
ಪ್ರಗತಿವಾಹಿನಿ ಸುದ್ದಿ. ಇಂದಿನಿಂದ ಜುಲೈ 29ರವರೆಗೆ ಒಂದು ತಿಂಗಳ ಕಾಲ ರಾಜ್ಯಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಆರಂಭವಾಗಿದೆ. ಸಾರ್ವಜನಿಕರ ದೂರು ಹಾಗೂ ಗೊಂದಲಗಳ ನಿವಾರಣೆಗಾಗಿ ಬೆಂಗಳೂರು ನಗರ ಜಿಲ್ಲಾಡಳಿತವು ವಿಶೇಷ ಸಹಾಯವಾಣಿ ಕೇಂದ್ರ, ಸಂಖ್ಯೆ ಹಾಗೂ ಇ-ಮೇಲ್ ಸೌಲಭ್ಯವನ್ನು ಆರಂಭಿಸಿದೆ.
ಭಾರತೀಯ ಚುನಾವಣಾ ಆಯೋಗದ ಸೂಚನೆ ಮೇರೆಗೆ ಎಸ್ ಐಆರ್ ಆರಂಭವಾಗಿದೆ. ಇಂದಿನಿಂದ ಜುಲೈ 29ರವರೆಗೆ ಒಂದು ತಿಂಗಳ ಕಾಲ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಾರೆ. ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಅಹವಾಲುಗಳ ನಿವಾರಣೆ, ದೂರು ಸಲ್ಲಿಕೆ ಹಾಗೂ ಸ್ಪಷ್ಟೀಕರಣಕ್ಕಾಗಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಶೇಷ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಅಪರ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಕಾಂತರಾಜು ಪಿ.ಎಸ್. ತಿಳಿಸಿದ್ದಾರೆ.
ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ 7 ವಿಧಾನಸಭಾ ಕ್ಷೇತ್ರಗಳಾದ ಯಲಹಂಕ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹದೇವಪುರ, ಬೆಂಗಳೂರು ದಕ್ಷಿಣ ಮತ್ತು ಆನೇಕಲ್ ಕ್ಷೇತ್ರಗಳ ಸಾರ್ವಜನಿಕರು ಈ ಸಹಾಯವಾಣಿ ಸೌಲಭ್ಯವನ್ನು ಬಳಸಿಕೊಳ್ಳಬಹುದು. ಮತದಾರರು ತಮ್ಮ ಅಹವಾಲುಗಳಿಗಾಗಿ ಕಚೇರಿ ವೇಳೆಯಲ್ಲಿ ಸಹಾಯವಾಣಿ ಸಂಖ್ಯೆ 080-22967200 ಗೆ ಕರೆ ಮಾಡಬಹುದು ಅಥವಾ [email protected] ಗೆ ಇ-ಮೇಲ್ ಕಳುಹಿಸಬಹುದು. ಇದಲ್ಲದೆ ಜಿಲ್ಲಾಧಿಕಾರಿಗಳ ಅಧಿಕೃತ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ (Deputy Commissioner, Bengaluru Urban), ಇನ್‌ಸ್ಟಾಗ್ರಾಮ್ (dc_bangalore_urban) ಮತ್ತು ಎಕ್ಸ್ (DC_blrurban) ಮೂಲಕವೂ ಸಂಪರ್ಕಿಸಬಹುದಾಗಿದೆ.
ನಿಮ್ಮ ವೋಟರ್ ಐಡಿಯಲ್ಲಿ ಹೆಸರು, ವಿಳಾಸ ತಪ್ಪುಗಳಿದ್ದರೆ ಸೂಕ್ತ ತಿದ್ದುಪಡಿ ಮಾಡಲು, 18 ವರ್ಷ ತುಂಬಿದ ಹೊಸ ಮತದಾರರ ಹೆಸರು ಸೇರಿಸಲು ಹಾಗೂ ವಲಸೆ ಹೋದವರು ಅಥವಾ ಮೃತಪಟ್ಟವರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲು ಬಿಎಲ್‌ಒಗಳು ಮನೆಗೆ ಬಂದಾಗ ಎಸ್‌ಐಆರ್ (SIR) ಅರ್ಜಿಯನ್ನು ನೀಡಲಿದ್ದಾರೆ. ಸಾರ್ವಜನಿಕರು ಈ ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡಿ, ಸಹಿ ಹಾಕಿ, ಅಗತ್ಯ ದಾಖಲೆಗಳಾದ ಕುಟುಂಬ ಸದಸ್ಯರ ಗುರುತಿನ ಚೀಟಿ, ವೋಟರ್ ಐಡಿ, ಆಧಾರ್ ಕಾರ್ಡ್, ವಾಸಸ್ಥಳ ದೃಢೀಕರಣ ಪತ್ರ ಹಾಗೂ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಸ್ಥಳದಲ್ಲೇ ಅಧಿಕಾರಿಗಳಿಗೆ ನೀಡಬೇಕು. ಒಂದಕ್ಕಿಂತ ಹೆಚ್ಚು ಕಡೆ ನೋಂದಣಿಯಾಗಿದ್ದರೆ ಅಥವಾ ವಂಶಾವಳಿ ಜೋಡಣೆಯಾಗದಿದ್ದರೆ ಅಂತಹ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ.


