Politics

*ಕಾಂಗ್ರೆಸ್ ಸೇರ್ತಾರಾ ಶ್ರೀರಾಮುಲು? ಜನಾರ್ಧನ ರೆಡ್ಡಿ ಹೊಸ ಬಾಂಬ್*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಬಿಜೆಪಿಯಲ್ಲಿ ಆಂತರಿಕ ಕಿತ್ತಾಟ, ಬಂಡಾಯದ ಬೇಗುದಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಂಡೂರು ಉಪಚುನಾವಣೆ ಸೋಲಿನ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಶ್ರೀರಾಮುಲು ವಿರುದ್ಧ ಆರೋಪ ಕೇಳಿಬಂದ ಬೆನ್ನಲ್ಲೇ ಶ್ರೀರಾಮುಲು ಬಿಜೆಪಿ ರಾಜ್ಯ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನನ್ನ ವಿರುದ್ಧ ವರಿಷ್ಠರಿಗೆ ದೂರು ನೀಡಿ, ಇಲ್ಲಸಲ್ಲದ ಆರೋಪ ಮಡುತ್ತಿರುವುದು ಜನಾರ್ಧನ ರೆಡ್ಡಿ ಎಂದು ಸ್ನೇಹಿತನ ವಿರುದ್ಧವೇ ಹರಿಹಾಯ್ದಿದ್ದರು. ಈ ರೀತಿ ಮಾಡುವುದಾದರೆ ನಾನು ಪಕ್ಷವನ್ನು ಬಿಡಲೂ ಸಿದ್ಧನಿದ್ದೇನೆ ಎಂದು ಬಹಿರಂಗ ಹೇಳಿಕೆ ನೀಡಿದ್ದರು.

ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಶ್ರೀರಾಮುಲು ಕೋಪಕ್ಕೆ ಕಾರಣವೇನು ಎಂಬುದನ್ನು ತಮ್ಮದೇ ಶೈಲಿಯಲ್ಲಿ ವಿವರಿಸಿದ್ದಾರೆ. ಅಲ್ಲದೇ ತಾನು ಯಾವ ವರಿಷ್ಠರಿಗೂ ಶ್ರೀರಾಮುಲು ಬಗ್ಗೆ ದೂರು ನೀಡಿಲ್ಲ, ಚಾಡಿ ಹೇಳಿಲ್ಲ. ಚಾಡಿ ಹೆಲುವ ಅವಶ್ಯಕತೆಯೂ ನನಗಿಲ್ಲ ಎಂದು ಹೇಳಿದ್ದಾರೆ.

ಶ್ರೀರಾಮುಲುವನ್ನು ನಾನು ಹೇಗೆ ಬೆಳೆಸಿದ್ದೇನೆ ಎಂಬುದು ರಾಜ್ಯದ ಜನತೆಗೆ ಗೊತ್ತಿರುವ ವಿಷಯ. ತಪ್ಪು ದಾರಿಯಲ್ಲಿ ಹೋಗಲು ಮುಂದಾಗಿದ್ದ ಅವರನ್ನು ಸನ್ಮಾರ್ಗದತ್ತ ಕರೆತಂದಿದ್ದು ನಾನು, ಅದೇ ತಪ್ಪಾಗಿದೆ. ರಾಮುಲು ಇಂದು ರಾಜಕೀಯವಾಗಿ ಈ ಹಂತಕ್ಕೆ ಬೆಳೆಯಲು ಕಾರಣ ನಾನು. ನಾನು ಅವರ ವಿರುದ್ಧ ಯಾರಿಗೂ ದೂರು ನೀಡಿಲ್ಲ. ನೀಡುವುದೂ ಇಲ್ಲ ಎಂದರು.

ಶ್ರೀರಾಮುಲು ಕೋಪಕ್ಕೆ ಕಾರಣ ಡಿ.ಕೆ.ಶಿವಕುಮಾರ್ ಅವರೊಂದಿಗಿನ ಮಾತುಕತೆ. ಸತೀಶ್ ಜಾರಕಿಹೊಳಿ ಅವರನ್ನು ಮಣಿಸಲು ಡಿ.ಕೆ.ಶಿವಕುಮಾರ್ ಶ್ರೀರಾಮುಲು ಅವರೊಂದಿಗೆ ಮಾತನಾಡಿದ್ದಾರೆ. ಹಾಗಾಗಿ ಪಕ್ಷದ ಬಗ್ಗೆ ಅವರಿಗೆ ಅಸಮಾಧಾನ ಶುರುವಾಗಿದೆ. ಇದನ್ನು ನನಗೆ ಯಾರೋ ನೇರವಾಗಿ ಬಂದು ಹೇಳಿಲ್ಲ. ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿ ಬಂದಿರುವುದನ್ನು ನೋಡಿ ಹೇಳುತ್ತಿದ್ದೇನೆ ಎಂದರು.

ಇಷ್ಟಕ್ಕು ಶ್ರೀರಾಮುಲು ಪಕ್ಷ ಬಿಡುತ್ತೇನೆ ಎಂಬುದು ಇದೇ ಹೊಸದೇನೂ ಅಲ್ಲ. ಈ ಹಿಂದೆಯೂ ಹಲವು ಬಾರಿ ಈ ಮಾತುಗಳನ್ನು ಹೇಳಿದ್ದರು. ಇನ್ನು ನೀನು ಬಿಜೆಪಿಯಲ್ಲಿ ಇರಬೇಕಾ ಅಥವಾ ಬೇಡವಾ ಎಂಬುದು ನಿನಗೆ ಹಾಗೂ ಪಕ್ಷಕ್ಕೆ ಬಿಟ್ಟಿದ್ದು. ಇದು ಜನಾರ್ಧನ ರೆಡ್ಡಿಗೆ ಸಂಬಂಧಿಸಿದ ವಿಚಾರವಲ್ಲ. ಈ ಬಗ್ಗೆ ಸ್ವತಃ ನೀನು ವಿಚಾರ ಮಾಡು. ನಿನ್ನ ಮನಸ್ಸಿಗೆ ಏನು ಅನಿಸುತ್ತದೆ ಅದನ್ನು ಮಾಡು. ಅದು ನಿನ್ನ ತೀರ್ಮಾನ. ಆದರೆ ಅನಗತ್ಯವಾಗಿ ಜನಾರ್ಧನ ರೆಡ್ಡಿ ಮೇಲೆ ಆರೋಪಗಳನ್ನು ಮಾಡುವುದು, ದೂರುವುದು ಸರಿಯಲ್ಲ ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button