
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಭೂ ಸುಧಾರಣಾ ಕಾಯಿದೆ, ಎಪಿಎಂಸಿ ಕಾಯಿದೆ ವಿರೋಧಿಸಿ ಅಖಿಲ ಭಾರತ ಕಿಸಾನ್ ಸಮಿತಿ ಸೆ.25ರಂದು ಕರೆ ನೀಡಿರುವ ಭಾರತ್ ಬಂದ್ ಗೆ ರಾಜ್ಯ ರೈತ ಸಂಘಟಗಳು ಬೆಂಬಲ ವ್ಯಕ್ತಪಡಿಸಿವೆ. ಆದರೆ ಕರ್ನಾಟಕ ಬಂದ್ ಯಾವ ರೀತಿ ಇರಬೇಕು ಎಂಬ ಬಗ್ಗೆ ನಾಳೆ ಬೆಳಿಗ್ಗೆ ನಿರ್ಧಾರ ಪ್ರಕಟಿಸುವುದಾಗಿ ರೈತ ಮುಖಂಡ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿರುವ ರೈತ ಮುಖಂಡರು, ಭೂ ಸುಧಾರಣಾ ಕಾಯಿದೆ ವಿರೋಧಿಸಿ ಕರೆ ನೀಡಿರುವ ಬಂದ್ ಗೆ ನಮ್ಮ ತಾತ್ವಿಕ ಬೆಂಬಲವಿದೆ. ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಭೂ ಸುಧಾರಣಾ ಕಾಯಿದೆ, ಎಪಿಎಂಸಿ ಕಾಯಿದೆಯನ್ನು ಯಾವುದೇ ಚರ್ಚೆಗಳಿಗೂ ಅವಕಾಶವನ್ನೂ ನೀಡದೇ ರಾಜ್ಯ ಸರ್ಕಾರ ಕೂಡ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಮುಂದಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಈ ನಡೆ ಖಂಡನೀಯ ಎಂದು ಕಿಡಿಕಾರಿವೆ.
ಚರ್ಚೆಗೂ ಅವಕಾಶ ನೀಡದೇ ಕಾಯಿದೆ ತರುವ ಅಗತ್ಯವೇನು? ಸರ್ಕಾರಗಳು ಬೃಹತ್ ಕಂಪನಿಗಳ ಜೊತೆ ಶಾಮೀಲಾಗಿ ಅನ್ನದಾತನ ಭೂಮಿಯನ್ನು ಕಸಿದುಕೊಳ್ಳುವ ಹುನ್ನಾರ ನಡೆಸಿವೆ. ಈ ಮೂಲಕ ರೈತರು, ಕಾರ್ಮಿಕರು, ದಲಿತರ ಹಕ್ಕು ಕಿತ್ತುಕೊಳ್ಳಲಾಗುತ್ತಿದೆ. ರೈತ ವಿರೋಧಿ ಕಾಯಿದೆಗಳ ವಿರುದ್ಧದ ಸೆ.25ರ ಭಾರತ್ ಬಂದ್ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಶೇ.80ರಷ್ಟು ರೈತರಿರುವ ಕರ್ನಾಟಕದಲ್ಲಿ ಹಿಂದೆ ಕಂಡುಕೇಳರಿಯದ ರೀತಿಯಲ್ಲಿ ಬಂದ್ ಯಶಸ್ವಿಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಯಾವ ರೀತಿ ಬಂದ್ ನಡೆಸಬೇಕು ಎಂಬ ಬಗ್ಗೆ ಆನ್ ಲೈನ್ ಮೂಲಕ ಸಭೆ ನಡೆಸಿ ನಾಳೆ ಬೆಳಿಗ್ಗೆ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ.