*KPSC ನೇಮಕಾತಿಯಲ್ಲಿ ವಿಳಂಬ; ಅಭ್ಯರ್ಥಿಗಳೊಂದಿಗೆ ಧರಣಿಗೆ ಮುಂದಾದ ಸುರೇಶ್ ಕುಮಾರ್*
ಹೊಟ್ಟೆ ತುಂಬಿರುವ ಉದ್ಯೋಗ ಸೌಧದ ಒಳಗಿನ ಜನಕ್ಕೆ ಕೆಪಿ ಎಸ್ ಸಿ ಅಭ್ಯರ್ಥಿಗಳ ಬವಣೆ ಅರ್ಥವಾಗುತ್ತಿಲ್ಲ ಎಂದು ಆಕ್ರೋಶ
ಪ್ರಗತಿವಾಹಿನಿ ಸುದ್ದಿ: ಹೊಟ್ಟೆ ತುಂಬಿರುವ ಉದ್ಯೋಗ ಸೌಧದ ಒಳಗಿನ ಜನಕ್ಕೆ ಕೆಪಿ ಎಸ್ ಸಿ ಅಭ್ಯರ್ಥಿಗಳ ಬವಣೆ ಅರ್ಥವಾಗುತ್ತಿಲ್ಲ ಎಂದು ಆಕ್ರೋಶ ಇರುವ
ಕೆಪಿಎಸ್ ಸಿ ನೇಮಕಾತಿ ವಿಳಂಬ ಧೋರಣೆಯಿಂದ ನೊಂದಿರುವ ಅಭ್ಯರ್ಥಿಗಳು ಧರಣಿ ನಡೆಸಿದ್ದು, ಮಂಗಳವಾರ ಲೋಕಸೇವಾ ಆಯೋಗದ ಕಚೇರಿ ಮುಂದೆ ಶಾಸಕ ಸುರೇಶ್ ಕುಮಾರ್ ಕೂಡ ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಕೆಪಿಎಸ್ ಸಿ ಪರೀಕ್ಷೆ ಬರೆದ 150 ಕ್ಕೂ ಅಧಿಕ ಯುವಕ, ಯುವತಿಯರು ಶಾಸಕ ಸುರೇಶ್ ಕುಮಾರ್ ಕಚೇರಿಗೆ ಆಗಮಿಸಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕೆಪಿ ಎಸ್ ಸಿ ಅಭ್ಯರ್ಥಿಗಳ ಸಂಕಷ್ಟ ಆಲಿಸಿದ ಸುರೇಶ್ ಕುಮಾರ್, ನೇಮಕಾತಿ ವಿಳಂಬದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್ ಕುಮಾರ್, ಇವರೆಲ್ಲರೂ ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದ (KPSC ) ಕಾರ್ಯ ವೈಖರಿಯಿಂದ ನೊಂದಿರುವ ಸಂತ್ರಸ್ತ ಯುವ ಜನತೆ. ಅವರೆಲ್ಲರನ್ನು ಮತ್ತೆ ನೊಂದ, ಆತಂಕದ ಸ್ಥಿತಿಯಲ್ಲಿ ನೋಡಿ ನನಗೆ ನಿಜಕ್ಕೂ ವೇದನೆಯಾಯಿತು. ನಾನು ಇವರ ಪರಿಸ್ಥಿತಿ ವಿವರಿಸಿ ಈಗಾಗಲೇ ಮುಖ್ಯಮಂತ್ರಿಗಳಿಗೆ ಎರಡು ಪತ್ರ ಬರೆದಿದ್ದೇನೆ. ಖುದ್ದಾಗಿ ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿದ್ದೇನೆ. ಆಯೋಗದ ಕಾರ್ಯದರ್ಶಿಗಳ ಜೊತೆ ಮಾತನಾಡಿದ್ದೇನೆ. ಮುಖ್ಯಮಂತ್ರಿಗಳ ಕಾರ್ಯದರ್ಶಿಗಳ ಜೊತೆ ಈ ವಿಚಾರ ತಿಳಿಸಿದ್ದೇನೆ.
ರಾಜ್ಯದ ಹಿರಿಯ ಸಚಿವರಲ್ಲಿ ಒಬ್ಬರಾದ ಕೆ.ಜೆ.ಜಾರ್ಜ್ ರೊಂದಿಗೂ ಇವರ ಬವಣೆ ವಿವರಿಸಿದ್ದೇನೆ. “ಕೈಗೆ ಬಂದ ತುತ್ತು ಬಾಯಿಗಿಲ್ಲ” ಎಂಬ ಗಾದೆಗೆ ಸೂಕ್ತವಾಗಿದೆ ಇವರ ಇಂದಿನ ಸ್ಥಿತಿ – ಗತಿ. ಕೆಪಿಎಸ್ ಸಿ ಆಯೋಗದ ಮತ್ತು ಕಾರ್ಯದರ್ಶಿಗಳ ನಡುವಿನ ವಿರಸ ಈ ಯುವಕರನ್ನು ಅಕ್ಷರಶ: ಬೀದಿ ಪಾಲು ಮಾಡಿದೆ. ಇವರೆಲ್ಲ ಅದೆಷ್ಟು ಬಾರಿ ಕೆಪಿಎಸ್ಸಿ ಗೇಟಿನ ಬಳಿ ಹೋಗಿದ್ದಾರೋ ಲೆಕ್ಕವೇ ಇಲ್ಲ. ಇವರನ್ನು ಕೆಪಿಎಸ್‌ಸಿ ಗೇಟ್ ಒಳಗೆ ಬಿಡುವುದೂ ಇಲ್ಲ. ಇವರಿಗೆ ಸರಿಯಾದ ಮಾಹಿತಿ ದೊರಕುವುದೂ ಇಲ್ಲ. ದೂರ ದೂರದ ಊರುಗಳಿಂದ ತಮ್ಮ ನೇಮಕಾತಿ ಆದೇಶಕ್ಕಾಗಿ ಬರುವ ಸಮೂಹ ಅದೆಷ್ಟು ದುಡ್ಡು ಖರ್ಚು ಮಾಡಿಕೊಂಡಿದ್ದರೋ, ರಾತ್ರಿ ಹೊತ್ತು ಮಲಗಲು ಅದೆಷ್ಟು ಕಷ್ಟ ಪಟ್ಟಿದ್ದಾರೋ ತಿಳಿಯದು.
“ಉದ್ಯೋಗ ಸೌಧ” ಎಂದು ಹೆಸರಿಟ್ಟಿಕೊಂಡಿರುವ ಈ ಕಟ್ಟಡದಿಂದ ಈ ಯುವಕರಿಗೆ ನಿರಂತರ ಅನ್ಯಾಯವಾಗುತ್ತಿದೆ. ಇವರೆಲ್ಲ ರಾಜ್ಯದ ವಿವಿಧ ಇಲಾಖೆಗಳಲ್ಲಿ ಬಹಳ ದೀರ್ಘ ಸಮಯ ಕೆಲಸ ಮಾಡಬೇಕಿದೆ ಎಂಬುದನ್ನೂ ನಾವು ಗಮನಿಸಬೇಕು. ಇವರುಗಳು ಸಂಪೂರ್ಣ ಹತಾಶೆಗೊಂಡು ಸಿನಿಕರಾಗುವುದು ನಾಡಿನ ಆರೋಗ್ಯಕ್ಕೆ ಒಳಿತಲ್ಲ ಎಂದು ಕಿಡಿಕಾರಿದ್ದಾರೆ.
ನಾನು ಹೋಗಿ ಮಾತನಾಡಿದಾಗ ಆಯೋಗದ ಅಧ್ಯಕ್ಷರು ಅತ್ಯಂತ ವಿಶ್ವಾಸದ ಮಾತನ್ನು ಆಡುತ್ತಾರೆ. ಜೊತೆಗೆ ಕಾರ್ಯದರ್ಶಿಯಿಂದ ತಮಗೆ ಸಿಗದ ಸಹಕಾರದ ಬಗ್ಗೆಯೂ ವಿವರಿಸುತ್ತಾರೆ. ಈ ಸಂತ್ರಸ್ತ ಯುವಕರಿಗೆ ಇದು ಯಾವುದೂ ಬೇಕಾಗಿಲ್ಲ. ಅವರಿಗೆ ಬೇಕಾಗಿರುವುದು ತಮಗೆ ನ್ಯಾಯಯುತವಾಗಿ ಸಿಗಬೇಕಿರುವ ಫಲಿತಾಂಶ/ ನೇಮಕಾತಿ ಪತ್ರ ಮಾತ್ರ. ಆದರೆ ಹೊಟ್ಟೆ ತುಂಬಿರುವ ಉದ್ಯೋಗ ಸೌಧದ ಒಳಗಿನ ಜನಕ್ಕೆ ಕಟ್ಟಡದ ಹೊರಗಡೆ ಇರುವ ಈ ಯುವಕರ ಬವಣೆ ಅರ್ಥವಾಗುತ್ತಿಲ್ಲ. ಆದ್ದರಿಂದ ನಾಳೆ ಮಂಗಳವಾರ ಬೆಳಗ್ಗೆ 10 ಗಂಟೆಗೆ ನಾನೇ ಲೋಕ ಸೇವಾ ಆಯೋಗದಿಂದ ಯುವಕರ ಪರವಾಗಿ ನ್ಯಾಯ ಕೇಳಲು “ಉದ್ಯೋಗ ಸೌಧ” ದ ಮುಂದೆ ಕೂರುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ