ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದೇಶ ಕಟ್ಟುವ ಉತ್ಸಾಹದಲ್ಲಿರುವ ಶಿಕ್ಷಕರು ಇನ್ನೊಬ್ಬರ ಜೀವ ಉಳಿಸಲು ಅಂಗಾಂಗ ದಾನ ಹಾಗೂ ದೇಹದಾನಕ್ಕೆ ಮುಂದಾಗುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಅದರಂತೆ ಸಮಾಜದಲ್ಲಿಯೂ ಕೂಡ ಅಂಗಾಂಗಗಳನ್ನು ದಾನಮಾಡಲು ಮುಂದೆ ಬರುವಂತೆ ಪ್ರೇರೆಪಿಸಬೇಕೆಂದು ಕೆಎಲ್‌ಇ ಸಂಸ್ಥೆಯ ಡಾ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಕರ್ನಲ್ ಡಾ. ದಯಾನಂದ ಕರೆ ನೀಡಿದರು.
ಬೆಳಗಾವಿಯ ರೋಟರಿ ಕ್ಲಬ್ ಸೌತ್, ವೇದಾಂತ ಫೌಂಡೇಶನ್, ರೆಡ್ ಕ್ರಾಸ್ ಸೊಸೈಟಿ ಆಫ್ ಇಂಡಿಯಾ ಸಂಯುಕ್ತಾಶ್ರಯದಲ್ಲಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಅಂಗಾಂಗ ಮತ್ತು ದೇಹದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕದ ಈ ಭಾಗದಲ್ಲಿ ಅಂಗಾಂಗ ದಾನವನ್ನು ಉತ್ತೇಜಿಸುವಲ್ಲಿ ವಿವಿಧ ಸರಕಾರೇತರ ಸಂಸ್ಥೆಗಳ ಸಹಯೋಗವು ಉತ್ತಮ ಹೆಜ್ಜೆಯಾಗಿದೆ. ಅಂಗಾಂಗ ಮತ್ತು ದೇಹದಾನದ ಕುರಿತು ಧಾರ್ಮಿಕ ಮುಖಂಡರು ಸಮಾಜದಲ್ಲಿ ಅರಿವು ಮೂಡಸಬೇಕೆಂದು ಕರೆ ನೀಡಿದರು.
ಆಸ್ಪತ್ರೆಯ ಕ್ಲಿನಿಕಲ್ ಡೈರೆಕ್ಟರ್ ಡಾ. ಆರ್.ಬಿ. ನೇರ್ಲಿ ಮಾತನಾಡಿ, ಭಾರತದಲ್ಲಿ 10 ಲಕ್ಷ ಜನರಿಗೆ ಕೇವಲ ಶೇ. 7.9ರಷ್ಟು ಮಾತ್ರ ಜನರು ಅಂಗಾಂಗಳನ್ನು ದಾನ ಮಾಡುತ್ತಿದ್ದು, ಅಂಗಾಂಗ ಕಸಿಗಾಗಿ ಕಾಯುತ್ತಿರುವವರಲ್ಲಿ ಪ್ರತಿದಿನ 17 ಜನರು ಸಾವಿಗೀಡಾಗುತ್ತಿದ್ದಾರೆ. ದೇಶದಲ್ಲಿ ಮಾನವನ ಅಂಗಾಂಗಳ ಲಭ್ಯತೆ ಅತೀ ಕಡಿಮೆ ಇದೆ. ಪ್ರತಿ 9 ನಿಮಿಷಕ್ಕೆ ಓರ್ವ ವ್ಯಕ್ತಿ ಈ ಪಟ್ಟಿಗೆ ಸೇರ್ಪಡೆಗೊಳ್ಳುತ್ತಿದ್ದಾನೆ. ತಲೆಗೆ ಗಾಯವಾಗಿ ಮೆದುಳು ನಿಷ್ಕ್ರಿಯಗೊಂಡಾಗ ವ್ಯಕ್ತಿಯ ಅಂಗಾಂಗಳನ್ನು ದಾನ ಮಾಡುವುದರಿಂದ 8 ಜನರ ಜೀವ ಉಳಿಸಬಹುದು. ಸಮಾಜದಲ್ಲಿ ಅರಿವು ಮೂಡಿಸಬೇಕಾದ ಕರ‍್ಯವನ್ನು ತೀವ್ರತರವಾದ ಕ್ರಿಯಾ ಯೋಜನೆ ರೂಪಿಸಬೇಕಾಗಿದೆ ಅವರು ವಿವರಿಸಿದರು.
ಡಾ. ಸತೀಶ ಧಾಮಣೆಕರ ಮಾತನಾಡಿ, ಅಂಗಾಂಗ ದಾನ ಮತ್ತು ಕಸಿ 21ನೇ ಶತಮಾನದ ವೈದ್ಯಕೀಯ ಅದ್ಭುತವಾಗಿದೆ ಎಂದರು.
ಅಶೋಕ ನಾಯ್ಕ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಡಾ. ಡಿ.ಎನ್.ಮಸಾಳೆ ಮಾತನಾಡಿದರು. ವೇದಾಂತ ಫೌಂಡೇಶನ್ ನೇತೃತ್ವದಲ್ಲಿ ವಿವಿಧ ಶಾಲೆಯ 70 ಕ್ಕೂ ಹೆಚ್ಚು ಶಿಕ್ಷಕರು ತಮ್ಮ ದೇಹ ಮತ್ತು ಅಂಗಾಂಗಳ ದಾನ ಮಾಡುವುದಾಗಿ ಪ್ರತಿಜ್ಞೆ ಮಾಡಿದರು.
ತಾಯಿ, ನವಜಾತ ಶಿಶು ಹಾಗೂ ಮಕ್ಕಳ ಆರೋಗ್ಯದ ಕುರಿತಾದ ತೃತೀಯ ಅಂತರಾಷ್ಟ್ರೀಯ ಸಮ್ಮೇಳನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ