ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಹಾತ್ಮಾ ಗಾಂಧೀಜಿ ಅವರ ೧೫೦ನೇ ಜಯಂತಿ ಅಂಗವಾಗಿ ಜನಾಂದೋಲನ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದರು.
ತಾಲೂಕಿನ ಹುದಲಿ ಗ್ರಾಮದಲ್ಲಿ ಶನಿವಾರ ಪಾದಯಾತ್ರೆಗೂ ಮೊದಲು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಪಾದಯಾತ್ರೆ ಮೂಲಕ ಪ್ರತಿಯೊಂದು ಗ್ರಾಮವನ್ನು ತಲುಪುತ್ತೇವೆ. ಇಡೀ ದೇಶದಲ್ಲಿ ಈ ಜನಾಂದೋಲನ ಪಾದಯಾತ್ರೆ ಆರಂಭವಾಗಿದೆ. ಚಿಕ್ಕೋಡಿ ತಾಲೂಕಿನ ಯಕ್ಸಂಬಾದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಚಾಲನೆ ನೀಡಿದ್ದಾರೆ.
ಈಗ ಯಮಕನಮರಡಿ ಕ್ಷೇತ್ರದ ಹುದಲಿ ಗ್ರಾಮದಿಂದ ಪಾದಯಾತ್ರೆ ಆರಂಭಿಸಿ, ಚಂದಘಡ, ಅಷ್ಟೇ, ಮುಚ್ಚಂಡಿ, ಕಲಕಾಂಬ, ಕಾಕತಿ, ಮುಕ್ತಿಮಠ, ಯಮಕನಮರಡಿ, ಹತ್ತರಗಿ, ಉ-ಖಾನಾಪೂರ, ಚಿಕ್ಕಾಲಗುಡ್ಡ, ಹೆಬ್ಬಾಳಕ್ಕೆ ಮುಕ್ತಾಯವಾಗಲಿದೆ ಎಂದರು.
ಅ.೧೩ ರಂದು ನಿಪ್ಪಾಣಿ ಕ್ಷೇತ್ರದಲ್ಲಿ ಪಾದಯಾತ್ರೆ ನಡೆಯಲಿದೆ. ಮಹಾರಾಷ್ಟ್ರ ರಾಜ್ಯದ ವಿಧಾನಸಭೆ ಚುನಾವಣೆಯ ಜವಾಬ್ದಾರಿ ಇರುವುದರಿಂದ ಪಾದಯಾತ್ರೆ ಹಂತ ಹಂತವಾಗಿ ಆಯೋಜನೆ ಮಾಡಲಾಗುವುದು. ಚಿಕ್ಕೋಡಿ ಲೋಕಸಭಾ ಕ್ಷೇತ್ರದ ೬೫೦ ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಲಾಗುವುದು. ಈ ವೇಳೆ ಗಾಂಧೀಜಿ ಅವರ ತತ್ವಗಳು, ವಿಚಾರಧಾರೆಗಳನ್ನು ಜನರಿಗೆ ತಿಳಿಸಲಾಗುವುದು.
ಜತೆಗೆ ಸ್ವಚ್ಛ ಭಾರತ, ಪ್ಲಾಸ್ಟಿಕ್ ಮುಕ್ತ ಸಮಾಜ, ಯೋಗ ಸೇರಿದಂತೆ ವಿವಿಧ ಜನಪರ ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತೇವೆ. ಇದೇ ವೇಳೆ ಪ್ರತಿಯೊಂದು ಗ್ರಾಮದ ಸಮಸ್ಯೆಗಳನ್ನು ಆಲಿಸಲಾಗುವುದು ಎಂದು ತಿಳಿಸಿದರು.
ಚಿಕ್ಕೋಡಿ ಜಿಲ್ಲಾ ಬಿಜೆಪಿ ಘಟಕದ ಜಿಲ್ಲಾಧ್ಯಕ್ಷ ಶಶಿಕಾಂತ ನಾಯಕ ಮಾತನಾಡಿ, ಗಾಂಧೀಜಿ ಅವರ ಗಾಂಧಿ ಗ್ರಾಮ ಸ್ವರಾಜ್ಯ ಕಲ್ಪನೆ ಮಾಡುವ ನಿಟ್ಟಿನಲ್ಲಿ ಈ ಪಾದಯಾತ್ರೆ ನಡೆಯುತ್ತಿದೆ. ಪಾದಯಾತ್ರೆ ಮೂಲಕ ಸಂಸದರು ಗ್ರಾಮೀಣ ಜನರೊಂದಿಗೆ ಬೆರೆತು ಹೋಗಬೇಕು ಎನ್ನುವ ಉದ್ದೇಶದಿಂದ ಹಾಗೂ ಗಾಂಧೀಜಿ ಅವರ ವಿಚಾರಧಾರೆ ಜನರಿಗೆ ತಿಳಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಗ್ರಾಮಸ್ಥ ಸಿ.ಬಿ. ಮೋದಗಿ ಮಾತನಾಡಿ, ಗಾಧೀಜಿ ಭೇಟಿ ನೀಡಿದ ಹುದಲಿ ಗ್ರಾಮದಿಂದ ಜನಾಂದೋಲನ ಪಾದಯಾತ್ರೆ ಆರಂಭಿಸಿರುವುದು ಗ್ರಾಮಸ್ಥರಿಗೆ ಖುಷಿ ತಂದಿದೆ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿಲ್ಲ. ಹೀಗಾಗಿ ಕೂಡಲೇ ಘಟಕ ಸ್ಥಾಪನೆ. ಮಾರ್ಕಂಡೇಯ ಜಲಾಶಯದ ಕಾಲುವೆ ನೀರಿನ ಸೋರಿಕೆಯಿಂದ ನೂರಾರು ಎಕರೆ ಜಮೀನು ಬಂಜರಾಗುತ್ತಿದೆ. ಕಾಲುವೆ ದುರಸ್ಥಿ ಮಾಡಲು ಕ್ರಮಕೈಗೊಳ್ಳಬೇಕು. ಗ್ರಾಮದಲ್ಲಿ ಉತ್ತಮ ಕಲ್ಯಾಣ ಮಂಟಪ ನಿರ್ಮಾಣ ಮಾಡುವಂತೆ ಸಂಸದರಿಗೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಅಣ್ಣಾಸಾಹೇಬ ಜೊಲ್ಲೆ, ವಾರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಸಮುದಾಯ ಭವನ ಸೇರಿದಂತೆ ಗ್ರಾಮದ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು. ಖಾದಿ ಗ್ರಾಮೋದ್ಯೋಗ ಉಳಿಯುವುದು ಕಷ್ಟವಾಗಿದೆ. ಆದ್ದರಿಂದ ಹುದಲಿ ಗ್ರಾಮದ ಖಾದಿ ಗ್ರಾಮೋದ್ಯೋಗಕ್ಕೆ ಕೇಂದ್ರದಿಂದ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದರು.
ರಮೇಶ ಜಾರಕಿಹೊಳಿ ಬಿಜೆಪಿ ಸೇರಿದಂತೆ ಆಗಿದೆ
ಜಿಲ್ಲೆಯ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲವು ಸಾಧಿಸಲಿದೆ. ಪಕ್ಷದ ಮುಖಂಡರು ಚುನಾವಣೆಯಲ್ಲಿ ಯಾವುದೇ ಜವಾಬ್ದಾರಿ ನೀಡಿದರೂ ತೆಗೆದುಕೊಳ್ಳುತ್ತೇನೆ. ರಮೇಶ ಜಾರಕಿಹೊಳಿ ಅವರು ಬಿಜೆಪಿ ಸೇರಿದಂತೆ ಆಗಿದೆ. ಬಿಜೆಪಿಯ ಎಲ್ಲ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಉಪಚುನಾವಣೆ ಪಾದಯಾತ್ರೆ ಕಾಕತಾಳೀಯ ಅಷ್ಟೆ. ಚುನಾವಣೆಗೂ ಪಾದಯಾತ್ರೆಗೂ ಯಾವುದೇ ಸಂಬಂಧವಿಲ್ಲ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದರು.
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆ ಮುಗಿದ ಬಳಿಕ ಕೊನೆಗೆ ಚಿಕ್ಕೋಡಿಯಲ್ಲಿ ಬೃಹತ್ ಪಾದಯಾತ್ರೆ ಹಮ್ಮಿಕೊಂಡು ಕೇಂದ್ರ ಸಚಿವರನ್ನು ಆಹ್ವಾನಿಸಲಾಗುವುದು.
-ಅಣ್ಣಾಸಾಹೇಬ ಜೊಲ್ಲೆ, ಸಂಸದ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ