Karnataka News

*ಒಂದೆಡೆ ಆಲಿಕಲ್ಲು ಮಳೆ: ಮತ್ತೊಂದೆಡೆ ಸಿಡಿಲು ಬಡಿದು ಒಂದೇ ದಿನ 7 ಜನರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವರುನಾರ್ಭಟ ಜೋರಾಗಿದೆ. ಕೆಲವೆಡೆ ಆಲಿಕಲ್ಲು ಮಳೆಯಾಗಿದ್ದರೆ ಮತ್ತೊಂದೆಡೆ ಬಿರುಗಾಳಿ, ಗುಡುಗು-ಸಿಡಿಲು ಸಹಿತ ಭಾರಿ ಮಳೆಯಾಗುತ್ತಿದೆ.

ಗುಡುಗು-ಸಿಡಿಲಭರಕ್ಕೆ ರಾಜ್ಯದಲ್ಲಿ ಒಂದೇ ದಿನ 7 ಜನರು ಸಾವನ್ನಪ್ಪಿದ್ದಾರೆ. ಬಳ್ಳಾರಿಯಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಇನ್ನುಳಿದ ಜಿಲ್ಲೆಗಳಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.

ಬಳ್ಳಾರಿಯ ಸಿರಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ಸಿಡಿಲಿಗೆ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಕುರಿ ಮೇಯಿಸಲು ಹೋದಾಗ ಏಕಾಏಕಿ ಗುಡುಗು ಸಿಡಿಲು ಸಹಿತ ಮಳೆ ಆರಂಭವಾಗಿದ್ದು, ಈ ವೇಳೆ ದುರಂತ ಸಂಭವಿಸಿದೆ.

ಇದೇ ವೇಲೆ ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ತಾಲೂಕಿನ ತಂಗಡಗಿ ಗ್ರಾಮದಲ್ಲಿ ಸಿಡಿಲು ಬಡಿದು ರೈತನೋರ್ವ ಮೃತಪಟ್ಟಿದ್ದಾರೆ. ಮಲ್ಲಪ್ಪ ತಾಳಿಕೋಟೆ (45) ಮೃತರು.

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಜಮೀನಿನಲ್ಲಿ ಕೆಲಸ ಮಾಡುವಾಗ ಮತ್ತೋರ್ವ ರೈತ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಯಂಕಪ್ಪ ಜಾಡಿ ಮೃತರು. ಇದೇ ವೇಳೆ ಸಿಡಿಲಬ್ಬರಕ್ಕೆ ಎರಡು ಎತ್ತುಗಳು ಮೃತಪಟ್ಟಿವೆ.

ಚಿಕ್ಕಮಗಳೂರಿನ ಕಡೂರು ತಾಲೂಕಿನ ಗೆದ್ಲೆಹಳ್ಳಿಯಲ್ಲಿ ಸಿಡಿಲಿಗೆ ಕುರಿಗಾಹಿ ಲೋಕೇಶಪ್ಪ (65) ಎಂಬುವವರು ಸಾವನ್ನಪ್ಪಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಸಿಡಿಲು ಬಡಿದು 7 ಜನ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಾರವಾಡ ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಮನೆಗಳಿಗೆ ಹಾನಿಯಾಗಿವೆ. ಎರಡು ಮನೆಯ ಕುಟುಂಬ ಸದಸ್ಯರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಳಗಾವಿಯಲ್ಲೂ ಭಾರೀ ಮಳೆಯಾಗಿದ್ದು ಕೆಲವೆಡೆ ಅನಾಹುತ ಸಂಭವಿಸಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button