Kannada NewsKarnataka NewsLatest

*ಸಿನಿಮಾ ಕಥೆಯನ್ನೇ ಮೀರಿಸುವಂತಹ ಖೋಟಾ ನೋಟು ಜಾಲ ಪತ್ತೆ: ಆರು ಆರೋಪಿಗಳು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಸಿಗರೇಟ್ ಖರೀದಿಸಲು ನೀಡಿದ್ದ ನೋಟಿನ ಬೆನ್ನತ್ತಿದ ಪೊಲೀಸರು ರಾಜ್ಯವ್ಯಾಪಿ ಹರಡಿರುವ ಖೋಟಾ ನೋಟು ಜಾಲವನ್ನು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಆರೂ ಆರೋಪಿಗಳನ್ನು ಬಂಧಿಸಿದ್ದಾರೆ.

Home add -Advt

ತುಮಕೂರಿನ ಹುಳಿಯೂರಿನ ಅಂಗಡಿಯೊಂದರಲ್ಲಿ ಇಬ್ಬರು ಸಿಗರೇಟ್ ಖರೀದಿಸಿ 500 ರೂಪಾಯಿಯ ನಕಲಿ ನೋಟು ನೀಡಿ ಪರಾರಿಯಾಗಿದ್ದರು. ಅಂಗಡಿ ಮಾಲೀಕ ನೀಡಿದ ದೂರಿನ ಮೇರೆಗೆ ತನಿಖೆ ಆರಂಭಿಸಿದ ಹುಳಿಯೂರು ಮತ್ತು ಚಿಕ್ಕನಾಯಕನಹಳ್ಳಿ ಪೊಲೀಸರು, ಕೇವಲ ಒಂದೇ ಒಂದು ನೋಟಿನ ಸುಳಿವು ಹಿಡಿದು ಬೆಂಗಳೂರು, ಮೈಸೂರು ಸೇರಿದಂತೆ ವಿವಿಧೆಡೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಮುದ್ರಣ, ಮಾರಾಟ ಮತ್ತು ಚಲಾವಣೆಯ ಪ್ರತ್ಯೇಕ ವ್ಯವಸ್ಥಿತ ಜಾಲ ಪತ್ತೆಯಾಗಿದೆ.

ಬಂಧಿತ ಆರು ಮಂದಿಯಲ್ಲಿ ಬೆಂಗಳೂರಿನ ರುದ್ರೇಶ್ ಎಂಬಾತ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದರೆ, ಮೈಸೂರಿನ ರವಿ ಅದನ್ನು ಮಾರಾಟ ಮಾಡುವ ಜವಾಬ್ದಾರಿ ಹೊತ್ತಿದ್ದ. ಅನಂತಪುರದ ಕುಬೇರಪ್ಪ ಹಾಗೂ ಹನುಮಂತಪ್ಪ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದರು. ಇವರಿಂದ ನೋಟು ಖರೀದಿಸುತ್ತಿದ್ದ ವೆಂಕಟೇಶ್ ಮತ್ತು ತಿಲಕ್ ಕುಮಾರ್ ಸಾರ್ವಜನಿಕರ ನಡುವೆ ಚಲಾವಣೆ ಮಾಡುತ್ತಿದ್ದರು ಎಂಬುದು ಕಾರ್ಯಾಚರಣೆ ವೇಳೆ ತಿಳಿದುಬಂದಿದೆ.

ಬಂಧಿತರಿಂದ ಸದ್ಯ 500 ರೂ. ಮುಖಬೆಲೆಯ 60ಕ್ಕೂ ಹೆಚ್ಚು ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆ ವೇಳೆ ರಾಜ್ಯದ ಇತರೆ ಜಿಲ್ಲೆಗಳಲ್ಲೂ ನೋಟು ಚಲಾವಣೆಯಾಗಿರುವ ಮಾಹಿತಿ ಲಭ್ಯವಾಗಿದ್ದು, ಇದರ ಹಿಂದೆ ಇರುವ ಬೃಹತ್ ಜಾಲವನ್ನು ಪತ್ತೆಮಾಡಲು ಕಾರ್ಯಾಚರಣೆ ಮುಂದುವರೆಸಿದ್ದಾರೆ.

Related Articles

Back to top button