ಕರಾವಳಿ ಲೇಖಕಿಯರ ಮತ್ತು ವಾಚಿಕೆಯರ ಸಂಘದ ನವೀಕೃತ ಕಟ್ಟಡ ‘ಸಾಹಿತ್ಯ ಸದನ’ ಲೋಕಾರ್ಪಣೆ
ಪ್ರಗತಿವಾಹಿನಿ ಸುದ್ದಿ: ಮಹಿಳೆಯನ್ನು ಆರ್ಥಿಕವಾಗಿ ಸಶಕ್ತಗೊಳಿಸಲು ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ: ಯೋಜನೆಯನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿಕೊಳ್ಳುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಹೇಳಿದ್ದಾರೆ.
ಶನಿವಾರ ಮಂಗಳೂರು ನಗರದ ಉರ್ವಸ್ಟೋರ್ ಬಳಿಯಿರುವ ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ನವೀಕೃತ ಕಟ್ಟಡ ‘ಸಾಹಿತ್ಯ ಸದನ’ ವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡಿದೆ. ಹಾಗಾಗಿ ಗೃಹಲಕ್ಷ್ಮಿ ಸೇರಿದಂತೆ ಎಲ್ಲ ಗ್ಯಾರಂಟಿ ಯೋಜನೆಗಳು ನಿತ್ಯ ನಿರಂತರವಾಗಿ ಮುಂದುವರೆಯಲಿವೆ ಎಂದರು.
ಕರಾವಳಿ ಲೇಖಕಿಯರ – ವಾಚಿಕೆಯರ ಸಂಘಕ್ಕೆ ರಾಜ್ಯ ಪ್ರಶಸ್ತಿ
ಕರಾವಳಿ ಲೇಖಕಿಯರು ಮತ್ತು ವಾಚಕಿಯರ ಸಂಘದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಮಹಿಳಾ ಲೇಖಕಿಯರ ಜೊತೆ ವಾಚಕಿಯರನ್ನು ಸೇರಿಸಿಕೊಂಡು ಸಂಘವನ್ನು ಮುನ್ನಡೆಸುತ್ತಿರುವುದನ್ನು ಕಂಡು ವಿಶೇಷ ಎನಿಸುತ್ತದೆ ಎಂದರು.
ಕರಾವಳಿ ಲೇಖಕಿಯರ – ವಾಚಕಿಯರ ಸಂಘಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರಕಿರುವುದು ಸಂತಸದ ವಿಷಯ. ಹಾಗೆಯೇ ಈ ಸಂಘಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಕೊಡ ಮಾಡುವ ರಾಜ್ಯ ಪ್ರಶಸ್ತಿಯನ್ನು ನೀಡುವುದಾಗಿ ಇದೇ ವೇಳೆ ಸಚಿವರು ಘೋಷಿಸಿದರು.
ಮಹಿಳೆಯರ ಮಾನಸಿಕ ಸದೃಢತೆ ಹಿರಿಮೆ
ಮಹಿಳೆ ಎಂದರೆ ಸಂಘರ್ಷ. ಮಹಿಳೆಯರು ತಮ್ಮ ಅಸ್ತಿತ್ವಕ್ಕೆ ಹೋರಾಟ ಮಾಡುವುದು ಸ್ವಾತಂತ್ರ ಬಂದು 76 ವರ್ಷಗಳ ನಂತರವೂ ಮುಂದುವರಿದಿದೆ. ಇದು ಆತಂಕಕಾರಿ ಬೆಳವಣಿಗೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು
ಸಮಾಜದಲ್ಲಿ ಇಂದು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ, ಬಾಲಗರ್ಭಿಣಿ, ದೌರ್ಜನ್ಯ ಹೀಗೆ ನಿರಂತರ ಶೋಷಣೆ ನಡೆಯುವುದನ್ನು ಕಾಣುತ್ತಿದ್ದೇವೆ. ಆದರೂ, ಮಹಿಳೆ ಮಾನಸಿಕ ಸದೃಢತೆ ಹೊಂದಿರುವವಳು. ಇದರಿಂದಾಗಿಯೇ ಒಲಿಂಪಿಕ್ಸ್ ಕ್ರೀಡೆ, ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಮಹಿಳೆ ಮುಂದೆ ಇದ್ದಾಳೆ. ಹೀಗಿದ್ದರೂ ರಾಜಕೀಯದಲ್ಲಿ ಮಹಿಳೆಯರ ಹಾಜರಾತಿಗೆ ಇನ್ನೂ ಒತ್ತು ನೀಡಬೇಕಾದ ಪ್ರಸಂಗ ಸಮಾಜದಲ್ಲಿದೆ. ಆ ನಿಟ್ಟಿನಲ್ಲಿ ಕರಾವಳಿ ಲೇಖಕಿಯರ ಮತ್ತು ರಾಜಕೀಯ ಸಂಘದಂತಹ ಮಹಿಳಾಪರ ಸಂಘ- ಸಂಸ್ಥೆಗಳ ಕಾರ್ಯಾಚರಣೆಗಳು ಪೂರಕವಾಗಿವೆ ಎಂದು ಸಚಿವರು ಹೇಳಿದರು.
ಅಂಗನವಾಡಿ ಹೆಸರು ಬದಲಾವಣೆ
ರಾಜ್ಯದ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಉನ್ನತೀಕರಿಸಲಾಗುವುದು. ಅಂಗನವಾಡಿ ಎನ್ನುವುದು 50 ವರ್ಷದ ಹಿಂದಿನ ಹೆಸರು. ಅವುಗಳನ್ನು ಇನ್ನು ಮುಂದೆ ಗೌರ್ನಮೆಂಟ್ ಮೊಂಟೆಸರಿ ಎಂದು ಕರೆಯಲಾಗುವುದು ಎಂದು ಸಚಿವರು ತಿಳಿಸಿದರು.
ಪ್ರತಿ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ
ರಾಜ್ಯದ ಪ್ರತಿ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡಬೇಕೆಂಬುದು ಸರ್ಕಾರದ ಆಶಯವಾಗಿದೆ.
ಮನೆಗೆಲಸ ಮಾಡುವ ಪೋಷಕರ ಜತೆಗೆ ಐಎಎಸ್ ಅಧಿಕಾರಿಗಳಿಗೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂಬ ಆಕಾಂಕ್ಷೆ ಇರುತ್ತದೆ. ಹಾಗಾಗಿ, ಎಲ್ಲಾ ಮಕ್ಕಳಿಗೂ ಗುಣಮಟ್ಟದ ಶಿಕ್ಷಣದ ಜೊತೆಗೆ ಪೌಷ್ಠಿಕ ಆಹಾರ ನೀಡುವುದರೊಂದಿಗೆ ಅಂಗನವಾಡಿಗಳನ್ನು ಗೌರ್ನಮೆಂಟ್ ಮೊಂಟೆಸರಿಗಳಾಗಿ ಪರಿವರ್ತಿಸಲಾಗುವುದು ಎಂದರು.
ದ.ಕ.ಜಿಲ್ಲೆಗೆ 10 ಸರ್ಕಾರಿ ಮೊಂಟೆಸರಿ ಸೇರಿ 25 ಅಂಗನವಾಡಿ
ಅಂಗನವಾಡಿ ಕೇಂದ್ರಗಳಲ್ಲೇ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗುವುದು ಎಂದು ಹೇಳಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ದಕ್ಷಿಣ ಕನ್ನಡದ ಜಿಲ್ಲೆಗೆ 10 ಸರಕಾರಿ ಮೊಂಟೆಸರಿಗಳು ಸೇರಿದಂತೆ 25 ಅಂಗನವಾಡಿ ಕೇಂದ್ರಗಳನ್ನು ಈ ವರ್ಷವೇ ನೀಡಲಾಗುವುದು. ಈ ಅಂಗನವಾಡಿ ಕೇಂದ್ರಗಳಿಗೆ ತಲಾ 20 ಲಕ್ಷ ರೂಪಾಯಿ ಅನುದಾನ ದೊರಕಿಸಲಾಗುವುದು ಎಂದರು.
ಸಮಾರಂಭದಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್ ಮಾತನಾಡಿದರು. ಸಂಘದ ಅಧ್ಯಕ್ಷರಾದ ಜ್ಯೋತಿ ಚೇಳ್ಯಾರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರ ಮಾಜಿ ಸಂಸದೀಯ ಕಾರ್ಯದರ್ಶಿ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಂ.ಪಿ. ಶ್ರೀನಾಥ, ಎಂಆರ್ ಪಿಎಲ್ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿ ಮೀನಾಕ್ಷಿ, ಕಾರ್ಪೊರೇಟರ್ ಗಣೇಶ್ ಕುಲಾಲ್, ಪ್ರಾಧ್ಯಾಪಕಿ ಡಾ. ಸಬಿತಾ ಬನ್ನಾಡಿ, ಹಿರಿಯ ಲೇಖಕಿ ಇಂದಿರಾ ಹಾಲಂಬಿ ಸೇರಿದಂತೆ ಕರಾವಳಿಯ ಲೇಖಕರು, ವಾಚಿಕೆಯರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ