
ಪ್ರಗತಿವಾಹಿನಿ ಸುದ್ದಿ: ಕಳ್ಳರಿಗೆ ದೇವರು, ದೇವಸ್ಥಾನ ಎಂಬ ಕಿಂಚಿತ್ತೂ ಭಯವಿಲ್ಲ, ಮನೆಯಾದರೇನು? ಮಂದಿರವಾದರೇನು? ಕಳ್ಳತನ ಮಾಡುವುದೇ ಅವರ ಕಾಯಕ. ಇಲ್ಲೋರ್ವ ಕಳ್ಳ ದೇವಸ್ಥಾನಕ್ಕೆ ಕಳ್ಳತನಕ್ಕೆಂದು ಬಂದವನು ಸಾಮಾನುಗಳನ್ನು ಕದ್ದು ರಾಶಿ ಹಾಕಿ ದೇವಸ್ಥಾನದೊಳಗೇ ನಿದ್ದೆಗೆ ಜಾರಿದೆ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
ಕಾಳಿ ದೇವಸ್ಥಾನದಲ್ಲಿ ಕಳ್ಳತನ ಮಾಡಲು ಬಂದ ಕಳ್ಳ ಇದ್ದಕ್ಕಿದ್ದಂತೆ ನಿದ್ದೆಗೆ ಜಾರಿದಾನೆ. ಪಶ್ಚಿಮ ಬಂಗಾಳದ ಸಿಂಗ್ ಭೂಮ್ ಮಾರುಕಟ್ಟೆ ಪ್ರದೇಶದ ಕಾಳಿ ಮಂದಿರದಲ್ಲಿ ಈ ಘಟನೆ ನಡೆದಿದೆ.
ವೀರ್ ನಾಯಕ್ ಎಂಬ ಕಳ್ಳ ತಡ ರಾತ್ರಿ ಕಾಳಿ ದೇವಸ್ಥಾನದ ಹಿಂಬದಿ ಬಾಗಿಲು ಮುರಿದು ದೇವಸ್ಥಾನಕ್ಕೆ ನುಗ್ಗಿದ್ದಾನೆ. ದೇವಸ್ಥಾದಲ್ಲಿದ ಬೆಲೆಬಾಳುವ ವಸ್ತುಗಳನ್ನೆಲ್ಲ ಒಂದೆಡೆ ಚೀಲ, ಕವರ್ ಗಳಲ್ಲಿ ತುಂಬಿದ್ದಾನೆ. ಇನ್ನೇನು ಪರಾರಿಯಾಗಬೇಕು ಎನ್ನುವಷ್ಟರಲ್ಲಿ ನಿದ್ದೆಗೆ ಜಾರಿದ್ದಾನೆ. ಗಡದ್ದಾಗಿ ನಿದ್ದೆಗೆ ಜಾರಿದ ಕಳ್ಲನಿಗೆ ಬೆಳಗಾದರೂ ಎಚ್ಚರವಾಗಿಲ್ಲ.
ಭಕ್ತರು, ಅರ್ಚಕರು ದೇವಸ್ಥಾನಕ್ಕೆ ಬಂದರೂ ಕಳ್ಳ ಎದ್ದಿಲ್ಲ. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಕಳ್ಳನನ್ನು ಎಚ್ಚರಗೊಳಿಸಿ ವಿಚಾರಿಸಿದಾಗ ಕಳ್ಳತನಕ್ಕೂ ಮೊದಲು ವೀರ್ ನಾಯಕ್ ಸ್ನೇಹಿತರೊಂದಿಗೆ ಮದ್ಯ ಸೇವಿಸಿದ್ದನಂತೆ. ಬಳಿಕ ದೇವಸ್ಥಾನದ ಗೋಡೆ ಹತ್ತಿ ಇಳಿದು ದೇವಸ್ಥಾನದ ಹಿಂಭಾಗದ ಬೀಗ ಮುರಿದು ಒಳನುಗ್ಗಿ ಕಳ್ಳತನ ಮಾಡಿದ್ದಾನೆ. ಬಳಿಕ ಕುಡಿದ ಮತ್ತಿನಲ್ಲಿ ಅಲ್ಲಿಯೇ ನಿದ್ದೆಗೆ ಜಾರಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.