*ಒಂದು ಕಡೆ ಉಚಿತ ಕೊಡುಗೆ, ಇನ್ನೊಂದು ಕಡೆ ಖಚಿತ ಸುಲಿಗೆ!; ಸರ್ಕಾರದ ವಿರುದ್ಧ ಜೆಡಿಎಸ್ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾಸಿಗಾಗಿ ಹುದ್ದೆ ಕಾಂಗ್ರೆಸ್ ಸರಕಾರದ ಆರನೇ ಗ್ಯಾರಂಟಿ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.
ಈ ಬಗ್ಗೆ ಸರಣೆ ಟ್ವೀಟ್ ಮಾಡಿರುವ ಪಕ್ಷವು, ವರ್ಗಾವಣೆ ದರಪಟ್ಟಿಯಿಂದ ಅಧಿಕಾರಿ, ನೌಕರರೂ ಹೌಹಾರಿದ್ದಾರೆ ಎಂದಿದೆ. ರಾಜ್ಯದ ಜನ ಇಷ್ಟು ದಿನ ಟೊಮ್ಯಾಟೋ, ತರಕಾರಿ,ಆಹಾರ ಧಾನ್ಯ, ಗ್ಯಾಸ್ ಇತ್ಯಾದಿಗಳ ಬೆಲೆ ಏರಿಕೆಯಿಂದ ಚಕಿತರಾಗಿ ಬಸವಳಿದು ಹೋಗಿದ್ದಾರೆ.ಈಗ ವರ್ಗಾವಣೆ ದರಪಟ್ಟಿಯಿಂದ ಅಧಿಕಾರಿ, ನೌಕರರೂ ಹೌಹಾರಿದ್ದಾರೆ. ಇದು ಕಾಂಗ್ರೆಸ್ ಸರಕಾರದ 6ನೇ ಗ್ಯಾರಂಟಿ. ಒಂದು ಕಡೆ ಉಚಿತ ಕೊಡುಗೆ! ಇನ್ನೊಂದು ಕಡೆ ಖಚಿತ ಸುಲಿಗೆ!! ಎಂದು ಜೆಡಿಎಸ್ ಕಿಡಿಕಾರಿದೆ.
ವೈಎಸ್ ಟಿ ಟ್ಯಾಕ್ಸ್, ಕ್ಯಾಶ್ ಫಾರ್ ಪೋಸ್ಟಿಂಗ್ ಹ್ಯಾಷ್ ಟ್ಯಾಗ್ ಮಾಡಿ ಸರ್ಕಾರವನ್ನು ಕುಟುಕಿರುವ ಜೆಡಿಎಸ್, ಭಾಗ್ಯಗಳ ಮೇಲೆ ಭಾಗ್ಯಗಳನ್ನು ಕೊಟ್ಟ ಕಾಂಗ್ರೆಸ್ ಸರಕಾರದ ವರ್ಗಾವಣೆ ‘ಸಂಕಷ್ಟಭಾಗ್ಯ’ ವರ್ಣಿಸದಸಳ. ಕೊಡುಗೆ ಮತ್ತು ಸುಲಿಗೆ ಒಟ್ಟೊಟ್ಟಿಗೆ ಕೊಂಡೊಯ್ಯುವುದೇ ಅಭಿವೃದ್ದಿಯ ಹೊಸ ಭರವಸೆ, ಹೊಸ ಕನಸು ಎಂಬುದು ನನಗೆ ಈಗಷ್ಟೇ ಅರ್ಥವಾಗಿದೆ. ಕರ್ನಾಟಕ ಮಾದರಿ ಅಭಿವೃದ್ಧಿ ಎಂದರೆ ಇದೇನಾ? ಎಂದು ಜೆಡಿಎಸ್ ಕಟುವಾಗಿ ಪ್ರಶ್ನೆ ಮಾಡಿದೆ.
ಈ ಸರಕಾರ ಬಂದು ಎರಡು ತಿಂಗಳೂ ಕಳೆದಿಲ್ಲ. ಆಗಲೇ ಕಾಸಿಗಾಗಿ ಹುದ್ದೆ ಬಿಸ್ನೆಸ್ ಪರಾಕಾಷ್ಠೆ ಮುಟ್ಟಿದ್ದು, ಇವರು ವರ್ಗಾವಣೆ ಅಂಕದಲ್ಲಿ ‘ ಪರಕಾಯ ಪ್ರವೇಶ ‘ ಮಾಡಿದ್ದಾರೆ. ಗ್ಯಾರಂಟಿ, ಭಾಗ್ಯಗಳ ಮೂಲಕ ಜನರನ್ನು ಯಾಮಾರಿಸಿ ಇವರು ಹುಂಡಿಗಳನ್ನು ಭರ್ತಿ ಮಾಡಿಕೊಳ್ಳುತ್ತಿದ್ದಾರೆ. ಇದೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಕ್ಕಾಗಿ ಹಿಂದಿನ ಬಿಜೆಪಿ ಸರಕಾರದ ವಿರುದ್ಧ ರೇಟ್ ಕಾರ್ಡ್ ಬಿಡುಗಡೆ ಮಾಡಿ ಪ್ರಚಾರ ಮಾಡಿತ್ತು. ಈಗ ಕೈ ಸರಕಾರದ ರೇಟ್ ಕಾರ್ಡ್ ಎಲ್ಲರ ಕೈಗಳಲ್ಲೂ ನಲಿದು ನರ್ತಿಸುತ್ತಿದೆ. ಕ್ಯಾಶ್ ಫಾರ್ ಪೋಸ್ಟಿಂಗ್ ಎನ್ನುವುದು ಸರಕಾರದ ‘ಅಧಿಕೃತ ಅರ್ಥನೀತಿ ‘ ಆಗಿದೆ ಎಂದು ಜೆಡಿಎಸ್ ಪಕ್ಷವು ಸರಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಹನಿಮೂನ್ ಪೀರಿಯಡ್ ಹೊತ್ತಿನಲ್ಲೇ ಹೀಗಾದರೆ ಫುಲ್ ಮೂನ್ ಸಮಯದಲ್ಲಿ ಇದು ಇನ್ನಾವ ಹಂತಕ್ಕೆ ಹೋಗಲಿದೆ ಎನ್ನುವ ಊಹೆ ಜನರಿಗೇ ಬಿಟ್ಟಿದ್ದು. ಇಂಥ ಕಮಿಷನ್’ಗೇಡಿ ಸರಕಾರದ ಬಗ್ಗೆ ಸರಕಾರಿ ನೌಕರರು, ಅಧಿಕಾರಿಗಳು ಆತಂಕಗೊಂಡಿದ್ದಾರೆ. ಜನರಲ್ಲೂ ಆಕ್ರೋಶ ಮಡುಗಟ್ಟುತ್ತಿದೆ ಎಂದು ಜೆಡಿಎಸ್ ಹೇಳಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ