
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಅದರಲ್ಲೂ ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳು ವರುಣನ ಆರ್ಭಟಕ್ಕೆ ಅಕ್ಷರಶ: ನಲುಗಿ ಹೋಗಿವೆ. ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿಯಲ್ಲಿ ಸಿಲುಕಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲು ರಾಜ್ಯ ಸರ್ಕಾರ ಎನ್ ಡಿ ಆರ್ ಎಫ್ ತಂಡವನ್ನು ಕಳುಹಿಸಿದೆ.
ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಉಡುಪಿಯ ಮುಖ್ಯ ರಸ್ತೆಗಳು ನೀರಿನಲ್ಲಿ ಮುಳುಗಡೆಯಾಗಿದ್ದು, ಪುತ್ತಿಗೆ ಮಠ ಗುಂಡಿಬೈಲ್-ಕಲ್ಸಂಕ ರಸ್ತೆ, ಬೈಲ್ಕೆರೆ ಮಠದಬೆಟ್ಟು, ಉಡುಪಿ- ಮಣಿಪಾಲ್ ಮುಖ್ಯರಸ್ತೆಗಳು ನೀರಿನಿಂದ ಮುಳುಗಿವೆ. ಉಡುಪಿ ಶ್ರೀ ಕೃಷ್ಣ ಮಠದ ಸಂದರ್ಶಕರ ಪಾರ್ಕಿಂಗ್ ಪ್ರದೇಶವು ನೀರಿನಲ್ಲಿ ಮುಳುಗಿದೆ.
ಬಡಗುಪೇಟೆಯ ಅನೇಕ ಅಂಗಡಿಗಳು ಮತ್ತು ಮನೆಗಳಿಗೆ ನೀರು ನುಗ್ಗಿದೆ. ಬೈಲುಕೆರೆ , ಕುಂಜಿಬೆಟ್ಟು ಪ್ರದೇಶವೂ ಜಲಾವೃತವಾಗಿದೆ. ಕಲ್ಸಂಕ ಬಳಿಯ ಇಂದ್ರಾಣಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ನದಿ ಪಾತ್ರದ ಜನರನ್ನು ಕ್ರೇನ್ ಮೂಲಕ ಗಂಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ಬ್ರಹ್ಮಾವರ ತಾಲೂಕಿನ ನೀಲಾವರ, ಮಟಪಾಡಿ ಗ್ರಾಮಗಳಲ್ಲಿ ತೋಟಗಳಿಗೆ ನೀರು ನುಗ್ಗಿದೆ. ತಗ್ಗುಪ್ರದೇಶದ ಜನಸಂಪರ್ಕವನ್ನು ಕಳೆದುಕೊಂಡಿದ್ದಾರೆ. ಧಾರಾಕಾರ ಮಳೆಗೆ ಕಾರ್ಕಳ ಬಳಿಯ ಮಾಳಘಾಟಿಯಲ್ಲಿ ಗುಡ್ಡ ಕುಸಿತವುಂಟಾಗಿದೆ. ಕೊಟ್ಟಿಗೆಹಾರ ಚಾರ್ಮಡಿಘಾಟ್ ರಸ್ತೆ ಸಂಪೂರ್ಣ ಬಂದ್ ಆಗಿದೆ.
ಈ ನಡುವೆಭಾರಿ ಮಳೆ ಹಿನ್ನಲೆಯಲ್ಲಿ ಮಂಗಳೂರು ವಿಶ್ವ ವಿದ್ಯಾಲಯ ನಾಳೆ ನಡೆಯ ಬೇಕಿದ್ದ ಪದವಿ ಪರೀಕ್ಷೆಯನ್ನು ಮುಂದೂಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ