Politics

*ಕನ್ನಡದ ವಿಚಾರದಲ್ಲಿ ನಮ್ಮ ಸರ್ಕಾರ ರಾಜಿಯಾಗುವುದಿಲ್ಲ: ಡಿಸಿಎಂ ಡಿ ಕೆ ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಕನ್ನಡದ ವಿಚಾರದಲ್ಲಿ ರಾಜಿಯಾಗದೆ ಕೆಲಸ ಮಾಡುತ್ತಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ವಿಧಾನಸೌಧ ಆವರಣದಲ್ಲಿ ನಡೆದ ನಾಡದೇವಿ ಭುವನೇಶ್ವರಿ ಕಂಚಿನ ಪ್ರತಿಮೆ ಸ್ಥಾಪನೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ವಿಧಾನಸೌಧದ ಆವರಣದಲ್ಲಿ ಅಂಬೇಡ್ಕರ್ ಅವರ, ಬಸವಣ್ಣನವರ, ಕೆಂಪೇಗೌಡರು ಸೇರಿದಂತೆ ಅನೇಕ ನಾಯಕರ ಪ್ರತಿಮೆಗಳಿವೆ. ಈ ಶಕ್ತಿ ಕೇಂದ್ರದಲ್ಲಿ ನಾಡ ದೇವಿ ಭುವನೇಶ್ವರಿ ತಾಯಿ ಪ್ರತಿಮೆ ಇರಬೇಕು. ಇಲ್ಲಿಗೆ ಭೇಟಿ ನೀಡುವವರು ದೇವಿಯ ಆಶೀರ್ವಾದ ಪಡೆದುಕೊಳ್ಳಬೇಕು ಎಂಬುದು ನಮ್ಮ ಆಶಯ. ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷಗಳಾಗಿದ್ದು ಈ ನೆನಪಿಗಾಗಿ 25 ಅಡಿಯ ಕಂಚಿನ ಪ್ರತಿಮೆ ಸ್ಥಾಪಿಸಲಾಗುತ್ತಿದೆ” ಎಂದರು.

“ಬೆಂಗಳೂರಿನಲ್ಲಿ ಕನ್ನಡ ನಾಮಫಲಕ ಕಡ್ಡಾಯ ಮಾಡಿ ಮೊದಲಬಾರಿಗೆ ಕಾನೂನು ಮಾಡಲಾಯಿತು. ಇದಕ್ಕೆ ಅನೇಕ ಕನ್ನಡ ಸಂಘಟನೆಗಳು ಹೋರಾಟ ಮಾಡಿವೆ. ಒಂದಷ್ಟು ಬಾರಿ ಕಾನೂನು ಕೈಗೆ ತೆಗೆದುಕೊಂಡಾಗ ರಾಜಿಯಾಗದೆ ಕೆಲಸ ಮಾಡಿದ್ದೇವೆ. ಜೊತೆಗೆ ಕನ್ನಡ ಉಳಿಸುವ ಕೆಲಸವನ್ನು ಮಾಡಿದ್ದೇವೆ” ಎಂದು ಹೇಳಿದರು.

“ನಾವು ಯಾರು ಶಾಶ್ವತವಲ್ಲ ಆದರೆ ನಾವು ಮಾಡುವ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ. ಉತ್ತಮವಾದ ಆಲೋಚನೆ ಮಾಡಿರುವ ಕನ್ನಡ ಸಂಸ್ಕೃತಿ ಇಲಾಖೆಗೆ ಅಭಿನಂದನೆಗಳು. ಕನ್ನಡ ಬೆಳೆಯಲಿ, ಉಳಿಯಲಿ” ಎಂದು ಆಶಿಸಿದರು.

ದೇಶದ ಮಕ್ಕಳ ಭವಿಷ್ಯ ಮುಖ್ಯ

ವಿಧಾನಸೌಧದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವ ವೇಳೆ ನೀಟ್ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಅವರು “ನೀಟ್ ಪರೀಕ್ಷೆಯಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರೇ ಅಕ್ರಮ ನಡೆದಿದೆ ಎಂದು ಒಪ್ಪಿಕೊಂಡಿದ್ದಾರೆ. ಈ ವಿಚಾರವಾಗಿ ಸುಪ್ರೀಂ ಕೋರ್ಟ ಎನ್ ಟಿಎ (ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ) ಗೆ ನೋಟಿಸ್ ನೀಡಿರುವುದು ಉತ್ತಮ ನಡೆ. ನಮ್ಮ ದೇಶದ ಮಕ್ಕಳ ಭವಿಷ್ಯ ಮುಖ್ಯವಾದುದು” ಎಂದು ಹೇಳಿದರು.

ಚನ್ನಪಟ್ಟಣದಿಂದ ಉಪಚುನಾವಣೆಗೆ ಸ್ಪರ್ಧಿಸುವಿರಾ ಎಂದು ಕೇಳಿದಾಗ “ಅದನ್ನು ಪಕ್ಷ ತೀರ್ಮಾನ ಮಾಡುತ್ತದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 16 ಸಾವಿರ ಮತಗಳು ಬಂದಿದ್ದವು. ಲೋಕಸಭೆಯಲ್ಲಿ 80 ಸಾವಿರ ಮತಗಳು ಬಂದಿವೆ. ರಾಮನಗರ ಜಿಲ್ಲೆಯ 4 ಸ್ಥಾನಗಳಲ್ಲಿ ಮೂವರು ಕಾಂಗ್ರೆಸ್ ಶಾಸಕರಿದ್ದು ಒಂದನ್ನು ಬದಲಾಯಿಸಬೇಕಾಗಿದೆ” ಎಂದು ಮಾರ್ಮಿಕವಾಗಿ ನುಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button