು ಪ್ರಸ್ತುತ ಪೀಳಿಗೆಯ
ಶಿಕ್ಷಕವೃಂಧಕ್ಕೆ ದಾರಿದೀಪವಾಗಲಿ. ದೇಶದ
ನಾಗರಿಕೆಲ್ಲರೂ ಸರ್ವಪಲ್ಲಿಯವರ ತತ್ವಾದರ್ಶ
ಜೀವನದಲ್ಲಿ ಅಳವಡಿಸಿಕೊಂಡು ಸಾಗೋಣ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ