
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶಾದ್ಯಂತ ಕೊರೊನಾ ಮಾಹಾಮಾರಿ ವ್ಯಾಪಕವಾಗಿ ಹರಡುತ್ತಿದ್ದು, ಈ ನಡುವೆ ಕೇಂದ್ರ ಸರ್ಕಾರ ಆದಾಯ ತೆರಿಗೆ ಪಾವತಿಯ ಗಡುವನ್ನು ಮತ್ತೆ ವಿಸ್ತರಿಸಿದೆ.
2019-20ನೇ ಹಣಕಾಸು ವರ್ಷದ ಐಟಿ ರಿಟರ್ನ್ ಫೈಲ್ ಮಾಡಲು ನವೆಂಬರ್ 30ರವರೆಗೆ ಸಮಯಾವಕಾಶ ನೀಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಘೋಷಿಸಿದೆ.
ಇದೇ ವೇಳೆ, ಟಿಡಿಎಸ್ ಅಥವಾ ಟಿಸಿಎಸ್ ಸರ್ಟಿಫಿಕೇಟ್ಗಳನ್ನ ಸಲ್ಲಿಸುವ ದಿನಾಂಕವನ್ನೂ ಜುಲೈ 31ಕ್ಕೆ ವಿಸ್ತರಿಸಿ ಐಟಿ ಇಲಾಖೆ ಕ್ರಮ ಕೈಗೊಂಡಿದೆ. ಟ್ಯಾಕ್ ಆಡಿಟ್ ವರದಿಯನ್ನು ಸಲ್ಲಿಸುವ ಡೆಡ್ ಲೈನ್ ಅಕ್ಟೋಬರ್ 31ಕ್ಕೆ ವಿಸ್ತರಣೆಯಾಗಿದೆ.
ಎರಡು ದಿನಗಳ ಹಿಂದಷ್ಟೇ ಇದಕ್ಕೆ ಪೂರಕವಾದ ಕ್ರಮಗಳನ್ನ ಐಟಿ ಇಲಾಖೆ ಕೈಗೊಂಡಿತ್ತು. ತೆರಿಗೆ ಉಳಿತಾಯದ ಹೂಡಿಕೆಗಳಿಗೆ ಇದ್ದ ಗಡುವನ್ನು ಜುಲೈ 31ರವರೆಗೆ ವಿಸ್ತರಿಸಿತ್ತು. ಇದರಿಂದ ಹೂಡಿಕೆದಾರರ ತಮ್ಮ ಹಣವನ್ನ ಈ ಯೋಜನೆಗಳಿಗೆ ಹಾಕಿ ಆ ಮೂಲಕ ತೆರಿಗೆ ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದಿತ್ತು. ಈ ಹೂಡಿಕೆಗಳನ್ನ ಐಟಿ ರಿಟರ್ನ್ ಸಲ್ಲಿಕೆ ವೇಳೆ ನಮೂದಿಸಿ ತೆರಿಗೆ ಹಣ ಕ್ಲೈಮ್ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಹಾಗಾಗಿ, ಉಳಿತಾಯ ಯೋಜನೆಗೆ ಹೂಡಿಕೆ ಮಾಡುವ ಗಡುವು ಹಾಗೂ ಐಟಿ ರಿಟರ್ನ್ ಫೈಲ್ ಮಾಡುವ ಗಡುವು ಎರಡೂ ಪೂರಕವಾಗಿರುವಂತೆ ಐಟಿ ಇಲಾಖೆ ಎಚ್ಚರ ವಹಿಸಿದೆ.