ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಹಾಮಾರಿ ಕೊರೊನಾ ಸೋಂಕು ಕಡಿಮೆಯಾಯಿತು ಎಂದು ಜನರು ಕೊಂಚ ನಿಟ್ಟುಸಿರು ಬಿಡುತ್ತಿರುವಾಗಲೇ ರಾಜ್ಯದಲ್ಲಿ ಮತ್ತೊಂದು ಶಾಕಿಂಗ್ ಸುದ್ದಿ ಹೊರ ಬಿದ್ದಿದೆ. ಕರ್ನಾಟಕದಲ್ಲಿ ಮೊದಲ ಝೀಕಾ ವೈರಸ್ ದೃಢಪಟ್ಟಿದೆ. ಚಳಿಗಾಲದ ಜೊತೆಗೆ ಮಾಂಡೌಸ್ ಚಂಡಮಾರುತದ ಪರಿಣಾಮ ಭಾರಿ ಮಳೆ, ಶೀತಗಾಳಿ ನಡುವೆ ರಾಜ್ಯದಲ್ಲಿ ಮತ್ತೆ ಸೋಂಕಿನ ಲಕ್ಷಣಗಳು ಉಲ್ಬಣಗೊಳ್ಳುವ ಆತಂಕ ಎದುರಾಗಿದೆ. ಈ ನಡುವೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಜನರಲ್ಲಿ ಉಸಿರಾಟದ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ ಜಾಗರೂಕತೆ ವಹಿಸುವಂತೆ ಸೂಚನೆ ನೀಡಿರುವುದು ಜನರ ನಿದ್ದೆಗೆಡಿಸುವಂತೆ ಮಾಡಿದೆ.
ರಾಜ್ಯದಲ್ಲಿ ಮೊದಲ ಝೀಕಾ ವೈರಸ್ ದೃಢಪಟ್ಟಿದೆ ಎಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಸೊಳ್ಳೆ ಕಡಿತದಿಂದ ಕಾಣಿಸಿಕೊಳ್ಳುವ ಝೀಕಾ ವೈರಸ್ ಮೊದಲ ಪ್ರಕರಣ ರಾಜ್ಯದಲ್ಲಿ ಪತ್ತೆಯಾಗಿದ್ದು, 5 ವರ್ಷದ ಬಾಲಕಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ 5 ವರ್ಷದ ಬಾಲಕಿಯಲ್ಲಿ ಝೀಕಾ ವೈರಸ್ ಸೋಂಕು ಪತ್ತೆಯಾಗಿದೆ. ಕಳೆದ 15 ದಿನಗಳಿಂದ ಜ್ವರ, ವಾಂತಿ, ಬೇಧಿಯಿಂದ ಬಳಲುತ್ತಿದ್ದ ಬಾಲಕಿಯನ್ನು ಮೊದಲು ಸಿಂಧನೂರು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಬಾಲಕಿಯಲ್ಲಿ ಡೆಂಘಿ ಜ್ವರ ದೃಢಪಟ್ಟ ಹಿನ್ನೆಲೆಯಲ್ಲಿ ವಿಜಯನಗರದ ವಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ನ.15ರಿಂದ 18ರವರೆಗೆ ವಿಮ್ಸ್ ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ನೀಡಲಾಗಿದೆ.
ಬಳಿಕ ವಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರು ಬಾಲಕಿಯ ಸ್ಯಾಂಪಲ್ ಸಂಗ್ರಹಿಸಿ ಪುಣೆಯ ವೈರಾಲಜಿ ಲ್ಯಾಬ್ ಗೆ ರವಾನಿಸಿದ್ದರು. ಇದೀಗ ಪುಣೆಯ ಲ್ಯಾಬ್ ನಿಂದ ವರದಿ ಬಂದಿದ್ದು, ಬಾಲಕಿಗೆ ಝೀಕಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ. ಝೀಕಾ ವೈರಸ್ ಬಗ್ಗೆ ಜಾಗೃತಿ ವಹಿಸುವ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.
5 ವರ್ಷದ ಬಾಲಕಿಯಲ್ಲಿ ಝೀಕಾ ವೈಸರ್ ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹೈ ಅಲರ್ಟ್ ಆಗಿದ್ದು, ಆರೋಗ್ಯಾಧಿಕಾಗಳ ಸೂಚನೆ ಮೇರೆಗೆ ವೈದ್ಯರು ಬಾಲಕಿಯ ಕುಟುಂಬದವರ ರಕ್ತ ಹಾಗೂ ಯೂರಿನ್ ಸ್ಯಾಂಪಲ್ ಸಂಗ್ರಹಿಸಿ ಲ್ಯಾಬ್ ಗೆ ರವಾನಿಸಿದ್ದಾರೆ.
ಈ ನಡುವೆ ಮಾಂಡೌಸ್ ಚಂಡಮಾರುತದ ಪರಿಣಾಮದ ಅಬ್ಬರಕ್ಕೆ ರಾಜ್ಯದಲ್ಲಿಯೂ ಭಾರಿ ಮಳೆ, ಶೀತಗಾಳಿ ಹೆಚ್ಚುತ್ತಿದ್ದು ಜನರು ತತ್ತರಿಸುತ್ತಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಮೈಕೊರೆಯುವ ಚಳಿಯ ಜೊತೆಗೆ ಇಂದು ಸಂಜೆಯಿಂದ ಗುಡುಗು ಸಹಿತ ಭಾರಿ ಮಳೆಯಾಗುತ್ತಿದ್ದು ಜನರು ಹೈರಾಣಾಗಿದ್ದಾರೆ. ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಜಿಟಿ ಜಿಟಿ ಮಳೆ ಎಡೆಬಿಡದೇ ಸುರಿಯುತ್ತಿದ್ದು, ಇಂದು ಸಂಜೆ ವೇಳೆಗೆ ವರುಣಾರ್ಭಟ ಜೋರಾಗಿದ್ದು, ಪ್ರಮುಖ ರಸ್ತೆಗಳು, ಬಡಾವಣೆಗಳು ಮತ್ತೆ ಜಾಲವೃತಗೊಂಡಿವೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಿಪರೀತ ಗಾಳಿ, ಮಳೆಯಾಗುತ್ತಿದ್ದು, ಜನರು ಆರೋಗ್ಯಸಮಸ್ಯೆಗಳಿಗೀಡಾಗುತ್ತಿದ್ದಾರೆ. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಆಸ್ಪತ್ರೆಗಳಿಗೆ ಅಲೆದಾಡುವವರ ಸಂಖ್ಯೆ ಒಂದೇ ಸಮನೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಸುಧಾಕರ್ ರಾಜ್ಯದ ಜನತೆಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಚಳಿಗಾಲದ ಜೊತೆಗೆ ಚಂಡಮಾರುತದ ಪರಿಣಾಮವಾಗಿ ರಾಜ್ಯದಲ್ಲಿ ಹಲವೆಡೆ ಮಳೆ, ಶೀತಗಾಳಿ ಬೀಸುತ್ತಿದೆ. ಇದು ಜನರ ಆರೋಗ್ಯ ಹದಗೆಡುವಂತೆ ಮಾಡುತ್ತಿದೆ. ಶೀತಗಾಳಿ, ಮಳೆಯಿಂದಾಗಿ ಹಲವರು ಕೆಮ್ಮು, ನೆಗಡಿ, ಜ್ವರದಿಂದ ಬಳಲುತ್ತಿದ್ದಾರೆ. ಮಕ್ಕಳು, ವೃದ್ಧರು ಮಾತ್ರವಲ್ಲ ರಾಜ್ಯದ ಜನತೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುಮುವುದು ಅಗತ್ಯವಿದೆ. ದೇಹವನ್ನು ಹೆಚ್ಚು ಬೆಚ್ಚಗಿರುವಂತೆ ನೋಡಿಕೊಳ್ಳಿ. ಈಗಾಗಲೇ ಆರೋಗ್ಯ ಇಲಾಖೆಯಿಂದಲೂ ಮಾರ್ಗಸೂಚಿ ಹೊರಡಿಸುವ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಚಳಿಗೆ ಹಾಗೂ ಕೋವಿಡ್ ಸೋಂಕಿಗೂ ಯಾವುದೇ ಸಂಬಂಧವಿಲ್ಲ. ಪೋಷಕರು ಮಕ್ಕಳನ್ನು ಬಹಳ ಜಾಗರೂಕತೆಯಿಂದ ನೋಡಿಕೊಳ್ಳಬೇಕು. ಆರೋಗ್ಯ ಸಮಸ್ಯೆಗಳಿರುವವರು, ವೃದ್ಧರು ಆರೋಗ್ಯದ ಮೇಲೆ ಹೆಚ್ಚು ನಿಗಾವಹಿಸಿ ಎಂದು ಸಲಹೆ ನೀಡಿದ್ದಾರೆ.
ಶೀತಗಾಳಿ, ಮಳೆ ಹೆಚ್ಚಾಗುತ್ತಿರುವುದರಿಂದ ಜನರಲ್ಲಿ ಉಸಿರಾಟದ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಆಸ್ಪತ್ರೆಗಳಲ್ಲಿಯೂ ಎಲ್ಲಾ ಸಿದ್ಧತೆ ಮಾಡಿಕೊಳ್ಳುವಂತೆ ವೈದ್ಯರ ಸಭೆ ಕರೆದು ಸೂಚಿಸಲಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಂತೆ ಹೇಳಲಾಗಿದೆ. ಕೆಲ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ. ಆರೋಗ್ಯ ಇಲಾಖೆ ಎಲ್ಲಾ ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಜನರು ಕೂಡ ಜಾಗೃತೆ ವಹಿಸುವಂತೆ ತಿಳಿಸಿದ್ದಾರೆ.
ಒಟ್ಟಾರೆ ರಾಜ್ಯದಲ್ಲಿ ಚಳಿಗಾಲದ ಜೊತೆ ಜೊತೆಗೆ ಮಳೆ, ಚಂಡಮಾರುತದ ಅಬ್ಬರ, ಶೀತಗಾಳಿ ಜನರ ಆರೋಗ್ಯದ ಮೇಲೆ ಈಗಾಗಲೇ ದುಷ್ಪರಿಣಾಮ ಬೀರುತ್ತಿದ್ದು, ರಾಜ್ಯದಲ್ಲಿ ಇನ್ನೂ ಮೂರು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದು ಜನರನ್ನು ಇನ್ನಷ್ಟು ಕಂಗೆಡುವಂತೆ ಮಾಡಿರುವುದು ಸುಳ್ಳಲ್ಲ.
*BREAKING NEWS: ರಾಜ್ಯದಲ್ಲಿ ಮೊದಲ ಝೀಕಾ ವೈರಸ್ ದೃಢ*
https://pragati.taskdun.com/karnata1st-zika-virus5-yers-girlraichurmanvi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ