Cancer Hospital 2
Bottom Add. 3

ಪತ್ರಕರ್ತರು ವೃತ್ತಿ ಘನತೆ ಎತ್ತಿ ಹಿಡಿಯಬೇಕು: ಸಚಿವ ಸತೀಶ ಜಾರಕಿಹೊಳಿ 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಪತ್ರಿಕಾರಂಗವು ಸಮಾಜ ತಿದ್ದುವ ಪಾತ್ರ ನಿರ್ವಹಿಸುತ್ತಿದೆ. ಸಮಾಜದಲ್ಲಿ ತೊಂದರೆ, ಸಮಸ್ಯೆಗಳಿದ್ದಲ್ಲಿ ಅಂತಹ ಕಡೆ ಬೆಳಕು ಚೆಲ್ಲುವ ಕೆಲಸಕ್ಕೆ ಮಾಧ್ಯಮ ಮುಂದಾಗಬೇಕು. ಪತ್ರಕರ್ತರು ತಮ್ಮ ವರದಿಗಳಿಂದ ವೃತ್ತಿ ಘನತೆಯನ್ನು ಎತ್ತಿ ಹಿಡಿಯಬೇಕು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಕಿವಿಮಾತು ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ನಗರದ ಕನ್ನಡ ಭವನದಲ್ಲಿ ಶನಿವಾರ (ನ.11) ನಡೆದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರ ಮಾಧ್ಯಮ ಸಲಹೆಗಾರ ಎಂ.ಕೆ.ಹೆಗಡೆ ಹಾಗೂ ಇನ್ನಿತರ ಪತ್ರಕರ್ತರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಂದು ಎಲೆಕ್ಟ್ರಾನಿಕ್ ಹಾಗೂ ಡಿಜಿಟಲ್ ಮಾಧ್ಯಮಗಳು ಸುದ್ದಿ ಭರಾಟೆ ಹೆಚ್ಚಾಗಿದ್ದು, ಮೂಲ ಸುದ್ದಿಯ ಸ್ವರೂಪವೇ ಬದಲಾಗಿ ಕೆಲವೊಮ್ಮೆ ಬೇರೆಯದೇ ಅರ್ಥ ಮೂಡಿಸುತ್ತಿದೆ. ಆದ್ದರಿಂದ ಮೂಲ ಸುದ್ದಿ ಅಥವಾ ಹೇಳಿಕೆಗಳು ಯಥಾವತ್ತಾಗಿ ವರದಿಯಾಗಬೇಕು ಎಂದು ಹೇಳಿದರು.

ಪತ್ರಿಕಾ ಭವನ ನಿರ್ಮಾಣಕ್ಕೆ ಭರವಸೆ:

ಪತ್ರಕರ್ತರು ತಮ್ಮ ಕುಟುಂಬ ಮಕ್ಕಳ ವಿದ್ಯಾಭ್ಯಾಸಗಳತ್ತ ಗಮನಹರಿಸಬೇಕು. ಬೆಳಗಾವಿ ನಗರದಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳ ಜತೆಗೆ ಈಗಾಗಲೇ ಸಭೆ ನಡೆಸಿ ಚರ್ಚಿಸಲಾಗಿದೆ. ಸ್ಥಳ ಗೊಂದಲವಿರುವ ಕಾರಣ ವಿಳಂಬವಾಗಿದೆ. ಸ್ಥಳ ನಿಗದಿಯಾದ ತಕ್ಷಣವೇ ಭವನ ನಿರ್ಮಾಣಕ್ಕೆ ಸೂಚಿಸಲಾಗುವುದು ಎಂದು ಸತೀಶ್ ಜಾರಕಿಹೊಳಿ ಭರವಸೆ ನೀಡಿದರು.

ಇದಕ್ಕೂ ಮುಂಚೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅವರು ಮಾತನಾಡಿ ಬೆಳಗಾವಿ ಜಿಲ್ಲೆ ಅತೀ ವಿಶೇಷವಾದ ಜಿಲ್ಲೆಯಾಗಿದೆ. ಇಲ್ಲಿ ಅಭಿನಂದನಾ ಕಾರ್ಯಕ್ರಮ ಆಯೋಜನೆ ಮಾಡಿರುವುದು ಸಂತಸದ ವಿಷಯ ಎಂದು ಹೇಳಿದರು.

ಪತ್ರಿಕಾ ವಿತರಕರ ಕಾರ್ಯ ಶ್ಲಾಘನೀಯ:

ಈ ದಿನದಲ್ಲಿ ವಿಶೇಷವಾಗಿ ಪತ್ರಿಕಾ ವಿತರಕರನ್ನು ಸ್ಮರಿಸುತ್ತೇನೆ. ಬೆಳಿಗ್ಗೆ ಚಳಿ, ಮಳೆ, ಗಾಳಿ ಯಾವುದನ್ನೂ ಲೆಕ್ಕಿಸದೆ ಮನೆ ಮನೆಗೆ ಪತ್ರಿಕೆಗಳನ್ನು ತಲುಪಿಸುವ ಕೆಲಸವನ್ನು ಅವರು ಪ್ರಾಮಾಣಿಕ, ನಿಷ್ಠೆಯಿಂದ ಮಾಡುತ್ತಾರೆ. ಹಾಗಾಗಿ ಈ ಬಾರಿ ನಡೆದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಸುಮಾರು 76 ವರ್ಷದ ಜವರಪ್ಪ ಎಂಬ ಪತ್ರಿಕಾ ವಿತರಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿ ಗೌರವಿಸಿದ್ದಾರೆ. ಪತ್ರಕರ್ತರಿಗೆ ನಿವೇಶನ ಮೀಸಲಿಡುವುದು ಹಾಗೂ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಅವರು ಭರವಸೆ ನೀಡಿದರು.

ಮಾಧ್ಯಮ ಪ್ರತಿನಿಧಿಗಳ ಪ್ರತಿನಿಧಿಯಾಗಿ ಸರಕಾರದ ಮಟ್ಟದಲ್ಲಿ ಪತ್ರಕರ್ತರ ಬೇಡಿಕೆಗಳ ಈಡೇರಿಕೆಗೆ ಸ್ಪಂದಿಸುತ್ತೇನೆ ಎಂದು ಕೆ.ವಿ. ಪ್ರಭಾಕರ ಅವರು ತಿಳಿಸಿದರು.

ಪತ್ರಕರ್ತರು ಅಭಿವೃದ್ಧಿ ಕೆಲಸಕ್ಕೆ ಹೆಚ್ಚಿನ ಒತ್ತು ನೀಡಲಿ – ಲಕ್ಷ್ಮೀ ಹೆಬ್ಬಾಳಕರ್ ಮನವಿ

ಪತ್ರಕರ್ತರು ರಾಜಕಾರಣಕ್ಕಿಂತ ಅಭಿವೃದ್ಧಿ ಕೆಲಸಗಳ ಕುರಿತು ಹೆಚ್ಚಿನ ಬೆಳಕು ಚೆಲ್ಲುವ ಕೆಲಸ ಮಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮನವಿ ಮಾಡಿದ್ದಾರೆ.

 ಬೆಳಗಾವಿಯಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸಂಘಟಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪತ್ರಿಕಾ ವಿತರಕರಿಗೆ ಸೈಕಲ್ ವಿತರಿಸಿ ಅವರು  ಅವರು ಮಾತನಾಡುತ್ತಿದ್ದರು. ಇಂದು ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳ ಕುರಿತು ವಿಮರ್ಶೆ ಮಾಡಬೇಕಾದ ಸ್ಥಿತಿ ಬಂದಿದೆ. ಪ್ರತ್ಯಕ್ಷ ಕಂಡರೂ ಪರಾಂಬರಿಸಿ ನೋಡು ಎನ್ನುವಂತೆ ಪತ್ರಕರ್ತರು ಕೆಲಸ ಮಾಡಬೇಕಿದೆ. ಪದೇ ಪದೆ ನನ್ನ ಮತ್ತು ಸಚಿವ ಸತೀಶ್ ಜಾರಕಿಹೊಳಿ ಮಧ್ಯೆ ಎಲ್ಲವೂ ಸರಿ ಇಲ್ಲ ಎನ್ನುವಂತೆ ಸುದ್ದಿ ಬರುತ್ತಿದೆ. ಇದಕ್ಕೆಲ್ಲ ಕೆಲವೊಮ್ಮೆ ಉತ್ತರಿಸಲೂ ಮುಜುಗರವಾಗುತ್ತದೆ. ಇಲ್ಲಿ ನಾವಿಬ್ಬರೂ ಇದ್ದೇವೆ. ನಮ್ಮ ಮಧ್ಯೆ ಯಾವ ಗೊಂದಲವೂ ಇಲ್ಲ. ಆದರೆ ಸುಳ್ಳನ್ನೇ ಪದೇ ಪದೇ ಹೇಳುವುದರಿಂದ ಜನರಲ್ಲಿ ಗೊಂದಲ ನಿರ್ಮಾಣವಾಗುತ್ತದೆ. ಇದರಿಂದಾಗಿ ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎನ್ನುವಂತೆ ನಮ್ಮ ಸ್ಥಿತಿಯಾಗುತ್ತದೆ ಎಂದು ಹೆಬ್ಬಾಳಕರ್ ಹೇಳಿದರು.

ನಾನು ಸಾಮಾನ್ಯ ಹಳ್ಳಿಯ ಕುಟುಂಬದಿಂದ ಬಂದವಳು. ರಾಜಕಾರಣವನ್ನೇ ಇಷ್ಟಪಟ್ಟು ಬಂದವಳು. ಆದೆರ ನನಗೆ ನಾನೇ ಲಕ್ಷ್ಮಣ ರೇಖೆಯನ್ನು ಹಾಕಿಕೊಂಡಿದ್ದೇನೆ. ಅದನ್ನು ಎಂದೂ ದಾಟುವುದಿಲ್ಲ. ನಾನು ತಪ್ಪು ಮಾಡಿದಾಗ ತಿದ್ದಿ ಹೇಳಿ. ಆದರೆ ನೈಜ ಸುದ್ದಿ ಪ್ರಕಟಿಸಿ. ವಿಷಯಾಂತರ ಆಗುವುದು ಬೇಡ. ನಿಮ್ಮ ಸಹಕಾರವಿರಲಿ, ನಾವೆಲ್ಲ ಸೇರಿ ಅರ್ಥಪೂರ್ಣ ಕೆಲಸ ಮಾಡೋಣ. ಸರಕಾರದಿಂದ ಆಗಬೇಕಾದ ಅಭಿವೃದ್ಧಿ ಕೆಲಸಗಳ ಕುರಿತು ಗಮನ ಸೆಳೆದರೆ ಕೆಲಸ ಮಾಡಲು ಅನುಕೂಲವಾಗುತ್ತದೆ. ರಾಜಕಾರಣಕ್ಕಿಂತ ಅಭಿವೃದ್ಧಿ ಕುರಿತು ಹೆಚ್ಚು ಸುದ್ದಿ ಮಾಡುವಂತಾಗಲಿ ಎಂದು ಅವರು ಆಶಿಸಿದರು.

ಪತ್ರಿಕಾ ವಿತರಕರಿಗೆ ಸೈಕಲ್ ಕೊಡುವ ಕೆಲಸವನ್ನು ಶ್ಲಾಘಿಸಿದ ಅವರು, ಸರಕಾರ ಸಹ ಪತ್ರಕರ್ತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ನಿವೃತ್ತ ಪತ್ರಕರ್ತರ ಮಾಸಾಶನ ಹೆಚ್ಚಿಸಲಾಗಿದೆ. ಪತ್ರಕರ್ತರಿಗೆ ನಿವೇಶನ ಕೊಡುವ ಕುರಿತು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಚರ್ಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಸಹಾಯ ಹಸ್ತ:

ತೊಂದರೆಯಲ್ಲಿರುವ ಪತ್ರಕರ್ತರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದಿಂದ ಆರ್ಥಿಕ ನೆರವು ನೀಡಲಾಗುವುದು. ಹಳ್ಳಿಯಿಂದ ಬಂದಿರುವ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಪತ್ರಿಕಾ ವಿತರಕರಿಗೆ ಸನ್ಮಾನ, ಅನಾರೋಗ್ಯದಿಂದ  ಇರುವ ಪತ್ರಕರ್ತರಿಗೆ ಸಹಾಯ ಮಾಡಲಾಗುತ್ತಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಿಲೀಪ್ ಕುರಂದವಾಡೆ ಅವರು ಆಶಯ ನುಡಿಗಳನ್ನಾಡಿದರು.

20 ವರ್ಷಗಳ ಹಿಂದೆ ಬೆಳಗಾವಿಯ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಪತ್ರಕರ್ತರಿಗೆ ನಿವೇಶನ ಹಂಚಿಕೆ ಮಾಡಲಾಗಿತ್ತು. ಆದರೆ ನಂತರ ಈವರೆಗೆ ಯಾವುದೇ ನಿವೇಶನಗಳು ಅವರಿಗೆ ನೀಡಲಿಲ್ಲ  ನಗರದಲ್ಲಿ 5 ಪ್ರತಿಶತ ಪತ್ರಕರ್ತರಿಗೆ ನಿವೇಶನ ಹಂಚಿಕೆ ಹಾಗೂ ನಗರದಲ್ಲಿ ಪತ್ರಕರ್ತರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ವಸತಿ ನಿಲಯಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದರು.

ಪತ್ರಿಕೋದ್ಯಮದಲ್ಲಿ ನೈತಿಕತೆ ಮುಖ್ಯ

ಈ ವೇಳೆ ಮಾತನಾಡಿದ ಬೆಳಗಾವಿ ಉತ್ತರ ವಿಧಾನ ಸಭಾ ಮತ ಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ್ ಅವರು ಪತ್ರಕರ್ತರು ಯಾವುದೇ ಸಮುದಾಯ ಹಾಗೂ ಪಕ್ಷದ ಪರವಾಗಿ ವರದಿಗಳನ್ನು ಮಾಡದೆ ಸಮಾಜಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ  ಸತ್ಯ, ನ್ಯಾಯ, ನೀತಿ ಮೂಲಕ ಪಾರದರ್ಶಕವಾಗಿ ವರದಿ ಮಾಡಬೇಕು ಎಂದು ತಿಳಿಸಿದರು.

ಪತ್ರಿಕಾ ರಂಗದಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಜವಾಬ್ದಾರಿ ನಿರ್ವಹಿಸುತ್ತಾರೆ. ಅದ್ರಲ್ಲೂ ಪತ್ರಿಕಾ ವಿತರಕರಿಗೆ ಬಹಳ ಜವಾಬ್ದಾರಿಯಿದೆ. ಅದಕ್ಕೆ ಕನ್ನಡ ರಾಜ್ಯೋತ್ಸವ ಅಂಗವಾಗಿ ರಾಜ್ಯ ಸರ್ಕಾರ ಹಿರಿಯ ಪತ್ರಿಕಾ ವಿತರಕರಿಗೆ ಸನ್ಮಾನಿಸಿ, ಪತ್ರಿಕಾರಂಗಕ್ಕೆ ಗೌರವ ಸಲ್ಲಿಸಿದೆ. ಪತ್ರಕರ್ತರದ್ದು ಬಹಳ ಕಷ್ಟದ ಜೀವನ. ಅವರ ಬೇಡಿಕೆ ಸಮಸ್ಯೆಗಳಿಗೆ ಸರಕಾರ ಸ್ಪಂದಿಸುತ್ತಿರುವದು ಹೆಮ್ಮೆಯ ಸಂಗತಿ ಎಂದು ಗದಗದ ತೋಂಟದಾರ್ಯ ಮಠದ ಶ್ರೀಗಳಾದ ತೋಂಟದ ಡಾ.ಸಿದ್ದರಾಮ ಸ್ವಾಮೀಜಿ ಅವರು ತಿಳಿಸಿದರು.

ಸನ್ಮಾನ ಕಾರ್ಯಕ್ರಮ:

ಇದಕ್ಕೂ ಮೊದಲು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಮಾಧ್ಯಮ ಸಲಹೆಗಾರ ಹಾಗೂ ವಿಶೇಷ ಕರ್ತವ್ಯಾಧಿಕಾರಿ ಎಂ.ಕೆ.ಹೆಗಡೆ ಅವರನ್ನು ಸನ್ಮಾನಿಸಲಾಯಿತು.

ಇದೇ ವೇಳೆ ಮುಖ್ಯಮಂತ್ರಿಗಳ ಕಚೇರಿಯ ಗಿರಿಶ್ ಕೆ., ಕೆ.ಪಿ.ಪುಟ್ಟಸ್ವಾಮಯ್ಯ, ದೀಪಕ್ ಕರಾಡೆ ಅವರನ್ನು ಅವರನ್ನು ಸಹ ಗೌರವಿಸಿ, ಅಭಿನಂದಿಸಲಾಯಿತು.

ಮಾಧ್ಯಮ ಅಕಾಡೆಮಿ ಪ್ರಶಸ್ತಿ ವಿಜೇತರನ್ನು ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತರನ್ನೂ ಗೌರವಿಸಲಾಯಿತು.

ಸೈಕಲ್ ವಿತರಣೆ:

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು  ಜಿಲ್ಲೆಯಿಂದ ಆಗಮಿಸಿದ ವಿವಿಧ ತಾಲೂಕಾ ಪತ್ರಿಕಾ ವಿತರಕರಿಗೆ ಸೈಕಲ್ ವಿತರಣೆ ಮಾಡಿದರು.

ಕ. ಕಾ.ಪ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ, ರಾಜ್ಯ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ಸರ್ವೋತ್ತಮ ಜಾರಕಿಹೊಳಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ್, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ನ್ಯಾಷನಲ್ ಇಂಟರ್ ಪೀಟರ್ ಶ್ರೀಲಂಕಾದ ಶುಭಾ ರತ್ನಾಯಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಗುರುನಾಥ ಕಡಬೂರ, ಮದನ ಗೌಡ, ಕ.ಕಾ.ಪ.ಸಂಘದ ಉಪಾಧ್ಯಕ್ಷ ರಾಜಶೇಖರ ಪಾಟೀಲ, ಯಲ್ಲಪ್ಪ ತಳವಾರ, ಶ್ರೀಶೈಲ ಮಠದ, ಪ್ರಧಾನ ಕಾರ್ಯದರ್ಶಿ ಅರುಣ ಪಾಟೀಲ, ಕಾರ್ಯದರ್ಶಿ ಶ್ರೀಕಾಂತ ಕುಬಕಡ್ಡಿ, ಈಶ್ವರ ಹೋಟಿ, ತಾನಜಿರಾವ್ ಮೂರಂಕರ, ಖಜಾಂಚಿ ಚೇತನ ಹೊಳೆಪ್ಪಗೊಳ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಮಲ್ಲಿಕಾರ್ಜುನ ಗೊಂದಿ, ನಾಮ ನಿರ್ದೇಶಿತ ಸದಸ್ಯ ನೌಶಾದ್ ಬಿಜಾಪುರ ಸೇರಿದಂತೆ ಜಿಲ್ಲಾ ವಿವಿಧಡೆಯಿಂದ ಆಗಮಿಸಿದ ಪತ್ರಕರ್ತರು, ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ರೆಡ್ಡಿ ಗೊಂದಿ ಅವರು ಸ್ವಾಗತ ಕೋರಿದರು. ಐಶ್ವರ್ಯ ನಿರೂಪಿಸಿ, ವಂದಿಸಿದರು.

Bottom Add3
Bottom Ad 2

You cannot copy content of this page