Latest

ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನಿಂದ ಭಾರೀ ಮಳೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸಂಕಷ್ಟದ ನಡುವೆ ಮಳೆಯ ಅಬ್ಬರ ಜೋರಾಗಿದೆ. ಕಳೆದ ಎರಡು ದಿನಗಳಿಂದ ಕರಾವಳಿ ಮತ್ತು ಮಲೆನಾಡಿನ ಭಾಗದಲ್ಲಿ ಮಾನ್ಸೂನ್ ಚುರುಕುಗೊಂಡಿದೆ. ಹೀಗಾಗಿ, ಇಂದಿನಿಂದ 5 ದಿನಗಳ ಕಾಲ ಬೆಳಗಾವಿ, ಹಾಸನ, ಕೊಡಗು, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರುಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಭಾರೀ ಮಳೆಯಾಗುವ ಸಾಧ್ಯತೆಯಿರುವುದರಿಂದ ಈ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್​ ಘೋಷಿಸಿದೆ. ಅರಬ್ಬಿ ಸಮುದ್ರದಿಂದ ಕರ್ನಾಟಕದ ಕರಾವಳಿಯೆಡೆಗೆ ಗಂಟೆಗೆ 55 ಕಿ.ಮೀ. ವೇಗದಲ್ಲಿ ಗಾಳಿ ಬೀಸತೊಡಗಿದೆ. ಇದರಿಂದ ಕರಾವಳಿ ಭಾಗದಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಮಂಗಳೂರಿನಲ್ಲಿ ಭಾನುವಾರ ಸುರಿದ ಭಾರೀ ಮಳೆಯಿಂದ ಭೂಕುಸಿತ ಉಂಟಾಗಿ, ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಉಡುಪಿಯಲ್ಲೂ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಮಲೆನಾಡಿನ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರಿನಲ್ಲೂ ಮಳೆ ಹೆಚ್ಚಾಗಿದೆ.

ಶಿವಮೊಗ್ಗದ ತೀರ್ಥಹಳ್ಳಿ, ಹೊಸನಗರ, ಸಾಗರದಲ್ಲಿ ಭಾನುವಾರ ಭಾರೀ ಮಳೆಯಾಗಿದೆ. ಚಿಕ್ಕಮಗಳೂರಿನ ಮೂಡಿಗೆರೆ, ಕೊಪ್ಪ, ಶೃಂಗೇರಿ, ಕಳಸದಲ್ಲಿಯೂ ಮಳೆ ಹೆಚ್ಚಾಗಿದೆ. ಚಾರ್ಮಾಡಿ ಘಾಟ್​ನ ತೊರೆಗಳು, ಕಾಫಿನಾಡಿನ ಜಲಪಾತಗಳು ಮರುಜೀವ ಪಡೆದುಕೊಂಡಿವೆ. ಮಳೆಯಿಂದಾಗಿ ಈ ಭಾಗದ ಪ್ರಮುಖ ನದಿಗಳಾದ ತುಂಗಾ, ಭದ್ರಾ, ಹೇಮಾವತಿ, ವರಾಹಿ ತುಂಬಿ ಹರಿಯುತ್ತಿವೆ.

ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಬಳ್ಳಾರಿ, ಧಾರವಾಡ ಮುಂತಾದ ಕಡೆಗಳಲ್ಲಿ ಕೂಡ ಮಳೆಯಾಗಿದೆ. ಇಂದು ಬೆಳಗ್ಗೆಯಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button