EducationKannada NewsKarnataka NewsLatest

*ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ 12 ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ*

ಪ್ರಗತಿವಾಹಿನಿ ಸುದ್ದಿ : ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಗೆ ಸಂಬಂಧಿಸಿದ 12 ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಲೋಕಾಯುಕ್ತ ನ್ಯಾ.ಬಿ.ಎಸ್. ಪಾಟೀಲ್ ಆದೇಶದ ಮೇರೆಗೆ ಈ ದಾಳಿ ನಡೆದಿದೆ. ಲೋಕಾಯುಕ್ತ ಅಧಿಕಾರಿಗಳು ಶಿಕ್ಷಣ ಇಲಾಖೆಯ ಬೆಂಗಳೂರಿನ ಜಂಟಿ ನಿರ್ದೇಶಕರ (ಆಡಳಿತ) ಕಚೇರಿ, ಉಪ ನಿರ್ದೇಶಕರ (ಸಾರ್ವಜನಿಕ ಶಿಕ್ಷಣ ಇಲಾಖೆ) ಕಚೇರಿ ಹಾಗೂ 9 ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳು ಸೇರಿದಂತೆ ಒಟ್ಟು 12 ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಈ ವೇಳೆ ಕೆಲವು ದಾಖಲೆಗಳನ್ನು ವಶ ಪಡಿಸಿಕೊಂಡಿದ್ದಾರೆ.

ಅಧಿಕಾರಿಗಳಿಗೆ ಬೆಂಗಳೂರು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯಲ್ಲಿ ಭ್ರಷ್ಟಾಚಾರ ಮತ್ತು ಕರ್ತವ್ಯ ಲೋಪದ ಬಗ್ಗೆ ದೂರು ಬಂದಿತ್ತು ಎನ್ನಲಾಗಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ನೌಕರರು ಲಂಚಕ್ಕಾಗಿ ಸಾರ್ವಜನಿಕರನ್ನು ಹಾಗೂ ಶಿಕ್ಷಕರನ್ನು ಪೀಡಿಸುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದಿದ್ದವು.

ಅಷ್ಟೇ ಅಲ್ಲದೇ ಖಾಸಗಿ ಶಾಲೆಗಳ ನೋಂದಣಿ, ಮಾನ್ಯತೆ ನವೀಕರಣ ಮಾರ್ಗಸೂಚಿಗಳ ಉಲ್ಲಂಘನೆ ಮತ್ತು ಲಂಚಕ್ಕೆ ಬೇಡಿಕೆ ಇಟ್ಟಿರುವುದು, ಮಕ್ಕಳ ಸುರಕ್ಷತೆಯ ಹೆಸರಿನಲ್ಲಿ ಖಾಸಗಿ ಶಾಲೆಗಳಿಗೆ ಅನಗತ್ಯ ಭೇಟಿ ನೀಡಿ ಕಿರುಕುಳ ನೀಡುತ್ತಿರುವುದು, ಅತಿಥಿ ಶಿಕ್ಷಕರ ಗೌರವ ಧನ ಮಂಜೂರಾತಿಯಲ್ಲೂ ಭ್ರಷ್ಟಾಚಾರ ನಡೆದಿರುವುದು, ಶಾಲೆಗಳ 100 ಮೀಟ‌ರ್ ವ್ಯಾಪ್ತಿಯಲ್ಲಿ ತಂಬಾಕು ಮತ್ತು ಮದ್ಯ ಮಾರಾಟ ನಿಷೇಧವಿದೆ. ಆದರೂ ಕೆಲವು ಕಡೆಗಳಲ್ಲಿ ಈ ನಿಯಮ ಪಾಲನೆಯಾಗದಿದ್ದರೂ ಅಧಿಕಾರಿಗಳು ಸುಮ್ಮನಿರುವುದು. ಶಾಲಾ ಆಟದ ಮೈದಾನ ಮತ್ತು ಕಟ್ಟಡಗಳ ಭೂ ಪರಿವರ್ತನೆಯಲ್ಲಿ ಅವ್ಯವಹಾರ ನಡೆದಿರುವುದರ ಕುರಿತು ಆರೋಪ ಕೇಳಿ ಬಂದಿತ್ತು.

Home add -Advt

ಈ ದೂರಿನ ಸತ್ಯಾಸತ್ಯತೆಯನ್ನು ಅರಿಯಲು ಲೋಕಾಯುಕ್ತ ಅಧಿಕಾರಿಗಳು ಗೌಪ್ಯ ತನಿಖೆ ನಡೆಸಿದ್ದರು. ಈ ವೇಳೆ ಆರೋಪಗಳಲ್ಲಿ ಹುರುಳಿದೆ ಎಂದು ಖಚಿತವಾದ ಬಳಿಕ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ದಾಳಿ ನಡೆಸಲಾಗಿದೆ ಎನ್ನಲಾಗುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಲೋಕಾಯುಕ್ತ ಅಧಿಕಾರಿಗಳು ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟಂತೆ ಕೆಲ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ತನಿಖೆಯ ನಂತರವಷ್ಟೇ ಯಾವ ಕಚೇರಿಯಲ್ಲಿ ಎಷ್ಟು ಪ್ರಮಾಣದ ಅಕ್ರಮ ನಡೆದಿದೆ ಎಂಬುದರ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.

Related Articles

Back to top button