
ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ವಿಧಾನಸಭಾ ಚುನಾವಣೆಗೆ ಮತಹಾಕಲು ಬಿಜೆಪಿ ಅಭ್ಯರ್ಥಿ ಪರ ಟೋಕನ್ ಹಂಚುತ್ತಿದ್ದ ಸರ್ಕಾರಿ ಶಾಲೆಯ ಶಿಕ್ಷಕನನ್ನು ಪೊಲೀಸರು ಬಂಧಿಸಿರುವ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.
ಸರ್ಕಾರಿ ನೌಕರರು ಚುನಾವಣೆ ದಿನ ನಿಗದಿತ ಬೂತ್ ಗಳಲ್ಲಿ ಕಾರ್ಯ ನಿರ್ವಹಿಸುವ ಹಿನ್ನೆಲೆಯಲ್ಲಿ ಅವರಿಗೆ ಅಂಚೆ ಮತದಾನ ವ್ಯವಸ್ಥೆ ಮಾಡಲಾಗಿದೆ. ಆದರೆ ಕಲಬುರ್ಗಿ ದಕ್ಷಿಣ ಕ್ಷೇತ್ರದ ಸರ್ಕಾರಿ ನೌಕರರಿಗೆ ಬಿಜೆಪಿಯವರು ಟೋಕನ್ ಹಂಚುತ್ತಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.
ಸರ್ಕಾರಿ ಶಾಲಾ ಶಿಕ್ಷಕ ಚಿದಾನಂದ ಎಂಬುವವರು ಅಭ್ಯರ್ಥಿ ದತ್ತಾತ್ರೇಯ ಪಾಟೀಲ್ ಪರವಾಗಿ ಮತ ಹಾಕುವಂತೆ ಹೇಳಿ ಟೋಕನ್ ಹಂಚುತ್ತಿದ್ದು, ಟೋಕನ್ ಗೆ ಹಣವನ್ನೂ ಸಂಗ್ರಹಿಸುತ್ತಿದ್ದಾನೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.
ಶಿಕ್ಷಕ ಚಿದಾನಂದ್ ನನ್ನು ಹಿಡಿದು ಪೊಲೀಸರು ಹಾಗೂ ಚುನಾವಣಾಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಚಿದಾನಂದ್ ಬಳಿ ಇರುವ ಟೋಕನ್ ನಲ್ಲಿ ಯಾವುದೇ ಪಕ್ಷ, ಅಭ್ಯರ್ಥಿಯ ಚಿಹ್ನೆ ಇಲ್ಲ ಆದರೆ ಟುಗೆದರ್ ಎಂಬ ಟೋಕನ್ ಮಾತ್ರ ಇದ್ದು, ಟೋಕನ್ ತೋರಿಸಿದರೆ ದುಡ್ಡು ಕೊಡುತ್ತಿದ್ದು, ಈ ಮೂಲಕ ಬಿಜೆಪಿಯವರು ಸರ್ಕಾರಿ ನೌಕರರ ಮತ ಖರೀದಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ