*ಜೈನಮುನಿ ಹತ್ಯೆ ಖಂಡಿಸಿ ತೀವ್ರಗೊಂಡ ಪ್ರತಿಭಟನೆ; ಪ್ರಕರಣದ ಹಿಂದೆ ಉಗ್ರರ ಕೈವಾಡ ಶಂಕೆ ಎಂದ ಶಾಸಕ; ಸದನದಲ್ಲಿಯೂ ವಿಷಯ ಪ್ರಸ್ತಾಪಕ್ಕೆ ಮುಂದಾದ ಬಿಜೆಪಿ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ನಂದಿಪರ್ವತ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಒಂದೆಡೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಹುಕ್ಕೇರಿ ಸೇರಿದಂತೆ ವಿವಿಧೆಡೆ ಭಕ್ತರು ಪ್ರತಿಭಟನೆ ಆರಂಭಿಸಿದ್ದಾರೆ. ಇನ್ನೊಂದೆಡೆ ರಾಜ್ಯ ಬಿಜೆಪಿ ವಿಧಾನಸಭಾ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪ ಮಾಡಲು ಮುಂದಾಗಿದೆ.
ಜೈನಮುನಿ ಹತ್ಯೆ ಹಿಂದೆ ಐಸಿಸ್ ಮಾದರಿ ಉಗ್ರರ ಕೈವಾಡವಿರುವ ಶಕೆ ಇದೆ ಎಂದು ಶಾಸಕ ಸಿದ್ದು ಸವದಿ ಆರೋಪಿಸಿದ್ದಾರೆ. ಜೈನಮುನಿಯನ್ನು ವಿದ್ಯುತ್ ಶಾಕ್ ಕೊಟ್ಟು ಕೊಲೆಗೈದು ಬಳಿಕ ದೇಹವನ್ನು ತುಂಡು ತುಂಡು ಮಾಡಿ ಮೂಟೆ ಕಟ್ಟಿ ಬಾವಿಗೆ ಎಸೆದಿದ್ದಾರೆ. ಈ ರೀತಿ ಭಯಾನಕವಾಗಿ ಹತ್ಯೆ ಮಾಡುವುದು ಉಗ್ರರ ಕೃತ್ಯ. ಈ ಹಿನ್ನೆಲೆಯಲ್ಲಿ ಸೂಕ್ತ ತನಿಖೆ ನಡೆಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಜೈನಮುನಿ ಹತ್ಯೆ ಖಂಡಿಸಿ ಬೆಳಗಾವಿಯ ಚಿಕ್ಕೋಡಿ, ಹುಕ್ಕೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಹುಕ್ಕೇರಿಯಲ್ಲಿ ವಕೀಲರು ಕಲಾಪ ಬಹುಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇನ್ನೊಂದೆಡೆ ಜೈನಮುನಿ ಹತ್ಯೆ ಖಂಡಿಸಿ ಹುಬ್ಬಳ್ಳಿಯ ವರೂರಿನಲ್ಲಿ ನವಗ್ರಹ ತೀರ್ಥ ಕ್ಷೇತ್ರ ಗುಣಧರನಂದಿಶ್ರೀಗಳು ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಇಂತಹ ಘಟನೆ ಮರುಕಳಿಸಬಾರದೆಂದು ಆಗ್ರಹಿಸಿದ್ದಾರೆ.
ಈ ನಡುವೆ ವರೂರು ಕ್ಷೇತ್ರಕ್ಕೆ ಭೇಟಿ ನೀಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಗುಣಧರನಂದಿಶ್ರಿಗಳ ಜೊತೆ ಚರ್ಚೆ ನಡೆಸಿದ್ದು, ಸತ್ಯಾಗ್ರಹ ಹಿಂಪಡೆಯುವಂತೆ ಮನವಿ ಮಾಡಿದ್ದಾರೆ. ಪ್ರಕರಣದ ತನಿಖೆ ಬಗ್ಗೆಯೂ ಮಾತುಕತೆ ನಡೆಸಿದ್ದಾರೆ.
ಮತ್ತೊಂದೆಡೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಇಂದು ಸದನದ ಕಲಾಪದ ವೇಳೆ ಜೈನ ಮುನಿ ಹತ್ಯೆ ಪ್ರಕರಣವನ್ನು ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ. ಇದೇ ವಿಚಾರ ಮುಂದಿಟ್ಟು ಇಂದು ಬಿಜೆಪಿ ಸದನದಲ್ಲಿ ಹೋರಾಟ ನಡೆಸುವ ಸಾಧ್ಯತೆ ಇದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ