
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯಲ್ಲಿ ಎಂಇಎಸ್ ಹಾಗೂ ಶಿವಸೇನೆ ನಿಷೇಧಿಸಬೇಕು ಹಾಗೂ ಮಹದಾಯಿ-ಕಳಸಾ ಬಂಡೂರಿ, ಮೇಕೆದಾಟು ಯೋಜನೆ ಅನುಷ್ಠಾನ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಕನ್ನಡ ಸಂಘಟನೆಗ ಒಕ್ಕೂಟ ನೀಡಿದ ಬಂದ್ ಗೆ ಬೆಳಗಾವಿಯಲ್ಲಿಯೇ ನಿರಸ ಪ್ರಕ್ರಿಯೇ ವ್ಯಕ್ತವಾಗಿದೆ.
ಬೆಳಗಾವಿಯಲ್ಲಿ ಜನ ಮತ್ತು ವಾಹನಗಳ ಓಡಾಟ ಕಂಡು ಬಂದಿತು. ಅಂಗಡಿ, ಮುಂಗಟ್ಟುಗಳು ಎಂದಿನಂತೆ ವ್ಯಾಪಾರ ವಹಿವಾಟು ನಡೆಸಿದವು. ಹೋಟೆಲ್ ಗಳು ತೆರೆದಿದ್ದವು. ಬಂದ್ ಬಿಸಿ ನಗರದಲ್ಲಿ ಯಾವುದೇ ರೀತಿ ತಟ್ಟಲಿಲ್ಲ. ಸಾರಿಗೆ ಬಸ್, ಆಟೋ ಸೇರಿ ಖಾಸಗಿ ವಾಹನಗಳು ಓಡಾಡಿದವು. ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ಹೋಗುವ ಬಸ್ ಹಾಗೂ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರಬೇಕಿದ್ದ ಬಸ್ ಗಳ ಸಂಚಾರ ಬಂದ್ ಆಗಿತ್ತು. ಇನ್ನುಳಿದಂತೆ ಬೆಳಗಾವಿ ನಗರ, ಜಿಲ್ಲೆ ಸೇರಿ ರಾಜ್ಯದ ವಿವಿಧೆಡೆ ಎಂದಿನಂತೆ ಬಸ್ ಗಳು ಕಾರ್ಯಾಚರಣೆ ಮಾಡುತ್ತಿವೆ
ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ರಾಣಿ ಚನ್ನಮ್ಮ ವೃತ್ತದವರೆಗೂ ಕನ್ನಡ ಹೋರಾಟಗಾರರು ಪಾದಯಾತ್ರೆ ನಡೆಸಿದರು. ಈ ವೇಳೆ ರಸ್ತೆಯಲ್ಲಿ ಹೊರಳಾಡಿ ಎಂಇಎಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಹದಾಯಿ, ಕಳಸಾ ಬಂಡೂರಿ, ಮೇಕೆದಾಟು ಯೋಜನೆ ಜಾರಿ ಮಾಡುವಂತೆ ಒತ್ತಾಯಿಸಿದರು.
ಎಂದಿನಂತೆ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಅಂಗಡಿಗಳನ್ನು ಬಂದ್ ಮಾಡಿಸಲು ಪ್ರತಿಭಟನಾಕಾರರು ಮಾರುಕಟ್ಟೆಯತ್ತ ಹೊರಡಲು ಯತ್ನಿಸಿದರು. ಅವರನ್ನು ಪೊಲೀಸರು ತಡೆದರು. ಈ ವೇಳೆ ವಾಗ್ವಾದ ಉಂಟಾಯಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದರು.
ರಾಜ್ಯ ಸರ್ಕಾರ ಕರ್ನಾಟಕ ಬಂದ್ ಹತ್ತಿಕ್ಕಲು ಯತ್ನಿಸುತ್ತಿದೆ. ಹಾಗಾಗಿ, ಇದು ಕನ್ನಡ ವಿರೋಧಿ ಸರ್ಕಾರ. ಮುಂದಿನ ದಿನಗಳಲ್ಲಿ ಈ ಸರ್ಕಾರಕ್ಕೆ ಕನ್ನಡಿಗರು ತಕ್ಕ ಪಾಠ ಕಲಿಸಲಿದ್ದಾರೆ. ಎಂಇಎಸ್ ಮತ್ತು ಶಿವಸೇನೆ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಹೋರಾಟಗಾರರು ಒತ್ತಾಯಿಸಿದರು.