*ವಾಣಿಜ್ಯ ನಗರಿಯಲ್ಲಿ ಅಂತರಾಷ್ಟ್ರೀಯ ಗಾಳಿಪಟ ಉತ್ಸವ, ಸಾಂಸ್ಕ್ರತಿಕ- ಕ್ರೀಡೋತ್ಸವ ಕಲರವ*
ಅರ್ಜುನ್ ಜನ್ಯಾ ಸಂಗೀತ ತಂಡದಿಂದ ಗಾನ ಸುಧೆ
ಪ್ರಗತಿವಾಹಿನಿ ಸುದ್ದಿ: ‘ಹುಬ್ಬಳ್ಳಿ-ಧಾರವಾಡ’ ಹತ್ತಿಪ್ಪತ್ತು ಕಿಲೋಮೀಟರ್ ಅಂತರದ ಅವಳಿ ನಗರಗಳು. ಒಂದು ವಾಣಿಜ್ಯ ನಗರಿಯಾದರೆ ಮತ್ತೊಂದು ವಿದ್ಯಾಕಾಶಿ- ಸಾಂಸ್ಕ್ರತಿಕ ನಗರಿ.
‘ಹುಬ್ಬಳ್ಳಿ’ ಎಂದಾಕ್ಷಣ ಮಿನಿ ಬಾಂಬೆ ಚಿತ್ರಣ ಕಣ್ಣ ಮುಂದೆ ಹಾಯುತ್ತದೆ. ಇನ್ನು ಧಾರವಾಡ ಎಂದರೆ ವಿದ್ಯಾ ದೇಗುಲಗಳು, ಸಾಂಸ್ಕ್ರತಿಕ ಹೆಗ್ಗುರುತುಳ್ಳ ಜಿಲ್ಲಾ ಕೇಂದ್ರ.
ಆದರೆ, ಹತ್ತಾರು ವರ್ಷಗಳಿಂದ ಅವಳಿ ನಗರ ಶೈಕ್ಷಣಿಕ ಮತ್ತು ಸಾಂಸ್ಕ್ರತಿಕವಾಗಿ ಒಂದೇ ದೋಣಿಯಲ್ಲಿ ಸಾಗುತ್ತಿವೆ.
ಹುಬ್ಬಳ್ಳಿ- ಧಾರವಾಡ ಭೌಗೋಳಿಕ ಮತ್ತು ವಾಣಿಜ್ಯಿಕವಾಗಿ ತುಸು ಭಿನ್ನ-ವಿಭಿನ್ನ ಎನಿಸಿದರೂ ವೈದ್ಯಕೀಯ, ಶಿಕ್ಷಣ, ಕ್ರೀಡೆ, ಸಾಂಸ್ಕ್ರತಿಕವಾಗಿ ಒಂದೇ ದೋಣಿಯಲ್ಲಿ ಕಾಲಿಟ್ಟಿವೆ.
ಇದಕ್ಕೆ ನಿದರ್ಶನ ಎಂಬಂತೆ ವಾಣಿಜ್ಯ ನಗರಿ ಹುಬ್ಬಳ್ಳಿ ಒಂದು ಅದ್ಧೂರಿ ಸಾಂಸ್ಕ್ರತಿಕ ಮಹೋತ್ಸವ ಮತ್ತು ಕ್ರೀಡೋತ್ಸವಕ್ಕೆ ಸಾಕ್ಷಿಯಾಗಿದೆ. ಅಷ್ಟೇ ಅಲ್ಲದೇ, ಐತಿಹಾಸಿಕ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದ ಉಮೇದಿನಲ್ಲಿದೆ ಚೋಟಾ ಮುಂಬೈ.
ಹೌದು, ಹುಬ್ಬಳ್ಳಿ ಶಹರ ಈಗ ಸಂಸದ ಸಾಂಸ್ಕ್ರತಿಕ ಮಹೋತ್ಸವ, ಸಂಗೀತ ಮತ್ತು ಗಾಳಿಪಟ ಉತ್ಸವ, ಮಲ್ಲಗಂಬ ಕ್ರೀಡೆ, ಚಿತ್ರಕಲೆ ಸ್ಪರ್ಧೆಗಳಿಗೆ ವರ್ಣ ರಂಜಿತವಾಗಿದೆ.
ನಗರದ ಕೇಶ್ವಪುರ ಕುಸುಗಲ್ ರಸ್ತೆಯಲ್ಲಿರುವ ಆಕ್ಸಫರ್ಡ್ ಕಾಲೇಜು ಮೈದಾನದಲ್ಲಿ ಸಾಂಸ್ಕ್ರತಿಕ, ಕ್ರೀಡೆ, ಸಂಗೀತೋತ್ಸವ ಝೇಂಕರಿಸುತ್ತಿದೆ.
ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಹಬ್ಬದ ವಾತಾವರಣ ಸೃಷ್ಟಿಯಾಗಿದೆ ಇಲ್ಲಿ. 27, 28 ರಂದು ಅಂತರಾಷ್ಟ್ರೀಯ ಗಾಳಿಪಟ ಉತ್ಸವದ ಮೆರುಗು. ಸುಮಾರು 15 ರಾಷ್ಟ್ರಗಳ 35ಕ್ಕೂ ಹೆಚ್ಚು ಗಾಳಿಪಟ ಸ್ಪರ್ಧಿಗಳು ಭಾಗವಹಿಸತೊಡಗಿದ್ದಾರೆ. ಆಗಸದಲ್ಲಿ ಬಣ್ಣ ಬಣ್ಣದ ಅತ್ಯಾಕರ್ಷಕ ಗಾಳಿಪಟಗಳು ಹಾರಾಡುತ್ತ ಪ್ರೇಕ್ಷಕರ ಮನರಂಜಿಸಲು ಇನ್ನು ಕ್ಷಣ ಮಾತ್ರ.
ಇನ್ನು, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ತಂಡ, ಬಾಲಿವುಡ್ ನ ಖ್ಯಾತ ಗಾಯಕ ಜುಬಿನ್ ನೌಟಿಯಲ್ ಅವರಿಂದ ಸಂಗೀತ ಸುಧೆ ಇರಲಿದೆ. ಇದರ ಜತೆಗೆ ಮಲ್ಲಗಂಬ ಕ್ರೀಡೆ ಆಯೋಜಿಸಿದೆ.
ಇದೆಲ್ಲದರ ರೂವಾರಿ ಕೇಂದ್ರ ಸಂಸದೀಯ ಮತ್ತು ಕಲ್ಲಿದ್ದಲು ಸಚಿವ ಹಾಗೂ ಧಾರವಾಡ ಸಂಸದ ಪ್ರಹ್ಲಾದ ಜೋಶಿ ಅವರು. ಕಳೆದ ಅನೇಕ ವರ್ಷಗಳಿಂದಲೂ ಜೋಶಿ ಅವರು ಸಾಂಸ್ಕ್ರತಿಕ ಮತ್ತು ಕ್ರೀಡಾಕೂಟಗಳಿಗೆ ಉತ್ತೇಜನ ನೀಡುತ್ತಲೇ ಬಂದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ