ಜಾರಕಿಹೊಳಿ ಸಾಮ್ರಾಜ್ಯ V/S ಪಾಟೀಲ್ ಸಾಮ್ರಾಜ್ಯ
ಎಂ.ಕೆ.ಹೆಗಡೆ, ಬೆಳಗಾವಿ -ಇನ್ನೇನು ಕೆಲವೇ ದಿನಗಳಲ್ಲಿ ಘೋಷಣೆಯಾಗಲಿರುವ ಉಪಚುನಾವಣೆ ಕದನದ ಹಿನ್ನೆಲೆಯಲ್ಲಿ ದಕ್ಷಿಣದಲ್ಲಿ ಎಂ.ಟಿ.ಬಿ. ನಾಗರಾಜ ಅವರ ಹೊಸಕೋಟೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದರೆ, ಉತ್ತರದಲ್ಲಿ ರಮೇಶ ಜಾರಕಿಹೊಳಿ ಅವರ ಗೋಕಾಕ ಸುದ್ದಿಯಲ್ಲಿದೆ.
ಕಳೆದ ಹಲವು ವರ್ಷಗಳಿಂದ ಹೊಗೆಯಾಡುತ್ತಿದ್ದ, ಜಾರಕಿಹೊಳಿ ಸಹೋದರರ ಮಧ್ಯೆಯೇ ನೇರ ಹಣಾಹಣಿಗೆ ಈ ಬಾರಿ ಅಖಾಡ ಸಿದ್ದವಾಗುತ್ತಿದೆ. ತೀರಾ ಅನ್ಯೋನ್ಯವಾಗಿದ್ದ ಸಹೋದರ ರಮೇಶ ವಿರುದ್ಧ ಲಖನ್ ಕಣಕ್ಕಿಳಿಯುತ್ತಾರಾ ಎನ್ನುವ ಸಂದೇಹವೂ ಈಗ ನಿಧಾನವಾಗಿ ನಿವಾರಣೆಯಾಗುತ್ತಿದೆ. ರಮೇಶ ಬೆಂಬಲಕ್ಕೆ ಬಾಲಚಂದ್ರ, ಲಖನ್ ಬೆಂಬಲಕ್ಕೆ ಸತೀಶ್ ನಿಲ್ಲಲಿದ್ದಾರೆ.
ಸಾಮ್ರಾಜ್ಯವೇ ಚುನಾವಣೆಯ ಕೇಂದ್ರ
ಗೋಕಾಕದಲ್ಲಿ ಅಂಬಿರಾವ್ ಪಾಟೀಲ್ ಸಾಮ್ರಾಜ್ಯ ನಿರ್ನಾಮ ಮಾಡಲಾಗುವುದು ಎಂದು ಸತೀಶ್ ಜಾರಕಿಹೊಳಿ ನೀಡಿದ ಹೇಳಿಕೆ ಮತ್ತು ಜಾರಕಿಹೊಳಿ ಸಾಮ್ರಾಜ್ಯವನ್ನು ಅಲ್ಲಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವ ಬಾಲಚಂದ್ರ ಹೇಳಿಕೆ ಈ ಬಾರಿಯ ಚುನಾವಣೆಯ ಕೇಂದ್ರ ವಿಷಯ. ಈ ಎರಡೂ ಹೇಳಿಕೆಗಳು ಮೇಲ್ನೋಟಕ್ಕೆ ಒಂದೇ ಎನಿಸುತ್ತಿದೆ. ಇಬ್ಬರ ಹೇಳಿಕೆಗಳಲ್ಲೂ ಜಾರಕಿಹೊಳಿ ಸಾಮ್ರಾಜ್ಯ ಕೆಡವಲು ಯಾರಿಗೂ ಅವಕಾಶವಿಲ್ಲ ಎನ್ನುವ ಧ್ವನಿ ಇದೆ.
ಆದರೆ, ಸತೀಶ್ ಹೇಳಿಕೆಯ ಹಿಂದಿರುವುದು ಅಂಬಿರಾವ್ ಪಾಟೀಲ್ ಎಂಬ ವ್ಯಕ್ತಿ ಜಾರಕಿಹೊಳಿ ಸಾಮ್ರಾಜ್ಯವನ್ನು ಈಗಾಗಲೆ ಅಲ್ಲಾಡಿಸುತ್ತಿದ್ದಾರೆ. ಅವರೇ ನಮ್ಮ ಮೇನ್ ಟಾರ್ಗೆಟ್ ಎನ್ನುವ ಅರ್ಥ. ಅಂಬಿರಾವ್ ರಮೇಶ ಜಾರಕಿಹೊಳಿ ಅಳಿಯ. ರಮೇಶ ಜಾರಕಿಹೊಳಿಯ ಎಲ್ಲ ವ್ಯವಹಾರಗಳನ್ನು ನೋಡಿಕೊಳ್ಳುವವರು ಅವರೇ. ರಮೇಶ್ ಜಾರಕಿಹೊಳಿಯನ್ನು ನಿಯಂತ್ರಿಸುತ್ತಿದ್ದಾರೆ ಹಾಗೂ ಸಂಪೂರ್ಣ ಆಡಳಿತದ ಮೇಲೆ ನಿಯಂತ್ರಣ ಹೇರಿದ್ದಾರೆ ಎನ್ನುವ ಕಾರಣಕ್ಕೆ ಅಂಬಿರಾವ್ ಮೇಲೆ ಸತೀಶ್ ಗೆ ಸಿಟ್ಟು.
ಅಂಬಿರಾವ್ ಕಾರಣಕ್ಕಾಗಿ ಗೋಕಾಕದಲ್ಲಿ ಪ್ರತಿಭಟನೆ ನಡೆಸುವುದಾಗಿ ಸತೀಶ್ ಇತ್ತೀಚೆಗಷ್ಟೆ ಹೇಳಿಕೆಯನ್ನೂ ನೀಡಿದ್ದರು. ಅಧಿಕಾರಿಗಳು ಅಂಬಿರಾವ್ ಮಾತು ಕೇಳಿ ಆಡಳಿತ ನಡೆಸುತ್ತಿದ್ದಾರೆ. ಹೀಗಾದರೆ ಜನರೊಂದಿಗೆ ಸೇರಿ ಪ್ರತಿಭಟನೆ ನಡೆಸುತ್ತೇನೆ ಎಂದಿದ್ದರು.
ಜಾರಕಿಹೊಳಿ V/S ಜಾರಕಿಹೊಳಿ
ಮಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆನ್ನುವ ತಂತ್ರ ಹೆಣೆಯುತ್ತಿರುವ ಸತೀಶ್, ರಮೇಶ್ ವಿರುದ್ಧ ಲಖನ್ ಕಣಕ್ಕಿಳಿಸಲು ತಯಾರಿ ನಡೆಸಿದ್ದಾರೆ. ಇದಕ್ಕೆ ಲಖನ್ ಕೂಡ ಈಗಾಗಲೆ ಸಮ್ಮತಿಸಿದ್ದಾರೆ. ಹಾಗಾಗಿ ಇಬ್ಬರೂ ಈಗಾಗಲೆ ಚುನಾವಣೆ ತಯಾರಿ ಆರಂಭಿಸಿದ್ದಾರೆ. ಇದನ್ನು ನೋಡಿದರೆ ಈ ಚುನಾವಣೆ ಜಾರಕಿಹೊಳಿ V/S ಜಾರಕಿಹೊಳಿ ಆಗಿ ಮಾರ್ಪಡುವ ಲಕ್ಷಣಗಳಿವೆ.
ಜಾರಕಿಹೊಳಿ ಸಹೋದರರ ಮಧ್ಯ ಭಿನ್ನಮಕ ಇದೇ ಮೊದಲೇನಲ್ಲ. ಆದರೆ ಸಮೀಕರಣ ಮಾತ್ರ ಆಗಾಗ ಬದಲಾಗುತ್ತಿರುತ್ತವೆ. ಒಂದೊಂದು ಚುನಾವಣೆಯಲ್ಲೂ ಯಾರು ಯಾರ ಬೆನ್ನಿಗೆ ನಿಲ್ಲಲಿದ್ದಾರೆ ಎನ್ನುವುದನ್ನು ಹೇಳುವುದೇ ಕಷ್ಟ ಎನ್ನುವ ಸ್ಥಿತಿ ಇರುತ್ತದೆ.
ಹಿಂದಿನ ಚುನಾವಣೆಯವರೆಗೂ ಲಖನ್ ಜಾರಕಿಹೊಳಿ ರಮೇಶ್ ಬೆನ್ನಿಗೆ ನಿಂತಿದ್ದಾರೆ. ಕಳೆದ ಚುನಾವಣೆಯಲ್ಲಿ ಸತೀಶ್ ವಿರುದ್ಧ ಸಾಕಷ್ಟು ಗುಡುಗಿದ್ದ ಲಖನ್, ಸತೀಶ್ ವಿರುದ್ಧವೇ ಸ್ಪರ್ಧಿಸುವುದಾಗಿಯೂ ಘೋಷಿಸಿದ್ದರು. ಒಂದು ಹಂತದಲ್ಲಿ ಬಿಜೆಪಿ ಸೇರುವುದಕ್ಕೂ ಸಿದ್ದರಾಗಿದ್ದರು. ಸ್ವಲ್ಪ ದಿನದ ಹಿಂದೆ ಲಕ್ಷ್ಮಿ ಹೆಬ್ಬಾಳಕರ್ ವಿರುದ್ಧ ಸತೀಶ್, ರಮೇಶ ಒಂದಾಗಿಯೇ ಸಮರ ಸಾರಿದ್ದರು.
ಬದಲಾದ ಸಮೀಕರಣ
ಆದರೆ ಈ ಬಾರಿ ಇದು ಬದಲಾಗಿದೆ. ಲಖನ್ ಅವರು ರಮೇಶ್ ಜಾರಕಿಹೊಳಿಯಿಂದ ದೂರವಾಗಿ ಸತೀಶ್ ಬೆನ್ನಿಗೆ ನಿಂತಿದ್ದಾರೆ. ಅಂಬಿರಾವ್ ವಿರುದ್ಧ ಲಖನ್ ಕೂಡ ಆಪ್ತ ವಲಯಗಳಲ್ಲಿ ಅಸಮಾಧಾನ ತೋಡಿಕೊಂಡಿದ್ದಾರೆ. ಜಾರಕಿಹೊಳಿ ಕುಟುಂಬದ ಬಲ ಕುಗ್ಗಲು ರಮೇಶ ಕಾರಣರಾಗುತ್ತಿದ್ದಾರೆ. ಅಂಬಿರಾವ್ ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ. ತಾವೂ ಹಾಳಾಗುವ ಜೊತೆಗೆ ಕುಟುಂಬವನ್ನೂ ರಮೇಶ್ ಹಾಳು ಮಾಡುತ್ತಿದ್ದಾರೆ ಎನ್ನುವ ಆಕ್ರೋಶ ಲಖನ್ ಅವರಿಗಿದೆ.
ಸಾಮಾನ್ಯವಾಗಿ ಜಾರಕಿಹೊಳಿ ಸಹೋದರರ ಮಧ್ಯೆ ಭಿನ್ನಾಭಿಪ್ರಾಯ ಬಂದಾಗಲೆಲ್ಲ ಮಧ್ಯಸ್ಥಿಕೆ ವಹಿಸುತ್ತ, ಎಲ್ಲರನ್ನೂ ಸಮಾಧಾನಪಡಿಸುತ್ತ ಬಂದವರು ಬಾಲಚಂದ್ರ ಜಾರಕಿಹೊಳಿ. ಯಾವುದೇ ವಿವಾದಕ್ಕೆ ಆಸ್ಪದ ಕೊಡದೆ, ಜಗಳ ವಿಕೋಪಕ್ಕೆ ಹೋದ ಸಂದರ್ಭದಲ್ಲಿ ಎಲ್ಲರ ಬಾಯಿ ಮುಚ್ಚಿಸುತ್ತ, ದೇವರು ನಮ್ಮ ಕುಟುಂಬಕ್ಕೆ ಸಾಕಷ್ಟು ಅಧಿಕಾರ ಕೊಟ್ಟಿದ್ದಾನೆ. ನಾವೇ ಕಚ್ಚಾಡುವುದು ಸರಿಯಲ್ಲ. ನಮ್ಮ ಕುಟುಂಬವನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಾಲಚಂದ್ರ ಹೇಳುತ್ತ ಬಂದಿದ್ದಾರೆ.
ಇದೊಂದು ರಾಜಕೀಯ ತಂತ್ರವೇ?
ಈ ಎಲ್ಲ ಬೆಳವಣಿಗೆಗಳನ್ನು ಹತ್ತಿರದಿಂದ ನೋಡುತ್ತ ಬಂದವರು ಇದೊಂದು ರಾಜಕೀಯ ತಂತ್ರ ಎನ್ನುವವರೂ ಇದ್ದಾರೆ. ಹೊರಗಿನವರು ಗೋಕಾಕ ಕ್ಷೇತ್ರದಲ್ಲಿ ಬರಬಾರದೆನ್ನುವ ಕಾರಣಕ್ಕಾಗಿಯೇ ಜಾರಕಿಹೊಳಿ ಸಹೋದರರು ಹೊರಗೆ ಜಗಳವಾಡಿದಂತೆ ಮಾಡುತ್ತಾರೆ ಎನ್ನುತ್ತಾರೆ.
ಅವರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಇದೊಂದು ತಂತ್ರದ ರಾಜಕಾರಣ. ಯಾವುದೇ ಸರಕಾರ ಬಂದರೂ ತಮ್ಮ ಕೈಯಿಂದ ಅಧಿಕಾರ ಹೋಗಬಾರದೆಂದು ಅವರು ಈ ಎಲ್ಲ ತಂತ್ರಮಾಡುತ್ತಾರೆ ಎನ್ನುತ್ತಾರೆ ಅವರ ವಿರೋಧಿಗಳು.
ಕಣಕ್ಕಿಳಿಯಲು ಸಮ್ಮತಿಸಿದ ಲಖನ್
ಲಖನ್ ಈ ಬಾರಿ ರಮೇಶ್ ವಿರುದ್ಧ ಕಣಕ್ಕಿಳಿಯಲು ಸಮ್ಮತಿಸಿದ್ದಾರೆ ಎಂದು ಖಚಿತ ಮೂಲಗಳು ಪ್ರಗತಿವಾಹಿನಿಗೆ ತಿಳಿಸಿವೆ. ರಮೇಶ್ ಜೊತೆ ಇದ್ದ ಅನ್ಯೋನ್ಯತೆಯಿಂದಾಗಿ ಲಖನ್ ಅವರ ವಿರುದ್ಧ ಸ್ಪರ್ಧಿಸಲಿಕ್ಕಿಲ್ಲ ಎನ್ನುವ ಮಾತಿತ್ತು. ಹಾಗಾಗಿಯೇ ಅಲ್ಲಿಂದ ಕಣಕ್ಕಿಳಿಯಲು ಇನ್ನೂ 2-3 ಜನರು ಸಿದ್ದರಾಗಿದ್ದರು.
ಆದರೆ, ಅಂಬಿರಾವ್ ಅವರಿಂದಾಗಿಯೇ ರಮೇಶ್ ದಾರಿ ತಪ್ಪುತ್ತಿದ್ದಾರೆ ಎನ್ನುವ ಅಸಮಾಧಾನ ಲಖನ್ ಗೂ ಇದೆ. ಗೋಕಾಕದ ನಿಯಂತ್ರಣವನ್ನು ಅಂಬಿರಾವ್ ಕೈಯಿಂದ ಕಸಿದು ಪುನಃ ಜಾರಕಿಹೊಳಿ ಕೈಗೇ ತೆಗೆದುಕೊಳ್ಳಬೇಕು ಎನ್ನುವ ಸತೀಶ್ ಮಾತಿಗೆ ಲಖನ್ ತಲೆದೂಗಿದ್ದಾರೆ.
ರಮೇಶ್ ಜಾರಕಿಹೊಳಿಗೆ ಅನರ್ಹತೆಯಿಂದಾಗಿ ಸ್ಪರ್ಧೆಗೆ ತೊಡಕಾದರೆ ಮಗ ಅಥವಾ ಅಂಬಿರಾವ್ ಅವರನ್ನೇ ಕಣಕ್ಕಿಲಿಸಲೂಬಹುದು. ಆದರೆ ಸಧ್ಯದ ಪರಿಸ್ಥಿತಿ ನೋಡಿದರೆ ರಮೇಶ್ V/S ಲಖನ್ ಸ್ಪರ್ಧೆಯ ಸಾಧ್ಯತೆಯೇ ಹೆಚ್ಚು ಕಾಣುತ್ತಿದೆ. ಯಾರು ಗೆದ್ದರೂ ಜಾರಕಿಹೊಳಿ ಕುಟುಂಬದಲ್ಲೇ ಅಧಿಕಾರ ಖಚಿತ. ಸುಲಭವಾಗಿ ಗೆಲ್ಲಲು ಇದೊಂದು ತಂತ್ರವೂ ಆಗಿರಬಹುದು ಎನ್ನುವ ಮಾತಿಗೆ ಪುಷ್ಠಿ ನೀಡುವಂತಿದೆ.
ಒಟ್ಟಾರೆ, ಈಬಾರಿಯ ಚುನಾವಣೆ ತೀವ್ರ ಕುತೂಹಲ ಮೂಡಿಸಿದ್ದಂತೂ ಸತ್ಯ. ಇದು ಕಾಂಗ್ರೆಸ್ V/S ಬಿಜೆಪಿ ಆಗುವ ಬದಲು ಜಾರಕಿಹೊಳಿ V/S ಜಾರಕಿಹೊಳಿ ಆಗಲಿದೆ.
ಇವುಗಳನ್ನೂ ಓದಿ –
ಸಂಕಲ್ಪ ಸಮಾವೇಶದಲ್ಲಿ ಹಲವು ಗುಟ್ಟುಗಳನ್ನು ಹೊರಹಾಕಿದ ರಮೇಶ ಜಾರಕಿಹೊಳಿ
ಜಾರಕಿಹೊಳಿ ಬ್ರದರ್ಸ್ ಸಮರಕ್ಕೆ ಮತ್ತೊಂದು ತಿರುವು
ಪೊಲೀಸರ ವಿರುದ್ಧವೇ ಸತೀಶ ಜಾರಕಿಹೊಳಿ ಕಂಪ್ಲೇಂಟ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ