
ನವೆಂಬರ್ 1ರಿಂದ ಮತ್ತೆ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
ಪ್ರಗತಿವಾಹಿನಿ ಸುದ್ದಿ: ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಕಾಸರಗೋಡಿನ ಒಂದೆರಡು ಕಡೆ ತುಂತುರು ಮಳೆಯ ಸಾಧ್ಯತೆ ಇದ್ದು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಘಟ್ಟದ ಕೆಳಗಿನ ಪ್ರದೇಶಗಳ ಒಂದೆರಡು ಕಡೆ ಗುಡುಗು ಸಹಿತ ತುಂತುರು ಮಳೆಯ ಸಾಧ್ಯತೆಯೂ ಇದೆ.
ಈಗಿನಂತೆ ಈ ರೀತಿಯ ವಾತಾವರಣವು ಅಕ್ಟೊಬರ್ ಕೊನೆಯ ತನಕವೂ ಮುಂದುವರಿಯುವ ಸಾಧ್ಯತೆಗಳಿವೆ.
ಮಲೆನಾಡು : ಕೊಡಗಿನ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳ ಒಂದೆರಡು ಕಡೆ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಮೋಡದ ವಾತಾವರಣ ಇರಲಿದ್ದು, ಚಿಕ್ಕಮಗಳೂರಿನ ಕರಾವಳಿ ಜಿಲ್ಲೆಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಒಂದೆರಡು ಕಡೆ ಗುಡುಗು ಸಹಿತ ಸಾಮಾನ್ಯ ಮಳೆಯ ಸಾಧ್ಯತೆ ಇದೆ.
ಈಗಿನಂತೆ ಅಕ್ಟೊಬರ್ 30ರಿಂದ ಮಳೆ ಹೆಚ್ಚಾಗುವ ಲಕ್ಷಣಗಳಿದ್ದು, ನವೆಂಬರ್ ಮೊದಲ ವಾರದಲ್ಲಿಯೂ ಮಳೆ ಮುಂದುವರಿಯುವ ಸಂಭವವಿದೆ.
ಒಳನಾಡು : ಉತ್ತರ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಒಣ ಹವೆ ಮುಂದುವರಿಯಲಿದ್ದು, ನವೆಂಬರ್ 1ರಿಂದ ಮತ್ತೆ ಮಳೆ ಆರಂಭವಾಗುವ ಲಕ್ಷಣಗಳಿವೆ
ಡಾನಾ ಚಂಡಮಾರುತ ಸಂಪೂರ್ಣ ಶಿಥಿಲಗೊಂಡ ನಂತರ ಈಗ ಉತ್ತರ ಭಾರತ ಕಡೆಯಿಂದ ಬೀಸುತ್ತಿರುವ ಶುಷ್ಕ ಗಾಳಿಯ ಪ್ರಮಾಣವೂ ಕಡಿಮೆಯಾಗಲಿದ್ದು, ನವೆಂಬರ್ 1ರಿಂದ ರಾಜ್ಯದಾದ್ಯಂತ ಹಿಂಗಾರು ರೂಪದ ಮಳೆ ಆರಂಭವಾಗುವ ಸಾಧ್ಯತೆಗಳಿವೆ.