ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ತಾಯಿಯ ಹಾಲು ಅಮೃತಕ್ಕೆ ಸಮಾನ. ತನ್ನೊಡಲಿನಲ್ಲಿ ಮತ್ತೊಂದು ಜೀವಕ್ಕೆ ಜೀವ ನೀಡುವ ಅದ್ಭುತ ವರವು ಸ್ತ್ರೀ ಸಂಕುಲಕ್ಕೆ ದೈವದತ್ತವಾಗಿ ಬಂದಿದ್ದು ಅದನ್ನು ಸಾರ್ಥಕತೆಯತ್ತ ಕೊಂಡೊಯ್ಯಲು ಶಿಶು ಜನಿಸಿದ ದಿನದಿಂದ ಸತತ ಆರು ತಿಂಗಳವರೆಗೆ ತಾಯಿಯ ಎದೆಹಾಲನ್ನು ಮಾತ್ರವಲ್ಲದೇ ಬೇರೆ ಏನನ್ನೂ ನೀಡಬಾರದು ಎಂದು ಯು ಎಸ್ ಎಮ್ ಕೆ ಎಲ್ ಇ ಯ ನಿರ್ದೇಶಕರಾದ ಡಾ. ಹೆಚ್ ಬಿ ರಾಜಶೇಖರ ತಿಳಿಸಿದ್ದಾರೆ.
ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಸ್ತ್ರೀ ರೋಗ ಹಾಗೂ ಪ್ರಸೂತಿ ವಿಭಾಗ ಮತ್ತು ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗ, ಬೆಳಗಾವಿ ಸ್ತ್ರೀ ರೋಗ ಹಾಗೂ ಪ್ರಸೂತಿ ಅಸೋಸಿಯೇಶನ್ ಹಾಗೂ ಇನ್ನರ್ ವ್ಹೀಲ್ ಕ್ಲಬ್ ಆಪ್ ಬೆಳಗಾವಿಯ ಸಹಯೋಗದಲ್ಲಿ ನಡೆದ ವಿಶ್ವ ಸ್ತನಪಾನ ದಿನಾಚರಣೆಯ ಕಾರ್ಯಕ್ರಮದ ಅಂಗವಾಗಿ ಮಾತನಾಡುತ್ತಿದ್ದರು.
ತಾಯಿಯ ಎದೆ ಹಾಲು ಮಗುವಿಗೆ ನೈಸರ್ಗಿಕವಾಗಿ ಸಿಗುವ ಹಾಗೂ ಪೌಷ್ಟಿಕಾಂಶಗಳಿಂದ ಸಮೃದ್ದವಾದ ಆಹಾರವಾಗಿದ್ದು ಇದರ ಬಗ್ಗೆ ತಪ್ಪು ತಿಳುವಳಿಕೆಗಳನ್ನು ಹೊಂದದೇ ತಮ್ಮ ಶಿಶುವಿಗೆ ಎದೆ ಹಾಲು ನೀಡಿರಿ ಎಂದು ಕರೆ ನೀಡಿದರು.
ಕಾರ್ಯಕ್ರಮದ ಇನ್ನೊಬ್ಬ ಅತಿಥಿಯಾಗಿ ಆಗಮಿಸಿದ್ದ ಇನ್ನರವ್ಹೀಲ್ ಕ್ಲಬ್ ಆಪ್ ಬೆಳಗಾವಿ ಅಧ್ಯಕ್ಷೆ ಡಾ. ಸುಶ್ಮಾ ಶೆಟ್ಟಿ ಮಾತನಾಡುತ್ತ ಇತ್ತೀಚಿನ ದಿನಗಳಲ್ಲಿ ತಾಯಿಯು ತನ್ನ ಮಗುವಿಗೆ ಹಾಲುಣಿಸುವ ಬಗ್ಗೆ ಹಲವಾರು ದ್ವಂದ್ವಗಳಿರುತ್ತವೆ. ಇವುಗಳನ್ನೆಲ್ಲ ಮೆಟ್ಟಿ ನಿಂತು ಯಾವುದೇ ಅಳುಕಿಲ್ಲದೆ ಪ್ರತಿಯೊಬ್ಬ ತಾಯಿಯು ತನ್ನ ಮಗುವಿಗೆ ಕಡ್ಡಾಯವಾಗಿ ಹಾಲುಣಿಸಬೇಕು. ಒಂದು ವೇಳೆ ಎದೆ ಹಾಲಿನ ಸಮಸ್ಯೆಗಳೇನಾದರು ಇದ್ದರೆ ತಕ್ಷಣ ತಮ್ಮ ಸಮೀಪದ ವೈದ್ಯರನ್ನು ಸಂಪರ್ಕಿಸಬೇಕು ಎಂದು ತಿಳಿಹೇಳಿದರು.
ಕಾರ್ಯಕ್ರಮದ ಮತ್ತೊಬ್ಬ ಅತಿಥಿಯಾಗಿ ಆಗಮಿಸಿದ್ದ ಹಿರಿಯ ವೈದ್ಯರಾದ ಡಾ. ಸಿ ಎನ್ ತುಗಶೆಟ್ಟಿ ಅವರು ಮಾತನಾಡುತ್ತ ಗರ್ಭಾವಸ್ಥೆಯಿಂದಲೇ ಪ್ರತಿಯೊಬ್ಬ ತಾಯಿಯು ಪೌಷ್ಟಿಕಾಂಶವುಳ್ಳ ಲವಣ ಹಾಗೂ ರಸಾತ್ಮಕ ಆಹಾರವನ್ನು ಸೇವಿಸಬೇಕು. ಒಳ್ಳೆಯ ಆಹಾರವನ್ನು ಸೇವಿಸುತ್ತಿದ್ದರೆ ಮಗುವಿಗೆ ಸಾಕಾಗುವಷ್ಟು ಹಾಲು ಉತ್ಪನ್ನವಾಗುತ್ತದೆ. ತಾಯಿಯ ಎದೆಯ ಹಾಲು ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಅಗತ್ಯವಾದ ಪೌಷ್ಟಿಕಾಂಶಗಳು, ಮಿನರಲ್, ಪ್ರೋಟೀನ ನ ಅಂಶಗಳನ್ನು ಹೊಂದಿರುತ್ತದೆ. ಶಿಶು ಜನಿಸಿದ ನಂತರದ ಆರುತಿಂಗಳವರೆಗೆ ಕೇವಲ ಎದೆಹಾಲನ್ನಷ್ಟೇ ಅಲ್ಲದೇ ಬೇರೆ ಏನನ್ನೂ ನೀಡಬಾರದು. ಸತತ ಎದೆಹಾಲಿನ ಸೇವನೆಮಾಡಿದ ಮಗುವು ದೇಶದ ಸತ್ಪ್ರಜೆಯಾಗುವದರಲ್ಲಿ ಎರಡು ಮಾತಿಲ್ಲ ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕ ಡಾ. ಎಸ್ ಸಿ ಧಾರವಾಡ ಮಾತನಾಡುತ್ತ ತಾಯ್ತನವೆಂಬುವುದು ಒಂದು ಅನನ್ಯ ಅನುಭವವಾಗಿದ್ದು ಶಿಶು ಜನನದಿಂದ ಹಿಡಿದು ಅದನ್ನು ದೇಶದ ಸತ್ಪ್ರಜೆಯಾಗಿ ನೀರ್ಮಿಸುವಲ್ಲಿ ತಾಯಿಯ ಪಾತ್ರವು ಅತ್ಯಮೂಲ್ಯವಾಗಿದೆ. ಅದರಲ್ಲೂ ಕಳೆದ ಕೊರೊನಾ ಅವಧಿಯಲ್ಲಿ ಎಷ್ಟೋ ಮಕ್ಕಳು ತಮ್ಮ ತಾಯಂದಿರನ್ನು ಪೋಷಕರನ್ನು ಕಳೆದುಕೊಂಡು ಅನಾಥವಾಗಿವೆ. ಇಂದು ಎಂತಹ ಪರಿಸ್ಥಿತಿ ಎದುರಾಗಿದೆ ಎಂದರೆ ಈ ರೀತಿಯಾಗಿ ಅನಾಥವಾದ ಮಕ್ಕಳಿಗೆ ಹಾಲನ್ನು ಹೊಂದಿರುವ ತಾಯಂದಿರು ತಮ್ಮ ಎದೆಹಾಲನ್ನು ನೀಡಿ ಅವರೂ ಸಹ ಒಬ್ಬ ಸತ್ಪ್ರಜೆಯಾಗಿ ಬೆಳೆಯಲು ಅನುವು ಮಾಡಿಕೊಡಿರಿ ಎಂದು ಒಬ್ಬ ಪ್ರಜ್ಞಾವಂತ ಪ್ರಜೆ ಕೇಳಿಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿದ್ದ ಡಾ. ಸತೀಶ ಧಾಮನಕರ ಎದೆಹಾಲುಣ್ಣಿಸುವ ಬಗ್ಗೆ ಜಾಗೃತಿ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು. ವೈದ್ಯ ವಿದ್ಯಾರ್ಥಿ ಡಾ. ಪೂಜಾ ಪಾಠಕ ಸ್ತನಪಾನದಿಂದ ಮಕ್ಕಳ ಮೇಲೆ ಆಗುವ ಉಪಯೋಗಗಳ ಬಗ್ಗೆ ಮಾತನಾಡಿದರು. ಡಾ. ಎಮ್ ಎಸ್ ಕಡ್ಡಿ ಹಾಲುಣಿಸುವ ಮಹತ್ವದ ಕುರಿತು ತಾಯಂದಿರ ದ್ವಂದ್ವಗಳನ್ನು ಪ್ರಶ್ನೋತ್ತರಗಳ ಮೂಲಕ ದೂರಮಾಡಿದರು.
ಕಾರ್ಯಕ್ರಮದಲ್ಲಿ ಸುಮಾರು 30 ಕ್ಕೂ ಅಧಿಕ ತಾಯಂದಿರು ತಮ್ಮ ಮಕ್ಕಳ ಜೊತೆಗೆ ಭಾಗವಹಿಸಿದ್ದರು. ಅವರಿಗೆಲ್ಲ ಇನ್ನವ್ಹೀಲ್ ಕ್ಲಬ್ ನ ವತಿಯಿಂದ ತಾಯಂದಿರಿಗೆ ಮಕ್ಕಳಿಗಾಗಿ ತಯಾರಿಸಿದ ಉಡುಪಿನ ಕಿಟ್ ಉಚಿತವಾಗಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಇನ್ನರವ್ಹೀಲ್ ಕ್ಲಬ್ ನ ಖಜಾಂಚಿ ಡಾ. ಸವಿತಾ ಕದ್ದು ಮತ್ತಿತರೆ ಪದಾಧಿಕಾರಿಗಳು, ಕೆ ಎಲ್ ಇ ಹೊಮಿಯೊಪಥಿಕ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಮ್ ಎ ಉಡಚನಕರ ಹಾಗು ಯು ಎಸ್ ಎಮ್ ಕೆ ಎಲ್ ಇ ಯ ವೈದ್ಯ ವಿದ್ಯಾರ್ಥಿಗಳು, ಕೆ ಎಲ್ ಇ ಸೆಂಟಿನರಿ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ ನ ವಿದ್ಯಾರ್ಥಿಗಳು. ಆರೋಗ್ಯ ಸಹಾಯಕ ವಿದ್ಯಾರ್ಥಿನಿಯರು ಹಾಗೂ ಆಸ್ಪತ್ರೆಯ ಇನ್ನಿತರೆ ಸಿಬ್ಬಂದಿ ಭಾಗವಹಿಸಿದ್ದರು.
ಕಾರ್ಯಕ್ರವವನ್ನು ಸಂತೋಷ ಇತಾಪೆ ನಿರೂಪಿಸಿದರು. ಸ್ತ್ರೀ ರೋಗ ಹಾಗೂ ಪ್ರಸೂತಿ ವಿಭಾಗದ ಮುಖ್ಯಸ್ಥೆ ಡಾ. ರಾಜೇಶ್ವರಿ ಕಡಕೋಳ ಸ್ವಾಗತಿಸಿದರು. ಅರುಣ ನಾಗಣ್ಣವರ ವಂದಿಸಿದರು.
ವೀಕ್ ಎಂಡ್ ಕರ್ಫ್ಯೂ: ಸಂಚಾರ ಸಂಪೂರ್ಣ ನಿರ್ಬಂಧ: ಇಲ್ಲಿದೆ ಸಮಗ್ರ ಮಾರ್ಗಸೂಚಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ