ಪ್ರಗತಿವಾಹಿನಿ ಸುದ್ದಿ; ತುಮಕೂರು: ವಿದ್ಯುತ್ ಘಟಕ ಉದ್ಘಾಟನಾ ಸಮಾರಂಭದ ವೇಳೆ ಗುಬ್ಬಿ ಜೆಡಿಎಸ್ ಶಾಸಕ ಶ್ರೀನಿವಾಸ್ ಹಾಗೂ ತುಮಕೂರು ಬಿಜೆಪಿ ಸಂಸದ ಜಿ.ಎಸ್.ಬಸವರಾಜು ನಡುವೆ ಜಟಾಪಟಿ ನಡೆದಿದ್ದು, ಪರಸ್ಪರ ಕೈ ಕೈ ಮಿಲಾಸಿಕೊಳ್ಳುವ ಹಂತ ತಲುಪಿದ್ದಾರೆ.
ಗುಬ್ಬಿ ತಾಲೂಕಿನ ಸಿ. ನಂದಿಹಳ್ಳಿಯಲ್ಲಿ ಬೆಸ್ಕಾಂ ವಿದ್ಯುತ್ ಎಂಎಸ್ ಎಸ್ ಘಟಕ ಉದ್ಘಾಟನಾ ಸಮಾರಂಭದ ವೇಳೆ ಇಬ್ಬರು ನಾಯಕರು ಪರಸ್ಪರ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಚೇಳೂರು ಹೋಬಳಿಯಲ್ಲಿ ಚೆಕ್ ಡ್ಯಾಂ ನಿರ್ಮಿಸಲು 550 ಕೋಟಿ ರೂಪಾಯಿ ತಂದಿದ್ದೇನೆ, ರೈತರುಗೆ ಒಂದು ಎಕರೆಗೆ 1 ಕೋಟಿ ರೂಪಾಯಿ ನೀಡುತ್ತೇನೆ ಎಂಬಿತ್ಯಾದಿ ಭರವಸೆಗಳನ್ನು ಸಂಸದ ಬಸವರಾಜು ನೀಡುತ್ತಿದ್ದಂತೆ ಕಿಡಿಕಾರಿದ ಜೆಡಿಎಸ್ ಶಾಸಕ ಶ್ರೀನಿವಾಸ್, ರೈತರಿಗೆ ಸುಳ್ಳು ಯಾಕೆ ಹೇಳ್ತೀರಾ? ವಯಸ್ಸಾಗಿದೆ ಈಗಲಾದರೂ ನ್ಯಾಯಯುತವಾಗಿ ಹೇಳಿಕೆಗಳನ್ನು ನೀಡಬಾರದೇ? ಎಂದು ಪ್ರಶ್ನಿಸಿದ್ದಾರೆ.
ಶಾಸಕರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಸಂಸದ ನಾನು ಜೀವನದಲ್ಲಿ ಸುಳ್ಳುಹೇಳಿಲ್ಲ. ಇವರ ಮಾತು ನಂಬಬೇಡಿ ನಾನು ಕೇಂದ್ರ ಸರ್ಕಾರದಿಂದ 550 ಕೋಟಿ ಅನುದಾನ ತಂದಿದ್ದೇನೆ ಎಂದು ಹೇಳಿದರು. ಇದರಿಂದ ಇನ್ನಷ್ಟು ಕೋಪಗೊಂಡ ಶಾಸಕ ಶ್ರೀನಿವಾಸ್, ನಿನ್ನ ಯೋಗ್ಯತೆಗೆಬೆಂಕಿ ಹಾಕಾ… ಬರಿ ಸುಳ್ಳು ಹೇಳಿಕೊಂಡೇ ತಿರುಗಾಡುತ್ತಿದ್ದೀರಾ. ಸುಳ್ಳು ಹೇಳಿ ರೈತರ ಹಾಗೂ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದೀರಾ… ವಯಸ್ಸಾಗಿದೆ ಮಾನ ಮರ್ಯಾದೆ ಇಲ್ಲವೇ? ಸುಳ್ಲು ಯಾಕೆ ಹೇಳುತ್ತೀರಾ? 550 ಕೋಟಿ ಯಾರು ತಂದಿದ್ದು? ನಿಮ್ಮ ತಾತ ತಂದಿದ್ನಾ? ನೀವು ಎಲ್ಲಿ 550 ಕೋಟಿ ಎಲ್ಲಿ ತಂದಿದ್ದೀರಿ ತೋರಿಸಿ ಎಂದು ಗುಡುಗಿದ್ದಾರೆ. ಇಬ್ಬರು ನಾಯಕರು ಸಮಾರಂಭದ ವೇಳೆಯೇ ಪರಸ್ಪರ ಕೈ ಕೈ ಮಿಲಾಸಿಕೊಳ್ಳುವ ಹಂತ ತಲುಪುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಇಬ್ಬರು ನಾಯಕರನ್ನು ಸಮಾಧಾನ ಪಡಿಸಿದ್ದಾರೆ.
ಆರ್.ಎಸ್.ಎಸ್ ಮುಖಂಡ ಅರವಿಂದರಾವ್ ದೇಶಪಾಂಡೆ ಭೇಟಿಯಾದ ರಮೇಶ್ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ